More

    ಪ್ರೋತ್ಸಾಹಧನ ಹೆಚ್ಚಳದ ಕೂಗು

    ಯಲ್ಲಾಪುರ: ಗ್ರಾಮೀಣ ಭಾಗದ ಜನರು ನಗರಗಳಿಗೆ ವಲಸೆ ಹೋಗುತ್ತಿರುವುದು, ಕೂಲಿಕಾರರ ಸಮಸ್ಯೆ ಇತ್ಯಾದಿ ಕಾರಣಗಳಿಗಾಗಿ ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ.
    ಕೃಷಿಯ ಒಂದು ಭಾಗವಾಗಿ ಗುರುತಿಸಿಕೊಂಡ ಹೈನುಗಾರಿಕೆಯೂ ಇದರಿಂದ ಹೊರತಾಗಿಲ್ಲ. ಹೈನುಗಾರಿಕೆ ಮಾಡುವ ರೈತರಿಗೆ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಗುಲಿದ್ದು, ಅದೇ ಕಾರಣದಿಂದ ಹೈನುಗಾರಿಕೆಯಿಂದ ದೂರಾಗುವ ಸ್ಥಿತಿಯೂ ನಿರ್ವಣವಾಗುವ ಆತಂಕವಿದೆ.
    ಕಳೆದ ಒಂದೆರಡು ವರ್ಷಗಳಿಂದ ಮೇವು, ಹಿಂಡಿ ಇತ್ಯಾದಿ ಪಶು ಆಹಾರಗಳ ಬೆಲೆ ಗಗನಕ್ಕೇರುತ್ತಿದ್ದು, ಇದರ ನಡುವೆ ಹೈನುಗಾರಿಕೆ ನಡೆಸುವುದು ದುಸ್ಥರವಾಗಿದೆ. ಇಷ್ಟಾಗಿಯೂ ತಪ್ಪದೆ ಹಾಲನ್ನು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದರೆ, ಸರ್ಕಾರ ನೀಡುವ ಪ್ರೋತ್ಸಾಹಧನ ಮೇವು, ಹಿಂಡಿಯ ಖರ್ಚನ್ನೂ ನೀಗಿಸುತ್ತಿಲ್ಲ.
    ತಿಂಗಳಿಂದ ತಿಂಗಳಿಗೆ ಪಶು ಆಹಾರದ ಬೆಲೆಯಲ್ಲೇನೋ ಏರಿಕೆಯಾಗುತ್ತಿದೆ. ಆದರೆ ರೈತರಿಗೆ ನೀಡುವ ಪ್ರೋತ್ಸಾಹಧನ ಮಾತ್ರ ವರ್ಷಕ್ಕೊಮ್ಮೆಯೂ ಏರಿಕೆಯಾಗುತ್ತಿಲ್ಲ. ಇದರಿಂದ ಹೈನುಗಾರಿಕೆ ಮಾಡುವ ರೈತರೂ ಅದರಿಂದ ದೂರವಾಗಿ, ಹಾಲು ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರುವ ಅಪಾಯವೂ ಇದೆ.
    ಸದ್ಯ ಹೈನುಗಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಸರ್ಕಾರದಿಂದ 5 ರೂ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದು ರೈತರಿಗೆ ಸಾಲುತ್ತಿಲ್ಲ. ಪ್ರತಿ ಲೀಟರ್ ಹಾಲಿಗೆ ಕನಿಷ್ಠ 10 ರೂ. ನೀಡುವಂತಾಗಬೇಕು ಎಂಬುದು ರೈತರ ಆಗ್ರಹವಾಗಿದೆ.
    ಈ ಕುರಿತು ಹಾಲು ಒಕ್ಕೂಟಗಳು, ಸರ್ಕಾರ ಗಂಭೀರವಾಗಿ ಚಿಂತನೆ ನಡೆಸದೆ ಹೋದಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ, ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸಹ ಮುಚ್ಚುವ ಪರಿಸ್ಥಿತಿ ನಿರ್ವಣವಾಗಬಹುದು ಎಂಬ ಆತಂಕ ಹೈನುಗಾರ ರೈತರದು.


    ದರ ಏರಿಕೆಯ ನಡುವೆ ಹೈನುಗಾರಿಕೆ ಮುಂದುವರಿಸಿಕೊಂಡು ಹೋಗುವುದು ಕಷ್ಟಕರವಾಗಿದೆ. ಪ್ರೋತ್ಸಾಹಧನ ಏರಿಕೆ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದ್ದು, ಕಾರ್ವಿುಕ ಸಚಿವ ಹೆಬ್ಬಾರ ಅವರಿಗೆ ಈ ಕುರಿತು ಮನವಿಯನ್ನೂ ಸಲ್ಲಿಸಿದ್ದೇವೆ. ಸರ್ಕಾರ ಕೂಡಲೇ ಈ ಕುರಿತು ಸಕಾರಾತ್ಮಕ ಕ್ರಮಕ್ಕೆ ಮುಂದಾಗಬೇಕು.
    | ನಾಗೇಶ ಹೆಗಡೆ ಚಿನ್ಮನೆ, ಹೈನುಗಾರ ರೈತ

    ಹೈನುಗಾರ ರೈತರ ಕಷ್ಟದ ಅರಿವಿದೆ. ಸರ್ಕಾರದ ಮಟ್ಟದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಪ್ರೋತ್ಸಾಹಧನ ಹೆಚ್ಚಳದ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
    | ಶಿವರಾಮ ಹೆಬ್ಬಾರ, ಕಾರ್ವಿುಕ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts