More

    ದೂರು ನೀಡಿದ್ದ ದಲಿತ ಯುವಕ ನಾಪತ್ತೆ

    ಬಾಳೆಹೊನ್ನೂರು: ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಹಿಂದು ಸಂಘಟನೆ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ನೀಡಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ತಾಯಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಖಾಂಡ್ಯ ಹೋಬಳಿ ಉಜ್ಜಿನಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಏ.26ರಂದು ಮತದಾನ ವೇಳೆ ಘರ್ಷಣೆ ನಡೆದು ಬಜರಂಗದಳದ ಮಾಜಿ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ರಾಡ್‌ನಿಂದ ಹಲ್ಲೆ ಮಾಡಲಾಗಿತ್ತು. ಹಲ್ಲೆ ನಡೆಸಿದವರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಖಾಂಡ್ಯ ಪ್ರವೀಣ್ ಪ್ರಕರಣ ದಾಖಲಿಸಿದ್ದರು. ಅದೇ ದಿನ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ವಿರುದ್ಧವೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರತಿದೂರು ದಾಖಲಿಸಲಾಗಿತ್ತು.
    ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ನೀಡಿರುವ ಯುವಕ ರಾಜೇಶ್ ನಾಪತ್ತೆಯಾಗಿದ್ದಾನೆ ಎಂದು ಯುವಕನ ತಾಯಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
    ಏ.26ರಂದು ಸಂಜೆ 4.30 ಸುಮಾರಿಗೆ ಮನೆಯಲ್ಲಿ ಮಲಗಿದ್ದ ನನ್ನ ಮಗ ರಾಜೇಶನಿಗೆ (26) ಯಾವುದೋ ಒಂದು ಕರೆ ಬಂದಿದ್ದು, ಫೋನ್‌ನಲ್ಲಿ ಮಾತನಾಡಿದ ನಂತರ ಮನೆಯಿಂದ ಹೊರ ಹೋದ. ಬಿಳಿ ಬಣ್ಣದ ಕಾರಿನಲ್ಲಿ ಸಂತೋಷ್ ಬಾಳೆಗದ್ದೆ ಎಂಬುವರೊಂದಿಗೆ ತೆರಳಿದ. ನಂತರ ಮನೆಗೆ ಮರಳಿ ಬಂದಿಲ್ಲ. ಆತನ ಫೋನ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಚಿತರೊಬ್ಬರು ತಿಳಿಸಿದಂತೆ ಏ.26ರಂದು ಉಜ್ಜಿನಿ ಗ್ರಾಮದಲ್ಲಿ ನಡೆದ ಗಲಾಟೆ ಸಂಬಂಧ ನನ್ನ ಮಗನನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಖಾಂಡ್ಯ ಪ್ರವೀಣ್ ವಿರುದ್ಧ ದಲಿತ ದೌರ್ಜನ್ಯ ಕೇಸ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಆದರೆ ಇದರಲ್ಲಿ ನನ್ನ ಮಗ ಅಮಾಯಕ. ಉಜ್ಜಿನಿಯಲ್ಲಿ ಗಲಾಟೆ ನಡೆದಾಗ ನನ್ನ ಮಗ ಮನೆಯಲ್ಲಿಯೇ ಇದ್ದ. ರಾಜಕೀಯ ದುರುದ್ದೇಶದಿಂದ ನನ್ನ ಮಗನನ್ನು ಬಳಸಿಕೊಂಡು ಒತ್ತಾಯಪೂರ್ವಕವಾಗಿ ದೂರು ಕೊಡಿಸಿದ್ದಾರೆ. ನಾಪತ್ತೆಯಾಗಿರುವ ಮಗನನ್ನು ಪತ್ತೆ ಮಾಡಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
    ಉಜ್ಜಿನಿಯಲ್ಲಿ ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗುತ್ತಿದ್ದಂತೆ ಎರಡೂ ಗುಂಪಿನವರು ಎನ್ನಲಾದ 60ಕ್ಕೂ ಹೆಚ್ಚು ಜನ ಗ್ರಾಮವನ್ನೇ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಂತೆ ಕೇಸ್‌ನಲ್ಲಿ ನಮ್ಮ ಹೆಸರೂ ಇರಬಹುದು ಎಂಬ ಅನುಮಾನದಿಂದ ಎರಡೂ ಗುಂಪಿನ ಹಲವರು ನಾಪತ್ತೆಯಾಗಿದ್ದು, ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ನಾಪತ್ತೆಯಾದ ಎರಡೂ ಕಡೆಯವರನ್ನು, ದೂರಿನಲ್ಲಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts