More

    ಸಿಸಿ ಕ್ಯಾಮರಾ ಕೆಟ್ಟುನಿಂತು ವರ್ಷವಾದರೂ ಆಗಿಲ್ಲ ದುರಸ್ತಿ

    ಬೀರೂರು: ಕೆಲವೊಮ್ಮೆ ಅಪರಾಧಗಳ ಪತ್ತೆ ಕಾರ್ಯದಲ್ಲಿ ಸಿಸಿ ಕ್ಯಾಮರಾಗಳು ಮುಖ್ಯ ಪಾತ್ರವಹಿಸುತ್ತವೆ. ಆದರೆ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕೆಟ್ಟುಹೋಗಿ ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸದಿರುವುದು ವಿಪರ್ಯಾಸ.

    ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಅಪಘಾತಗಳು ಹೆಚ್ಚು. ಅಪಘಾತ ಹಾಗೂ ಅಪರಾಧಗಳ ತನಿಖೆಗೆ ಅನುಕೂಲವಾಗುವ ಉದ್ದೇಶದಿಂದ ಬೀರೂರಿನ ಹೃದಯ ಭಾಗವಾದ ಮಹಾತ್ಮ ಗಾಂಧಿ ವೃತ್ತ ಮತ್ತು ತರಳಬಾಳು ಕಲ್ಯಾಣ ಮಂಟಪ ಹಾಗೂ ಧನಲಕ್ಷ್ಮೀ ಪ್ರಾವಿಜನ್ ಸ್ಟೋರ್ ಎದುರು ಪೊಲೀಸ್ ಇಲಾಖೆ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಆದರೆ ಅವು ಮಿಂಚು, ಸಿಡಿಲು ಬಡಿತಕ್ಕೆ ಆಗಾಗ್ಗೆ ಕೆಟ್ಟು ಹೋಗುತ್ತಿದ್ದವು. ವಾರಂಟಿ ಇದ್ದುದರಿಂದ ಕಂಪನಿಯವರು ಬಂದು ರಿಪೇರಿ ಮಾಡುತ್ತಿದ್ದರು. ಆದರೆ ಆ ಕ್ಯಾಮರಾಗಳ ಗ್ಯಾರಂಟಿ ಮತ್ತು ವಾರಂಟಿ ಅವಧಿ ಮುಗಿದಿದೆ. ಕೆಟ್ಟು ವರ್ಷ ಕಳೆದರೂ ರಿಪೇರಿಗೆ ಯಾರೊಬ್ಬರೂ ಮುಂದಾಗುತ್ತಿಲ್ಲ.
    ಸದ್ಯಕ್ಕೆ ತರಳಬಾಳು ಕಲ್ಯಾಣ ಮಂಟಪ ಮತ್ತು ಪ್ರಾವಿಜನ್ ಸ್ಟೋರ್ ಬಳಿ ಇರುವ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿವೆ. ಅವುಗಳನ್ನೇ ಆಧರಿಸಿ ಅಪಘಾತಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ತನಿಖೆಗೆ ಬಳಸಿಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧಿ ವೃತ್ತದ ಸಿಸಿ ಕ್ಯಾಮರಾ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಕೆಲವು ಅಪಘಾತಗಳ ತನಿಖೆಗೆ ತೊಂದರೆಯಾಗಿದೆ.
    ಸುರಕ್ಷತೆ ದೃಷ್ಟಿಯಿಂದ ಕಂಪನಿ, ಮನೆಗಳು, ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತದೆ. ಆದರೆ ಹೆದ್ದಾರಿಯಲ್ಲಿ ಒಂದು ಕ್ಯಾಮರಾ ಕೆಟ್ಟುಹೋಗಿದ್ದರೂ ಗಮನಹರಿಸುತ್ತಿಲ್ಲ. ಜಗತ್ತು ಡಿಜಿಟಲೀಕರಣವಾಗುತ್ತಿದೆ. ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅಪರಾಧ ಪ್ರಕರಣಗಳ ಪತ್ತೆಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬಹಳಷ್ಟು ಪ್ರಕರಣಗಳ ತನಿಖೆಗೆ ವಿಡೊಯೋ ಫೂಟೇಜ್ ಸಾಕ್ಷಿಯಾಗುತ್ತಿದೆ.
    ಜಿಲ್ಲೆಯ ಪ್ರಮುಖ ರೈಲ್ವೆ ಜಂಕ್ಷನ್ ಬೀರೂರು. ಹಲವು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಹೊಂದಿರುವ ಕಾರಣ ಜನರ ಸಂಚಾರ ಹೆಚ್ಚಾಗಿರುತ್ತದೆ. ಆದ್ದರಿಂದ ಬಹಳಷ್ಟು ಅಪಘಾತಗಳು ಆಗುವ ಸಾಧ್ಯತೆಗಳು ಹೆಚ್ಚು. ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಪಟ್ಟಣದ ಸುರಕ್ಷತೆಗಾಗಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಕೈಜೋಡಿಸಬೇಕಿದೆ.
    ಪೊಲೀಸ್ ಇಲಾಖೆಯು ಅಪರಾಧ ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಸುತ್ತದೆ. ಕಳೆದ ಒಂದು ವರ್ಷದಿಂದ ಬೀರೂರು ಮಹಾತ್ಮ ಗಾಂಧಿ ವೃತ್ತದ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿ ಇಲ್ಲದರಿರುವುದು ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಪುರಸಭೆಯೊಂದಿಗೆ ಚರ್ಚಿಸಿ ಸಿಸಿ ಕ್ಯಾಮರಾಗಳ ರಿಪೇರಿ ಅಥವಾ ಇಲ್ಲವಾದರೆ ಹೊಸ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ವಿಕ್ರಮ ಅಮಟೆ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts