More

    ಸಿಟಿ ಟೂರ್ ಬಸ್ ಮರೀಚಿಕೆ

    ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯತ್ತ ಸಾಗುತ್ತಿದ್ದು, ಮಂಗಳೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಇರುವ ಸಿಟಿ ಟೂರ್ ಬಸ್ ಮರೀಚಿಕೆ. ಈ ಬಗ್ಗೆ ವರದಿ ಇಲ್ಲಿದೆ…

    ಹರೀಶ್ ಮೋಟುಕಾನ, ಮಂಗಳೂರು

    ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯತ್ತ ಸಾಗುತ್ತಿದ್ದು, ಮಂಗಳೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲು ಸಿಟಿ ಟೂರ್ ಬಸ್ ಕಲ್ಪಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ.

    ಜನವರಿಯಿಂದ ಮೇ ತಿಂಗಳ ತನಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಾರೆ. ಏಪ್ರಿಲ್, ಮೇ ತಿಂಗಳಿನಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಕುಟುಂಬ ಸಮೇತ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ಸಿಟಿ ಟೂರ್ ಬಸ್ ಇದ್ದರೆ ಹೆಚ್ಚು ಅನುಕೂಲ ಎಂದು ಮೂರು ವರ್ಷಗಳ ಹಿಂದೆಯೇ ಬೇಡಿಕೆ ಸಲ್ಲಿಸಲಾಗಿತ್ತು. ಈ ಉದ್ದೇಶದಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ. ಕೆಎಸ್‌ಟಿಡಿಸಿಯು ಪೂರಕ ಕ್ರಮ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಪ್ರಸ್ತಾವನೆ ಸಲ್ಲಿಕೆಯಾಗಿ ವರ್ಷ ಕಳೆದರೂ, ಆರಂಭಿಕ ಹಂತದ ಪ್ರಕ್ರಿಯೆಯೂ ನಡೆದಿಲ್ಲ.

    ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಸಾಮಾನ್ಯ ದಿನಗಳಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಹೀಗಿದ್ದಾಗ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಇಲ್ಲ. ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಚರಿಸುತ್ತಿರುವಂತೆಯೇ ಮಂಗಳೂರಿಗೂ ಪ್ರವಾಸಿ ಬಸ್ ಬೇಕೆಂದು ಹಲವರ ಬೇಡಿಕೆಯಾಗಿತ್ತು.

    ಉತ್ತಮ ಸ್ಪಂದನೆ

    ಐದು ವರ್ಷಗಳ ಹಿಂದೆ ನಗರದಲ್ಲಿ ಸಿಟಿ ಟೂರ್ ಬಸ್ ಇತ್ತು. ಈ ಬಸ್ ಲಾಲ್‌ಬಾಗ್‌ನಿಂದ ಹೊರಟು ಕುದ್ರೋಳಿ ದೇವಸ್ಥಾನ, ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ-ಜೈವಿಕ ಉದ್ಯಾನವನ, ತಣ್ಣೀರುಬಾವಿ ಟ್ರೀ ಪಾರ್ಕ್, ಕಡಲತೀರದಿಂದ ಪುನಃ ಲಾಲ್‌ಬಾಗ್‌ಗೆ ತೆರಳುತ್ತಿತ್ತು. ಕನಿಷ್ಠ 10 ಮಂದಿ ಬಸ್‌ನಲ್ಲಿರಬೇಕು ಎಂಬ ಷರತ್ತು ಇತ್ತು. ವಯಸ್ಕರಿಗೆ 190 ರೂ. ಮತ್ತು ವಿದ್ಯಾರ್ಥಿಗಳಿಗೆ ಶೇ.10 ರಿಯಾಯಿತಿ ನೀಡಲಾಗಿತ್ತು. ಆರಂಭದಲ್ಲಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಇತ್ತು. ಮಳೆಗಾಲ ಕೊನೆಗೊಳ್ಳುವುದರಲ್ಲಿ ಬಸ್ಸು ಕೆಟ್ಟು ನಿಂತಿತು. ಬಳಿಕ ಬಸ್ಸನ್ನು ಬೆಂಗಳೂರಿಗೆ ಸಾಗಿಸಲಾಯಿತು. ಮತ್ತೆ ಸಿಟಿ ಟೂರ್ ಬಸ್ ಮಂಗಳೂರಿಗೆ ಮತ್ತೆ ಬರಲಿಲ್ಲ.

    ಕಾರ್ಯರೂಪಕ್ಕೆ ಬಾರದ ಯೋಜನೆ

    ಕೆಎಎಸ್ಸಾರ್ಟಿಸಿ ಕಳೆದ ದಸರಾ ಮತ್ತು ದೀಪಾವಳಿ ಸಂದರ್ಭ ಪ್ರಮುಖ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಟೂರ್ ಪ್ಯಾಕೇಜ್ ಆಯೋಜಿಸಿತ್ತು. ಪ್ರವಾಸಿಗರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು. ಜನರಿಂದ ಬೇಡಿಕೆ ಇದ್ದು, ಅಡಳಿತ ವರ್ಗದಿಂದ ಪೂರಕ ಸ್ಪಂದನೆ ವ್ಯಕ್ತವಾಗದ ಕಾರಣ ಬೇಡಿಕೆ ಕಾರ್ಯರೂಪಕ್ಕೆ ಬಂದಿಲ್ಲ.


    ಮಂಗಳೂರು ಪರಿಸರದ ಪ್ರವಾಸಿ ತಾಣಗಳಿಗೆ ಬೆಂಗಳೂರು ಮಾದರಿಯಲ್ಲಿ ಸಿಟಿ ಟೂರ್ ಬಸ್ ಇದ್ದರೆ ಸ್ವಂತ ವಾಹನ ಇಲ್ಲದ ಜನಸಾಮಾನ್ಯರು ಕುಟುಂಬ ಸಮೇತ ಪ್ರವಾಸ ಮಾಡಲು ಅನುಕೂಲವಾಗುತ್ತದೆ. ಬಾಡಿಗೆ ವಾಹನ ದುಬಾರಿ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ.
    – ಹರಿಪ್ರಸಾದ್ ಉರ್ವಸ್ಟೋರ್ ಖಾಸಗಿ ಉದ್ಯೋಗಿ

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ಘಟಕದ ವತಿಯಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳ ದರ್ಶನಕ್ಕೆ ಸಿಟಿ ಟೂರ್ ಪ್ಯಾಕೇಜ್ ನಡೆಸಲು ಯೋಜನೆ ರೂಪಿಸಲಾಗುವುದು. ಪ್ರಯಾಣಿಕರ ಸ್ಪಂದನೆ ಪರಿಗಣಿಸಿ ಅವಧಿ ನಿರ್ಧರಿಸಲಾಗುವುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ ಕೂಡಲೇ ಯೋಜನೆ ಕಾರ್ಯಗತಗೊಳ್ಳಲಿದೆ.
    – ರಾಜೇಶ್ ಶೆಟ್ಟಿ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts