More

    ಚುನಾವಣೆ ನೆಪ… ಅಭಿವೃದ್ಧಿಯ ಜಪ..

    ವಿಕ್ರಮ ನಾಡಿಗೇರ ಧಾರವಾಡ
    ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಮರು ವಿಂಗಡಣೆ ಬಳಿಕ ವಾರ್ಡ್​ಗಳ ಸಂಖ್ಯೆ ಮಾತ್ರ ಹೆಚ್ಚಳವಾಗದೆ, ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಯುವಕರಿಗೂ ಅವಕಾಶಗಳು ಸೃಷ್ಟಿಯಾದಂತಾಗಿದೆ. ಹೀಗಾಗಿ, ಈ ಬಾರಿಯ ಚುನಾವಣೆ ರೋಚಕ ಕಣವಾಗಿ ಮಾರ್ಪಡಲಿದೆ.
    ಧಾರವಾಡ ಗ್ರಾಮೀಣ (71 ವಿಧಾನಸಭಾ ಕ್ಷೇತ್ರ) ಹಾಗೂ ನಗರ ಪ್ರದೇಶ (74 ವಿಧಾನಸಭಾ ಕ್ಷೇತ್ರ)ದ ಸಮ್ಮಿಳಿತವಾಗಿರುವ 8ರಿಂದ 15 ವಾರ್ಡ್​ಗಳಲ್ಲಿ ಚುನಾವಣೆ ಕಾವು ರಂಗೇರತೊಡಗಿದೆ. ಬಹುತೇಕ ವಾರ್ಡ್​ಗಳಲ್ಲಿ ಈ ಹಿಂದಿನ ಸದಸ್ಯರಿಗೇ ಮಣೆ ಹಾಕಲಾಗಿದೆ. ಆದರೆ, ಮೀಸಲಾತಿ ಕಾರಣಕ್ಕೆ ಈ ಮುಂಚಿನ ಕ್ಷೇತ್ರದಿಂದ ವಂಚಿತರಾಗಿರುವ ಸದಸ್ಯರು ತಮ್ಮ ಮನೆ ಸದಸ್ಯರಿಗೆ ಅವಕಾಶ ನೀಡುವಂತೆ ಪಕ್ಷದ ಮುಖಂಡರಿಗೆ ದುಂಬಾಲು ಬೀಳುತ್ತಿದ್ದರೆ, ಹೊಸ ಮುಖಗಳು ನಾವೂ ಸ್ಪರ್ಧಿಸುತ್ತೇವೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ವಾರ್ಡ್​ಗಳಲ್ಲಿ ಕೆಲ ಪಕ್ಷಗಳು ಈಗಾಗಲೇ ಪ್ರಕಟಿಸಿರುವ ಅಂತಿಮ ಪಟ್ಟಿಯಲ್ಲಿ ಕೆಲ ಹೊಸಬರು ಸ್ಥಾನ ಪಡೆದಿರುವುದು ವಿಶೇಷ.
    ಈ ಎಲ್ಲ ವಾರ್ಡ್​ಗಳಲ್ಲಿ ಅಭಿವೃದ್ಧಿ ಕಾರ್ಯಗಳೇನೋ ನಡೆದಿವೆ. ಆದರೆ, ಬಹುತೇಕ ಕಾಮಗಾರಿಗಳು ಅರ್ಧಂಬರ್ಧ ಆಗಿವೆ. ಅದರಲ್ಲೂ ರಸ್ತೆ ಕಾಮಗಾರಿಗಳು ವಿಳಂಬವಾಗಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಜನರು ಸಹ ಅಭಿವೃದ್ಧಿ ವಿಷಯದಲ್ಲಿ ಇನ್ನಷ್ಟು ಕೆಲಸಗಳು ನಡೆಯಬೇಕು ಎಂದು ಹೇಳುವ ಮೂಲಕ ಸದ್ಯದ ಕಾರ್ಯಗಳು ತೃಪ್ತಿಕರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
    ಪ್ರಮುಖ ಪ್ರದೇಶಗಳಾದ ಗಾಂಧಿ ಚೌಕ್, ರವಿವಾರಪೇಟೆ, ಭೂಸಪ್ಪ ಚೌಕ್, ಮದಾರಮಡ್ಡಿ, ಜನತಾ ಪ್ಲಾಟ್, ನಾರಾಯಣಪುರ, ಸಾಧನಕೇರಿ, ಭಾರತಿನಗರ, ಕೆಲಗೇರಿ ರಸ್ತೆ, ಕೃಷಿನಗರ, ವಿಜಯಾನಂದನಗರ, ಸುಭಾಷ ರಸ್ತೆ, ಗೌಳಿಗಲ್ಲಿ, ಯು.ಬಿ. ಹಿಲ್, ಮಾಳಮಡ್ಡಿ, ಬಾರಾಕೋಟ್ರಿ ಈ ವಾರ್ಡ್​ಗಳ (8-15) ವಾಪ್ತಿಯಲ್ಲಿವೆ. ಬಹುತೇಕ ವಾರ್ಡ್​ಗಳಲ್ಲಿ ರಸ್ತೆ, ಒಳಚರಂಡಿ, ಬೀದಿದೀಪ, ನೀರು, ಕಸ ವಿಲೇವಾರಿ ಸಮಸ್ಯೆಗಳೇ ಜನರನ್ನು ಹೆಚ್ಚು ಕಾಡುತ್ತಿವೆ.
    ವಾರ್ಡ್ 15ರ ರೈಲ್ವೆ ಕಲ್ಯಾಣ ಮಂಟಪ ಬಳಿ ಕೆಲ ಸಮಯದ ಹಿಂದೆ ರಸ್ತೆ ಕುಸಿದು ಬೃಹತ್ ಕಂದಕ ನಿರ್ವಣವಾಯಿತು. ಆದರೂ ತ್ವರಿತವಾಗಿ ಸಂಪೂರ್ಣ ದುರಸ್ತಿ ಕಾರ್ಯ ನಡೆಸಿ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕೆಲಸ ನಡೆಯಲಿಲ್ಲ. ವಾರ್ಡ್ 8ರಲ್ಲಿನ ಕೋಳಿಕೆರೆ ಅಭಿವೃದ್ಧಿ ಜಪ ನಡೆದು ಹಲವು ವರ್ಷಗಳಾಗಿವೆ. ಯಾರೊಬ್ಬರೂ ಕಾಯಕಲ್ಪಕ್ಕೆ ಮುಂದಾಗದಿರುವುದು ಜನರಿಗೆ ಬೇಸರ ತರಿಸಿದೆ. ಈಗ ಮತ್ತೆ ಅಭಿವೃದ್ಧಿಯ ಜಪ ಶುರುವಾಗಿದೆ.
    ಪ್ರಬಲ ಪೈಪೋಟಿ: ವಾರ್ಡ್ ನಂ. 8ರಿಂದ 15 ವಾರ್ಡ್​ಗಳ ಪೈಕಿ ಕೆಲ ವಾರ್ಡ್​ಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೊಷಣೆ ಮಾಡಲಾಗಿದೆ. ಆದರೆ, ಕಾಂಗ್ರೆಸ್​ನಲ್ಲಿ ಟಿಕೆಟ್​ಗೆ ಪೈಪೋಟಿ ಹೆಚ್ಚಿರುವ ಕಾರಣಕ್ಕೆ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ. ವಾರ್ಡ್ ನಂ. 8ರಲ್ಲಿ ಕಾಂಗ್ರೆಸ್​ನಿಂದ ಪ್ರಕಾಶ ಘಾಟಗೆ, ಬಸವರಾಜ ಜಾಧವ ಪೈಪೋಟಿ ನಡೆಸಿದ್ದರೆ, ವಾರ್ಡ್ 10ರಲ್ಲಿ ಬಿಜೆಪಿಯಿಂದ ಬಲರಾಮ ಕುಸುಗಲ್, ಕಾಂಗ್ರೆಸ್​ನಿಂದ ನಿರ್ಮಲಾ ಸವದಿ, ಜಯಶ್ರೀ ಗೌಡಪ್ಪನವರ ಆಕಾಂಕ್ಷಿಯಾಗಿದ್ದಾರೆ. ವಾರ್ಡ್ 11ರಲ್ಲಿ ಬಿಜೆಪಿಯಿಂದ ಮಾಜಿ ಮೇಯರ್ ಪೂರ್ಣಾ ಪಾಟೀಲ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್​ನಿಂದ ಮಹೇಶ ಮುಳಗುಂದ, ಪ್ರತಾಪ ಚವ್ಹಾಣ, ಪೈಪೋಟಿ ನಡೆಸಿದ್ದಾರೆ. ವಾರ್ಡ್ 12ರಲ್ಲಿ ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ತಾವಶಿ, ಜೀವನ ಶೆಟ್ಟಿ, ವಾರ್ಡ್ 13ರಲ್ಲಿ ಆನಂದ ಜಾಧವ, ಹೇಮಂತ ಗುರ್ಲಹೊಸೂರ, ಅಜಿತ ಬೋಗಾರ ಆಕಾಂಕ್ಷಿಗಳಾಗಿದ್ದಾರೆ. ವಾರ್ಡ್ 14ರಲ್ಲಿ ಕಾಂಗ್ರೆಸ್​ನಿಂದ ಸುಭಾಷ ಶಿಂಧೆ, ಪ್ರತಾಪ ಚವ್ಹಾಣ, ಶಂಭು ಸಾಲಿಮನಿ ಆಕಾಂಕ್ಷಿಯಾಗಿದ್ದಾರೆ. ಇನ್ನು ವಾರ್ಡ್ 15ರಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ ಬಿಜೆಪಿಯಿಂದ ಸಂಜಯ ಕಪಟಕರ ಹಾಗೂ ಕಾಂಗ್ರೆಸ್​ನಿಂದ ಅನಿರುದ್ಧ ಚಿಂಚೋರೆ ಹೆಸರು ಅಂತಿಮ ಎಂಬ ಮಾತು ಕೇಳಿಬರುತ್ತಿವೆ.
    ಈಗಾಲೇ ತಮಗೆ ಟಿಕೆಟ್ ಖಚಿತ ಎಂದುಕೊಂಡಿರುವ ಹಳೇ ಸದಸ್ಯರು ಜನರೊಂದಿಗೆ ಸಮಾಲೋಚನೆ ನಡೆಸಿ ಪ್ರಚಾರಕ್ಕೆ ಚಾಲನೆ ನೀಡಿದ್ದರೂ, ಅಂತಿಮ ಪಟ್ಟಿ ಬಿಡುಗಡೆ ಬಳಿಕವೇ ಪೂರ್ಣ ಪ್ರಮಾಣದ ಪ್ರಚಾರ ನಡೆಸುವ ಯೋಚನೆ ಮಾಡಿದ್ದಾರೆ. ಇದರ ಮಧ್ಯೆ ಯುವಕರು ತಮಗೊಂದು ಅವಕಾಶ ನೀಡುವಂತೆ ಮುಖಂಡರ ದುಂಬಾಲು ಬಿದ್ದಿದ್ದಾರೆ. ಹೀಗೆ ಒಂದು ವಾರ್ಡ್​ನಲ್ಲಿ ಕನಿಷ್ಠ ನಾಲ್ಕೈದು ಜನ ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ನಾಯಕರು ಅರ್ಜಿದಾರರ ಕಾರ್ಯ ವೈಖರಿ, ಪಕ್ಷ ನಿಷ್ಠೆ… ಹೀಗೆ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಟಿಕೆಟ್ ಅಂತಿಮಗೊಳಿಸುವ ಚಿಂತನೆಯಲ್ಲಿದ್ದಾರೆ. ಇನ್ನು ಪಕ್ಷದ ಟಿಕೆಟ್ ಸಿಗದೇ ವಂಚಿತರಾಗುವ ಪ್ರಬಲ ಆಕಾಂಕ್ಷಿಗಳು ಪಕ್ಷೇತರರಾಗಿ ಸ್ಪರ್ಧೆ ನಡೆಸುವ ಮೂಲಕ ಸೆಡ್ಡು ಹೊಡೆಯುವ ಚಿಂತನೆಯನ್ನೂ ನಡೆಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ಕಾಣುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts