More

    ಸಂಪಿನ ಕೆರೆಗೆ ತ್ಯಾಜ್ಯದ ಹೊರೆ


    ಶಿರಸಿ: ನಗರಕ್ಕೆ ತಾಗಿಕೊಂಡೇ ಇರುವ ಜಲಮೂಲ ಸಂಪಿನ ಕೆರೆಯು ನಗರದ ತ್ಯಾಜ್ಯ ಹಾಗೂ ಕಲುಷಿತ ನೀರಿನಿಂದ ವಿನಾಶವಾಗುತ್ತಿದೆ. ಇದರಿಂದ ಜಲಚರಗಳು, ನೀರು ಆಶ್ರಿತ ಪಕ್ಷಿ ಸಂಕುಲಕ್ಕೆ ಆಪತ್ತು ಎದುರಾಗಿದೆ.
    ನಗರದ ಅಗಸೆಬಾಗಿಲಿನಿಂದ ಕಲ್ಕುಣಿ ಮಾರ್ಗದಲ್ಲಿ ಸಿಗುವ ಹಾಗೂ ವಾರ್ಡ್ ನಂ.27ರ ವ್ಯಾಪ್ತಿಯಲ್ಲಿರುವ ಸಂಪಿನಕೆರೆ 28 ಗುಂಟೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಕೆರೆಯ ನೀರು ಸುತ್ತಮುತ್ತಲ ಭಾಗದ ಬಾವಿಗಳ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಪೂರಕವಾಗಿದೆ. ಆದರೆ ಕೆರೆ ನಿರ್ವಹಣೆ ಇಲ್ಲದ ಕಾರಣ ಸಂಪೂರ್ಣ ಕಳೆಯಿಂದ ತುಂಬಿದೆ. ಇರುವ ನೀರು ಕೂಡ ನಗರ ತ್ಯಾಜ್ಯದಿಂದ ಕಲುಷಿತವಾಗಿದೆ. ಹೀಗಾಗಿ ಈ ಜಲಮೂಲ ನಂಬಿದವರಿಗೆ ಸಂಕಷ್ಟ ಎದುರಾಗಿದೆ.
    ಹೂಳು ತುಂಬಿದ ಕೆರೆ:ಕೆರೆ ನಿರ್ವಹಣೆ ನಗರಾಡಳಿತದ ಜವಾಬ್ದಾರಿಯಾಗಿದೆ. ಆದರೆ, ಕೆಲವು ವರ್ಷಗಳಿಂದ ನಗರಾಡಳಿತವು ಕೆರೆಯತ್ತ ಗಮನ ನೀಡದಿರುವುದು ಕೆರೆಯ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. 28 ಗುಂಟೆ ವ್ಯಾಪ್ತಿಯಲ್ಲಿ ಕೆಸುವಿನ ಗಿಡ ಬೆಳೆದುಕೊಂಡಿದೆ. ಸಂಪೂರ್ಣ ಹೂಳು ತುಂಬಿ ಅಲ್ಲಲ್ಲಿ ಮಾತ್ರ ನೀರಿದೆ. ಯಾವುದೇ ಭದ್ರತೆಯಿಲ್ಲದ ಕೆರೆಗೆ ಅಂದಾಜು 1 ಕಿಮೀವರೆಗಿನ ಮನೆಗಳ ತ್ಯಾಜ್ಯ ನೀರು ಬರುತ್ತದೆ. ಕೆರೆ ಪಕ್ಕ ಗಟಾರವಿದ್ದು, ಅಕ್ಕಪಕ್ಕದ ಎಲ್ಲ ಮನೆಗಳ ತ್ಯಾಜ್ಯ ನೀರು ನೇರವಾಗಿ ಕಚ್ಚಾ ಗಟಾರಕ್ಕೆ ಬಿಡಲಾಗುತ್ತಿದೆ. ಇಷ್ಟು ಪ್ರಮಾಣದ ನೀರು ನೇರವಾಗಿ ಕೆರೆಯ ಗರ್ಭ ಸೇರುತ್ತಿದೆ. ಇದರಿಂದ ಕೆರೆ ನೀರು ಕ್ರಿಮಿ, ಕೀಟಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ. ಸುತ್ತಮುತಲ ವಾತಾವರಣ ದುರ್ವಾಸನೆಯಿಂದ ಕೂಡಿದ್ದು, ರೋಗರುಜಿನುಗಳ ಮೂಲವಾಗಿದೆ.
    ಖರ್ಚು ಮಾಡಿದರೂ ಪ್ರಯೋಜನವಿಲ್ಲ: ನಗರಾಡಳಿತ ಅಧಿಕಾರಿಗಳು ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿರುವುದಾಗಿ ಹೇಳುತ್ತಾರೆ. ಭೀಮನಗುಡ್ಡದ ಬಳಿಯಿಂದ ಸಂಪಿನ ಕೆರೆಯವರೆಗೆ 1 ಕಿಮೀ ದೂರದವರೆಗೆ ಅಂದಾಜು 8 ಅಡಿ ಆಳ ಹಾಗೂ 5 ಅಡಿ ಅಗಲದ ಬೃಹತ್ ಗಟಾರ ತೋಡಲಾಗಿದೆ. 2.80 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಆದರೂ ನಗರ ತ್ಯಾಜ್ಯ ಮಾತ್ರ ಕೆರೆಯೊಡಲಿಗೆ ಬಿಡಲಾಗುತ್ತಿದೆ. ತ್ವರಿತವಾಗಿ ಕಲುಷಿತ ನೀರು ಹರಿಯದಂತೆ ತಡೆಗೆ ಕ್ರಮವಹಿಸಬೇಕು ಎಂಬುದು ಜನರ ಆಗ್ರಹ.


    ಸಂಪಿನ ಕೆರೆ ಅನಾದಿ ಕಾಲದಿಂದಿದ್ದು ಈ ಭಾಗದ ಜನರಿಗೆ ಜಲಮೂಲವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರ ತ್ಯಾಜ್ಯ ಸೇರ್ಪಡೆಯಿಂದ ಸಂಪೂರ್ಣ ಕಲುಷಿತವಾಗಿದೆ. ತಕ್ಷಣ ನಗರಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಸಮೃದ್ಧ ನೀರಿರುವ ಜಲಮೂಲವೊಂದನ್ನು ಕಳೆದುಕೊಳ್ಳಬೇಕಾಗುತ್ತದೆ.
    – ಸರೋಜಾ ಎನ್. ಸ್ಥಳೀಯರು


    ಕೆರೆಗೆ ಕಲುಷಿತ ನೀರು ಸೇರುತ್ತಿರುವುದು ನಗರಸಭೆಯ ಗಮನಕ್ಕಿದೆ. ಇದನ್ನು ತಡೆಯುವ ಹಿನ್ನೆಲೆಯಲ್ಲಿ ಚರಂಡಿ ನಿರ್ವಿುಸಲಾಗಿತ್ತು. ಅದು ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಪ್ರಸ್ತುತ ಕರೊನಾ ಇರುವ ಕಾರಣ ಕೆರೆ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಂದ ತಕ್ಷಣ ಕೆರೆ ಅಭಿವೃದ್ಧಿ ಮಾಡಲಾಗುವುದು.
    ವೀಣಾ ಶೆಟ್ಟಿ- ನಗರಸಭೆ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts