More

    ಬೇಸಿಗೆ ರಜೆಯಲ್ಲಿ ಕುಟುಂಬ ಪ್ರವಾಸಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥೆ

    ಬೇಸಿಗೆ ರಜೆಯಲ್ಲಿ ಕುಟುಂಬ ಪ್ರವಾಸಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥೆ ರೂಪಿಸಿದ್ದು, ಈ ಬಗ್ಗೆ ಸಮಗ್ರ ವರದಿ ಇಲ್ಲಿದೆ -ಹರೀಶ್ ಮೋಟುಕಾನ, ಮಂಗಳೂರು

    ಪಿಯುಸಿ ಪರೀಕ್ಷೆ ಮುಗಿದಿದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏ.15ರಂದು ಕೊನೆಗೊಳ್ಳಲಿದೆ. ಶಾಲಾ, ಕಾಲೇಜುಗಳಿಗೆ ಬೇಸಿಗೆ ರಜೆ ಆರಂಭಗೊಂಡಿದೆ. ಬಹುತೇಕರು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಹೋಗುವ ಕಾಲ. ಇದಕ್ಕಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಈ ಬಾರಿಯೂ ಪ್ರೇಕ್ಷಣೀಯ ಸ್ಥಳಗಳಿಗೆ ವಾರಾಂತ್ಯದಲ್ಲಿ ವಿಶೇಷ ಟೂರ್ ಪ್ಯಾಕೇಜ್ ಹಮ್ಮಿಕೊಂಡಿದೆ.

    ಮಡಿಕೇರಿ ಹಾಗೂ ಮುರ್ಡೇಶ್ವರಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಬಿಜೈ ಬಸ್ ತಂಗುದಾಣದಿಂದ ವಿಶೇಷ ಬಸ್‌ಗಳು ಹೊರಡಲಿದೆ. ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಮಡಿಕೇರಿಯಲ್ಲಿ ರಾಜಾಸೀಟ್, ಅಬ್ಬಿಫಾಲ್ಸ್, ಗೋಲ್ಡನ್ ಟೆಂಪಲ್, ಮುರ್ಡೇಶ್ವರ ಹಾದಿಯಲ್ಲಿ ಸಿಗುವ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಇರಲಿದೆ. ಜನಸಾಮಾನ್ಯರಿಗೆ ಕುಟುಂಬ ಸಮೇತರಾಗಿ ಪ್ರವಾಸ ಹೋಗಲು ಇದೊಂದು ಸದವಕಾಶ.

    ಕಳೆದ ಬಾರಿ ದಸರಾ ಹಾಗೂ ದೀಪಾವಳಿ ಸಂದರ್ಭ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಟೂರ್ ಪ್ಯಾಕೇಜ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕರಾವಳಿಯ ದೇಗುಲ ದರ್ಶನ, ಮಡಿಕೇರಿ ಮೊದಲಾದ ಕಡೆಗೆ ಪ್ಯಾಕೇಜ್ ಹಮ್ಮಿಕೊಳ್ಳಲಾಗಿತ್ತು. ಮುಂಬೈ, ಶಿವಮೊಗ್ಗ, ಬೆಂಗಳೂರು, ಶಿರಸಿ ಭಾಗಗಳಿಂದ ಪ್ರವಾಸಿಗಳು ಈ ವಿಶೇಷ ಪ್ಯಾಕೇಜ್ ಬಸ್‌ಗಳಲ್ಲಿ ಸಂಚರಿಸಿದ್ದಾರೆ. ವಿದೇಶಿ ಪ್ರವಾಸಿಗರೂ ಪ್ರಯಾಣ ಮಾಡಿದ್ದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರಿಗೆ ಕಲ್ಪಿಸಿದ ವ್ಯವಸ್ಥೆ ಶ್ಲಾಘನೆಗೆ ಪಾತ್ರವಾಗಿತ್ತು.

    ನಗರ ದರ್ಶನ ಯೋಜನೆ

    ಪ್ರಮುಖ ದೇಗುಲಗಳಾದ ಕುದ್ರೋಳಿ, ಕಟೀಲು, ಪೊಳಲಿ, ಮಂಗಳಾದೇವಿ, ಸಂಜೆಯ ವೇಳೆ ಬೀಚ್ ಭೇಟಿ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬೇಸಗೆ ರಜೆಯಲ್ಲಿ ಸಿಟಿ ಬಸ್ ಟೂರ್ ಪ್ಯಾಕೇಜ್ ಆಯೋಜಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಐದು ವರ್ಷಗಳ ಹಿಂದೆ ನಗರದಲ್ಲಿ ಸಿಟಿ ಟೂರ್ ಬಸ್ ಸಂಚಾರ ವ್ಯವಸ್ಥೆ ಇತ್ತು. ಪ್ರವಾಸಿಗರಿಂದ ಉತ್ತಮ ಸ್ಪಂದನೆಯೂ ಇದ್ದರೂ, ಯೋಜನೆ ಸ್ಥಗಿತಗೊಂಡಿತ್ತು. ಮತ್ತೆ ಆರಂಭಿಸಬೇಕು ಎನ್ನುವ ಸಾರ್ವಜನಿಕರ ಬೇಡಿಕೆ ಇನ್ನೂ ಈಡೇರಿಲ್ಲ.

    ಬೇಸಗೆ ರಜಾ ಅವಧಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಉದ್ದೇಶದಿಂದ ವಾರಾಂತ್ಯದ ವಿಶೇಷ ಟೂರ್ ಪ್ಯಾಕೇಜ್ ಆಯೋಜಿಸಲಾಗುವುದು. ದಿನಾಂಕ ನಿರ್ಧರಿಸಿ ಏ.15ರ ಬಳಿಕ ಪ್ರಕಟಣೆ ಹೊರಡಿಸಲಾಗುವುದು. ಪ್ರವಾಸಿಗರು ಇದರ ಸದುಪಯೋಗ ಪಡೆಯಬಹುದು.
    – ರಾಜೇಶ್ ಶೆಟ್ಟಿ ಡಿಸಿ, ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ


    ಕಳೆದ ದಸರಾ ಹಾಗೂ ದೀಪಾವಳಿ ಸಂದರ್ಭ ಕೆಎಸ್‌ಆರ್‌ಟಿಸಿ ಆಯೋಜಿಸಿದ್ದ ವಿಶೇಷ ಟೂರ್ ಪ್ಯಾಕೇಜ್‌ನಲ್ಲಿ ನಾವು ಕುಟುಂಬ ಸಮೇತ ಪ್ರಯಾಣಿಸಿ, ಖುಷಿ ಪಟ್ಟಿದ್ದೆವು. ಬೇಸಗೆ ರಜಾ ದಿನಗಳಲ್ಲಿ ಮತ್ತೆ ಈ ಯೋಜನೆ ರೂಪಿಸಿದರೆ ಸಂತೋಷ.
    – ಜಯರಾಮ ಪಿ.ಜಿ. ಖಾಸಗಿ ಸಂಸ್ಥೆ ಉದ್ಯೋಗಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts