More

    ಥಣಿಸಂದ್ರ ರಸ್ತೆ ವೈಟ್‌ಟಾಪಿಂಗ್‌ಗೆ ಗಡುವು : ಜನವರಿ ಅಂತ್ಯದೊಳಗೆ ಪೂರ್ಣಕ್ಕೆ ಪಾಲಿಕೆ ಆಡಳಿತಾಧಿಕಾರಿ ಆದೇಶ

    ಬೆಂಗಳೂರು : ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗವಾಗಿರುವ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಆದೇಶಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಥಣಿಸಂದ್ರ ಮುಖ್ಯರಸ್ತೆ (ನಾಗವಾರ ಕೂಡುರಸ್ತೆ-ಬಾಗಲೂರು ತಿರುವು) ಯಲ್ಲಿ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಮಂಗಳವಾರ ತಪಾಸಣೆ ನಡೆಸಿದರು.

    ಫೆ.3 ರಿಂದ 7ರವರೆಗೆ ‘ಏರೋ ಇಂಡಿಯಾ- 2021 (ವೈಮಾನಿಕ ಪ್ರದರ್ಶನ)’ ನಡೆಯಲಿದ್ದು, ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಅಧಿಕ ವಾಹನಗಳು ಸಂಚಾರ ಮಾಡಲಿವೆ. ಆದ್ದರಿಂದ ಜನವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಅಗತ್ಯ ಯಂತ್ರಗಳನ್ನು ಬಳಸಿಕೊಳ್ಳುವಂತೆ ಹಾಗೂ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಒದಗಿಸಲಾಗಿರುವ ಬದಲಿ ರಸ್ತೆಯಲ್ಲಿ ಗುಂಡಿಗಳು, ಜಲಮಂಡಳಿಯಿಂದ ಅಗೆಯಲಾದ ರಸ್ತೆಗೆ ತಾತ್ಕಾಲಿಕ ಡಾಂಬರೀಕರಣ ಮಾಡಿ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಪೈಪ್‌ಲೈನ್ ಅಳವಡಿಕೆ ಬಹುತೇಕ ಪೂರ್ಣ: ಹೊರ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಥಣಿಸಂದ್ರ ರಸ್ತೆ ಬಳಿ 1,400 ಮಿ.ಮೀ ಗಾತ್ರದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದರಿಂದ ಕಳೆದ 6 ತಿಂಗಳಿಂದ ವೈಟ್ ಟಾಪಿಂಗ್ ಕಾಮಗಾರಿ ವಿಳಂಬವಾಗಿತ್ತು. ಆದರೆ, ಈಗ ಪೈಪ್‌ಲೈನ್ ಅಳವಡಿಕೆ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕಾರ್ಯ ಶೀಘ್ರ ಪೂರ್ಣಗೊಳಸಲು ಜಲಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮತ್ತೊಂದೆಡೆ ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ಬೆಸ್ಕಾಂನಿಂದ 11 ಕಿಲೋ ವಾಟ್ ಲೈನ್ ಅಳವಡಿಕೆ ಬಾಕಿಯಿದ್ದು, ತ್ವರಿತವಾಗಿ ಕೆಲಸ ಮುಗಿಸಿಕೊಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

    ಥಣಿಸಂದ್ರದ 9.5 ಕಿ.ಮೀ. ಮುಖ್ಯರಸ್ತೆಯಲ್ಲಿ 5 ದಿನಗಳ ಹಿಂದೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ 1.2 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಜನವರಿ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಯೋಜನಾ ವಿಭಾಗದ ಮುಖ್ಯ ಅಭಿಯಂತರರು ರಮೇಶ್ ಮಾಹಿತಿ ನೀಡಿದರು. ಪಾಲಿಕೆ ಅಧೀಕ್ಷಕ ಇಂಜಿನಿಯರ್ ಎಂ.ಲೋಕೇಶ್, ಯಲಹಂಕ ವಲಯ ಮುಖ್ಯ ಇಂಜಿನಿಯರ್ ರಂಗನಾಥ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ಚಂದ್ರಶೇಖರ್, ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.

    ರಾಷ್ಟ್ರೋತ್ಥಾನ ಜಂಕ್ಷನ್ ಮೇಲ್ಸೇತುವೆ 20 ದಿನದಲ್ಲಿ ಪೂರ್ಣ: ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ಸಿಗ್ನಲ್ ರಹಿತ ವಾಹನ ಸಂಚಾರಕ್ಕೆ 459 ಮೀ. ಉದ್ದದ 4 ಪಥದ ಮೇಲುಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಮುಂದಿನ 20 ದಿನಗಳಲ್ಲಿ ಮೇಲ್ಸೇತುವೆಗೆ ಡಾಂಬರೀಕರಣ, ವಿಭಜಕ ಕೆಲಸ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜತೆಗೆ, ಎರಡೂ ಬದಿಯ ಸರ್ವೀಸ್ ರಸ್ತೆಗಳನ್ನು ಶೀಘ್ರ ಅಭಿವೃದ್ಧಿಪಡಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ನಿರ್ದೇಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts