More

    ಸಿಟಿ ಬಸ್ ಮಿಂಚಿನ ಮುಷ್ಕರ, ಓವರ್‌ಸ್ಪೀಡ್ ಹೆಸರಲ್ಲಿ ದಂಡ, ಚಾಲಕನ ಬಂಧನಕ್ಕೆ ಆಕ್ರೋಶ

    ಉಳ್ಳಾಲ: ಓವರ್‌ಸ್ಪೀಡ್ ಹೆಸರಲ್ಲಿ ಸಿಟಿ ಬಸ್ ಮೇಲೆ ದಂಡ ಹೇರಿ ಚಾಲಕನಿಗೆ ಅವಾಚ್ಯವಾಗಿ ಬೈದಿದ್ದಾರೆಂದು ಆರೋಪಿಸಿ ತಲಪಾಡಿಯಲ್ಲಿ ಸಿಟಿ ಬಸ್‌ಸಿಬ್ಬಂದಿ ಶನಿವಾರ ಮುಷ್ಕರ ನಡೆಸಿದರು.
    ಶನಿವಾರ ಮಧ್ಯಾಹ್ನದ ವೇಳೆ ಮಂಗಳೂರಿನಿಂದ ಬಂದಿದ್ದ 42 ನಂಬರಿನ ಸಿಟಿ ಬಸ್ ಮೇಲಿನ ತಲಪಾಡಿಗೆ ಹೋಗಿ ಹಿಂತಿರುಗುತ್ತಿದ್ದಾಗ ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್‌ಐ ರಾಬರ್ಟ್ ಲಸ್ರಾದೊ ಬಸ್ ತಡೆದು ಓವರ್ ಸ್ಪೀಡ್ ಕಾರಣಕ್ಕೆ ಸಾವಿರ ರೂಪಾಯಿ ದಂಡ ವಿಧಿಸಿದ್ದರು.

    ಈ ಸಂದರ್ಭ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸ್ ನಿರ್ವಾಹಕ ದಯಾನಂದ್, ನಾವು ವೇಗವಾಗಿ ಬಂದಿಲ್ಲ. ಕಲೆಕ್ಷನ್ ಕೂಡ ಈಗ ಕಮ್ಮಿಯಿದೆ. ಅಷ್ಟು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಸ್ಸಿನ ದಾಖಲೆ ಪತ್ರ ನೀಡುವಂತೆ ಎಎಸ್‌ಐ ಲಸ್ರಾದೊ ನಿರ್ವಾಹಕನಲ್ಲಿ ಕೇಳಿದ್ದಾರೆ. ದಾಖಲೆಗಳು ನಮ್ಮಲ್ಲಿಲ್ಲ, ಕಚೇರಿಯಲ್ಲಿದೆ ಎಂದು ನಿರ್ವಾಹಕ ಉತ್ತರಿಸಿದ್ದರಿಂದ ಅಸಮಾಧಾನಗೊಂಡ ಎಎಸ್‌ಐ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ದಂಡ ಕಟ್ಟಲು ಬಸ್ ನಿರ್ವಾಹಕ ಒಪ್ಪದ ಕಾರಣ ಸಂಚಾರಿ ಎಎಸ್‌ಐ ದೂರಿನಂತೆ ಚಾಲಕ ಅಭಿರಾಜ್ ಅವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಎಳೆದುಕೊಂಡು ವಾಹನದಲ್ಲಿ ಹಾಕಿದ್ದಾರೆ ಎಂದು ಬಸ್ಸು ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಪ್ರತಿಭಟನಾ ರೂಪವಾಗಿ ಎಲ್ಲ ಸಿಟಿ ಬಸ್ಸುಗಳ ಪ್ರಯಾಣ ಸ್ಥಗಿತಗೊಳಿಸಿದ್ದಾರೆ.

    ಮೇಲಿನ ತಲಪಾಡಿಯಲ್ಲಿ ಪೊಲೀಸ್ ತಪಾಸಣೆಯ ಚೆಕ್‌ಪೋಸ್ಟ್ ಇರುವಾಗ ಬಸ್ಸನ್ನು ವೇಗವಾಗಿ ಚಲಾಯಿಸಲಾಗದು. ಈ ಬಗ್ಗೆ ಸಿಸಿ ಟಿವಿಯಲ್ಲಿ ದಾಖಲೆ ಪರಿಶೀಲಿಸಲಿ. ಸಂಚಾರಿ ಪೊಲೀಸರು ಪ್ರತಿದಿನ ಸಿಟಿ ಬಸ್ ಸಿಬ್ಬಂದಿ ಮೇಲೆ ಕೇಸು ಹಾಕಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಸ್ ನಿರ್ವಾಹಕ ಕಿಶೋರ್ ಆರೋಪಿಸಿದ್ದಾರೆ.

    ಚಾಲಕ ಅಭಿರಾಜ್ ಅವರನ್ನು ಬಿಡುಗಡೆಗೊಳಿಸದಿದ್ದರೆ ಮುಷ್ಕರ ಮುಂದುವರಿಸುವುದಾಗಿ ನೌಕರರು ಎಚ್ಚರಿಸಿದರು. ದಿಢೀರ್ ಬಸ್ ಮುಷ್ಕರದಿಂದ ಕಂಗಾಲಾದ ಪ್ರಯಾಣಿಕರು ಸರ್ಕಾರಿ ಬಸ್ಸುಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ಬಿಗಡಾಯಿಸುವ ಹಂತ ತಲುಪಿದ್ದನ್ನು ಮನಗಂಡ ಪೊಲೀಸರು ಚಾಲಕನನ್ನು ಬಿಡುಗಡೆಗೊಳಿಸಿದರು. ಬಳಿಕ ಮುಷ್ಕರ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts