More

    ಮಳೆಗಾಲಕ್ಕೂ ಮುನ್ನ ಸೇತುವೆ ಪೂರ್ಣ

    ಕುಮಟಾ: ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನಿರ್ವಣವಾಗುತ್ತಿರುವ ತಾಲೂಕಿನ ಕೋಡ್ಕಣಿ ಪಂಚಾಯಿತಿ ವ್ಯಾಪ್ತಿಯ ಐಗಳಕುರ್ವೆ ದ್ವೀಪ ಗ್ರಾಮದ ಸೇತುವೆ ಹಾಗೂ ಕಲ್ಲಬ್ಬೆ ಪಂಚಾಯಿತಿಯ ಬೊಗರಿಬೈಲ್ ಸೇತುವೆಯನ್ನು ಮುಂಬರುವ ಮಳೆಗಾಲದೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

    ಅವರು ಶುಕ್ರವಾರ ಐಗಳಕುರ್ವೆ ಹಾಗೂ ಬೊಗರಿಬೈಲ್ ಸೇತುವೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರ ಜತೆ ಮಾತನಾಡಿದರು.

    22 ಕೋಟಿ ರೂಪಾಯಿ ವೆಚ್ಚದಲ್ಲಿ ಐಗಳಕುರ್ವೆಗೆ ದೊಡ್ಡ ಸೇತುವೆ ಹಾಗೂ 19 ಕೋಟಿ ರೂಪಾಯಿ ವೆಚ್ಚದ ಬೊಗರಿಬೈಲ್ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಸಂಪರ್ಕ ರಸ್ತೆ ಜೋಡಿಸುವ ಕಾರ್ಯ ಬಾಕಿ ಇದೆ ಎಂದರು.

    ಅನೌಪಚಾರಿಕ ಸಭೆ: ಇದಕ್ಕೂ ಮುನ್ನ ಐಗಳಕುರ್ವೆಯಲ್ಲಿ ನೂತನ ಸೇತುವೆ ಬಳಿಯ ಸೂಲಿಬೀರಪ್ಪ ಮಂದಿರದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರ ಅನೌಪಚಾರಿಕ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಕೋಡ್ಕಣಿ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಾಯ ಪಟಗಾರ ಹಾಗೂ ಇನ್ನಿತರರು, ಐಗಳಕುರ್ವೆ ಸೇತುವೆ ಕಾಮಗಾರಿ ಭೂಮಿಪೂಜೆ ಸಂದರ್ಭದಲ್ಲಿ ಅಧಿಕಾರಿಗಳು ಸೇತುವೆ ಸಂಪರ್ಕ ರಸ್ತೆ ನಿರ್ವಣದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಈಗ ಸೇತುವೆ ಎರಡೂ ತುದಿಯಲ್ಲಿ ನೂರಾರು ಮೀಟರು ದೂರದವರೆಗೂ ಸಂಪರ್ಕ ರಸ್ತೆ ನಿರ್ವಣಕ್ಕೆ ಖಾಸಗಿಯವರ ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

    ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್ ಎನ್. ಕೆ. ಕುರಂದಕರ್ ಮಾಹಿತಿ ನೀಡಿ, ಸೇತುವೆಯನ್ನು 270 ಮೀಟರು ಉದ್ದ ಹಾಗೂ 10.5 ಮೀಟರು ಅಗಲಕ್ಕೆ ನಿರ್ವಿುಸಲಾಗಿದ್ದು ಇದರಲ್ಲಿ 1.5 ಮೀಟರು ಅಗಲದ ಪಾದಚಾರಿ ಮಾರ್ಗವೂ ಒಳಗೊಂಡಿದೆ. ಸೇತುವೆ ಇರುವ ಎತ್ತರಕ್ಕೆ ತಕ್ಕಂತೆ ಸಂಪರ್ಕ ರಸ್ತೆಯನ್ನು ಪ್ರವಾಹಕ್ಕೆ ತುತ್ತಾಗದ ರೀತಿಯಲ್ಲಿ ಎರಡೂ ತುದಿಯಲ್ಲಿ ಜೋಡಿಸುವ ಪ್ರಕ್ರಿಯೆಯಲ್ಲಿ ಒಂದಷ್ಟು ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಅನಿವಾರ್ಯವಿದೆ ಎಂದರು.

    ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ಉಪವಿಭಾಗಾಧಿಕಾರಿ ಅಜಿತ್ ಎಂ. ರೈ, ಕಂದಾಯ ಅಧಿಕಾರಿಗಳು, ಪಿಎಸ್​ಐ ಆನಂದಮೂರ್ತಿ, ಪಿಎಸ್​ಐ ರವಿಗುಡ್ಡಿ ಇನ್ನಿತರರು ಹಾಜರಿದ್ದು ರ್ಚಚಿಸಿದರು. ಭರತ ಪಟಗಾರ, ಅನಂತ ಪಟಗಾರ, ಹನುಮಂತ ಭಂಡಾರಿ, ಪರಮೇಶ್ವರ ಪಟಗಾರ, ವಿಠೋಬ ಭಂಡಾರಿ, ಪಟಗಾರ ಸಮಾಜದ ಬಾಗ್ಲು, ದಾಮೋದರ, ಉಮೇಶ, ರುಕ್ಕಪ್ಪ, ಗುನಗು, ಕೃಷ್ಣಪ್ಪ, ಗಣೇಶ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts