More

    ತಲಪಾಡಿ ಟೋಲ್‌ನಲ್ಲಿ ಮತ್ತೆ ಉದ್ವಿಗ್ನ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ
    ತಲಪಾಡಿ ಟೋಲ್‌ಗೇಟ್‌ನಲ್ಲಿ ಬಸ್‌ಗಳಿಗೆ ದುಬಾರಿ ಶುಲ್ಕ ವಿಧಿಸಿರುವುದನ್ನು ಖಂಡಿಸಿ ಕೆಲದಿನಗಳಿಂದ ಬಸ್ ಮಾಲೀಕರು ನಡೆಸುತ್ತಿರುವ ಹೋರಾಟ ಮಂಗಳವಾರ ಟೋಲ್ ಸಿಬ್ಬಂದಿ, ಸಾರ್ವಜನಿಕರು ಹಾಗೂ ಬಸ್ ಮಾಲೀಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

    ಎರಡು ತಿಂಗಳ ಹಿಂದೆ ತಲಪಾಡಿ ಟೋಲ್‌ಗೇಟ್‌ನಲ್ಲಿ ಬಸ್‌ಗಳಿಗೆ ತಿಂಗಳಿಗೆ 45 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದು ಸೂಚನೆ ಹೊರಡಿಸಲಾಗಿತ್ತು. ಇದರಿಂದ ಹಲವು ಬಾರಿ ಬಸ್ ಮಾಲೀಕರು, ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಸುಂಕ ವಿನಾಯಿತಿ ಸಾಧ್ಯವಿಲ್ಲ ಎಂದು ಟೋಲ್ ಅಧಿಕಾರಿಗಳು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಬಸ್ ಮಾಲೀಕರು ಕೊನೇ ತಂಗುದಾಣವಾಗಿರುವ ಮೇಲಿನ ತಲಪಾಡಿ ಬದಲು ಟೋಲ್‌ಗೇಟ್ ಮುಂಭಾಗದಲ್ಲೇ ಬಸ್‌ಗಳನ್ನು ತಿರುಗಿಸಿ ಅಧಿಕಾರಿಗಳಿಗೆ ಸಡ್ಡು ಹೊಡೆದಿದ್ದರು. ಪರಿಣಾಮವಾಗಿ ಪ್ರಯಾಣಿಕರು ಕಿಲೋ ಮೀಟರ್‌ನಷ್ಟು ನಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಎರಡು ತಿಂಗಳಿಂದ ಇಂತಹ ಪರಿಸ್ಥಿತಿ ಇದ್ದರೂ ಜಿಲ್ಲಾಡಳಿತವಾಗಲೀ, ಸಂಸದ, ಶಾಸಕರಾಗಲಿ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎನ್ನುವ ಆರೋಪವೂ ಇದೆ.

    ಪ್ರಯೋಜನವಾಗದ ಸಂಧಾನ: ಗಡಿನಾಡ ರಕ್ಷಣಾ ವೇದಿಕೆ ಮುಖಂಡರು ನವಯುಗ ಸಂಸ್ಥೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದಾಗ, ಕಂಪನಿ ಆದೇಶ ನಾವು ಪಾಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ನಿಲುವು ಕೈಗೊಂಡು ಕಂಪನಿಯಿಂದ ಆದೇಶ ನೀಡಿದರೆ ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಫೆ.20ರಂದು ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದ್ದರೂ ಪ್ರಯೋಜನವಾಗಿರಲಿಲ್ಲ. ಎರಡು ದಿನದ ಹಿಂದೆ ಬಸ್ ಮಾಲೀಕರ ಜತೆ ಮಾತುಕತೆ ನಡೆಸಿದಾಗ ದುಬಾರಿ ಶುಲ್ಕದಲ್ಲಿ ಬಸ್ ನಡೆಸುವುದು ಕಷ್ಟ ಎಂದಿದ್ದರು.

    ವಾಗ್ವಾದ, ಬಿಗುಪರಿಸ್ಥಿತಿ: ಮಂಗಳವಾರ ಬೆಳಗ್ಗೆ 7 ಗಂಟೆಗೆ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಮುಖಂಡ ಜಮಾಲ್ ಅಜ್ಜಿನಡ್ಕ ಸಹಿತ ಮತ್ತಿತರ ಮುಖಂಡರು ಟೋಲ್‌ಗೇಟ್‌ಗೆ ಧಾವಿಸಿ ಬಸ್‌ಗಳು ತಿರುಗದಂತೆ ಸುತ್ತಲೂ ಹಗ್ಗ ಕಟ್ಟಿ ಬಸ್‌ಗಳನ್ನು ಮೇಲಿನ ತಲಪಾಡಿಗೆ ಕಳುಹಿಸಿದರು. 9 ಗಂಟೆಗೆ ಟೋಲ್‌ಗೇಟ್ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ ಬಸ್ ಸಂಚಾರಕ್ಕೆ ತಡೆಯೊಡ್ಡಿದರು. ಈ ಸಂದರ್ಭ ಬಸ್ ಮಾಲೀಕರು, ಸಾರ್ವಜನಿಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಬಿಗುಪರಿಸ್ಥಿತಿ ನಿರ್ಮಾಣವಾಯಿತು.
    ಸಾರ್ವಜನಿಕರಿಗೆ ಎಷ್ಟೇ ಕಷ್ಟವಾದರೂ ಸುಂಕ ಪಾವತಿಸದೆ ಬಸ್‌ಗಳನ್ನು ಟೋಲ್ ದಾಟಲು ಬಿಡುವುದಿಲ್ಲ ಎಂದು ಸಿಬ್ಬಂದಿ ಹಠಕ್ಕೆ ಬಿದ್ದರು. ಇದನ್ನು ಖಂಡಿಸಿ ಮಾಲೀಕರೂ ಸಂಚಾರ ಸ್ಥಗಿತಗೊಳಿಸಿ, ಬಸ್‌ಗಳನ್ನು ಅಲ್ಲೇ ಸಾಲಾಗಿ ನಿಲ್ಲಿಸಿದರು. ಬೆಳಗ್ಗಿನ ಜಾವವಾಗಿದ್ದರಿಂದ ಸ್ಥಳದಲ್ಲಿ ವಾಹನಗಳ ಸಂಚಾರಕ್ಕೆ ಭಾರಿ ತಡೆಯುಂಟಾಗಿ, ಸಾರ್ವಜನಿಕರು ಸಂಕಷ್ಟಕ್ಕೀಡಾದರು.

    29ರಂದು ಸಂಸದರ ಸಮ್ಮುಖ ಸಭೆ
    ಇದರಿಂದ ಬಸ್ ಪ್ರಯಾಣಿಕರು, ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಲಾಠಿ ಬೀಸಿ ಜನರನ್ನು ಚದುರಿಸಿದರು. ಬಳಿಕ ಟೋಲ್ ಅಧಿಕಾರಿಗಳು, ಬಸ್ ಮಾಲೀಕರ ಜತೆ ಮಾತುಕತೆ ನಡೆಸಿದ್ದರಿಂದ ಸುಮಾರು ಒಂದೂವರೆ ಗಂಟೆ ಬಳಿಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿತು. ಈ ಬಗ್ಗೆ ಫೆ.29ರಂದು ಸಂಸದರ ಸಮ್ಮುಖದಲ್ಲಿ ಸಭೆ ನಡೆಯಲಿದೆ ಎನ್ನಲಾಗಿದ್ದು ಬಳಿಕ ಬಸ್‌ಗಳ ಸುಂಕ ವಸೂಲಿ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ ಎನ್ನುವ ಮಾಹಿತಿ ಬಸ್ ಮಾಲೀಕರಿಗೆ ದೊರಕಿದ್ದರಿಂದ ಮತ್ತೆ ಸಂಚಾರ ಆರಂಭಿಸಲಾಯಿತು. ಸಂಜೆಯವರೆಗೆ ಬಸ್ಸುಗಳು ಟೋಲ್‌ಮುಕ್ತ ಸಂಚಾರ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts