More

    ಟೆಕ್ಸ್​ಟೈಲ್ ಪಾರ್ಕ್ ಜಮೀನಿನ ಪ್ರಸ್ತಾವನೆ ಸಲ್ಲಿಕೆ ಶೀಘ್ರ

    ಶಿಗ್ಗಾಂವಿ: 2020-21ರ ಬಜೆಟ್​ನಲ್ಲಿ ಶಿಗ್ಗಾಂವಿ ತಾಲೂಕಿಗೆ ಘೊಷಣೆಯಾಗಿದ್ದ ಟೆಕ್ಸ್​ಟೈಲ್ ಪಾರ್ಕ್ ಯೋಜನೆಗೆ ಬೇಕಾಗಿರುವ ಜಮೀನಿನ ಪ್ರಸ್ತಾವನೆ ಈ ವಾರದಲ್ಲಿ ಸಲ್ಲಿಕೆಯಾಗಲಿದ್ದು, ಇದಕ್ಕಾಗಿ ಸರ್ಕಾರ ಈಗಾಗಲೇ ನೋಡಲ್ ಅಧಿಕಾರಿ ನೇಮಕ ಮಾಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಕ್ಸ್​ಟೈಲ್ ಪಾರ್ಕ್​ನಲ್ಲಿ ನೂಲಿನಿಂದ ಹಿಡಿದು ಎಲ್ಲ ರೀತಿಯ ಟೆಕ್ಸ್​ಟೈಲ್ ಕಾರ್ಖಾನೆಗಳಿಗೆ ಅವಕಾಶ ಇದೆ. ಅರಳಿಯಿಂದ ನೂಲು ತೆಗೆಯುವುದು, ನೇಯುವುದು, ಬಟ್ಟೆಗಳಿಗೆ ಬಣ್ಣ ಹಾಕುವುದು, ಗಾರ್ವೆಂಟ್ ಮಾಡುವುದಕ್ಕೆ ಅವಕಾಶವಿದೆ. ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿಶೇಷ ರಿಯಾಯಿತಿ ವ್ಯವಸ್ಥೆ ಇದೆ ಎಂದರು.

    ಟೆಕ್ಸ್​ಟೈಲ್ ಪಾರ್ಕ್​ಗೆ ಬೇಕಾಗಿರುವಂಥ ಕಾರ್ಖಾನೆಗಳ ಬೇಡಿಕೆ ಸರ್ವೆಯ ಅರ್ಜಿಗಳನ್ನು ನೋಡಲ್ ಅಧಿಕಾರಿ ಕರೆಯುತ್ತಾರೆ. ಆಸಕ್ತ ಕಂಪನಿಗಳಿಂದ ಅರ್ಜಿ ಪಡೆದು, ಅದಕ್ಕನುಗುಣವಾಗಿ ಬೇಕಾದ ಸೌಲಭ್ಯಗಳ ಮತ್ತು ಮೂಲಸೌಕರ್ಯಗಳಿಗೆ ಸರ್ಕಾರ ಬಜೆಟ್​ನಲ್ಲಿ ಹಣ ಒದಗಿಸಲಿದೆ. ಈ ಯೋಜನೆ ಮುಂಬರುವ ವರ್ಷದಲ್ಲಿ ಪೂರ್ಣಗೊಂಡ ನಂತರ ಉದ್ಯೋಗ ಸೃಷ್ಟಿ ಮಾಡುವ ಉದ್ದಿಮೆಗಳು ಇಲ್ಲಿಗೆ ಬರಲಿವೆ. ಇದರಿಂದ 10 ರಿಂದ 15 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದರು.

    ಸಂತ ಶಿಶುವಿನಾಳ ಶರೀಫರ ಗದ್ದುಗೆ ಅಭಿವೃದ್ಧಿಗಾಗಿ ಸರ್ಕಾರ ಐದು ಕೋಟಿ ರೂ. ಬಿಡುಗಡೆ ಮಾಡಿದೆ. ಡಿಸೆಂಬರ್​ನಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಅದರ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಇದಕ್ಕಾಗಿ ಹೊಸ ಪ್ರಾಧಿಕಾರ ಮಾಡದೆ ಬಾಡ ಅಭಿವೃದ್ಧಿ ಪ್ರಾಧಿಕಾರದ ಜತೆಗೆ ಸೇರಿಸಲಾಗುವುದು. ಇದರಿಂದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ. ಸಣ್ಣ ನೀರಾವರಿ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ 30 ಕೋಟಿ ರೂ. ಬಿಡುಗಡೆಯಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಅಲ್ಲದೆ, ಶಿಗ್ಗಾಂವಿ ಹಳೇ ಬಸ್ ನಿಲ್ದಾಣ ನವೀಕರಣಕ್ಕೆ 3 ಕೋಟಿ ರೂ. ಅನುದಾನದ ಟೆಂಡರ್ ಪ್ರಕ್ರಿಯೆ ಮುಂದಿನ ತಿಂಗಳು ಆರಂಭವಾಗಲಿದೆ ಎಂದರು.

    ಪಟ್ಟಣದಲ್ಲಿ ಚನ್ನಮ್ಮ ಮೂರ್ತಿ ಸ್ಥಾಪನೆ ಕೆಲಸ ಆರಂಭ ಮಾಡಲಾಗಿತ್ತು. ಆದರೆ, ಖಾದ್ರಿಯಾ ದರ್ಗಾದವರು ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ನ್ಯಾಯಾಲಯದ ಆದೇಶದನ್ವಯ ಮುಂದಿನ ಕಾಮಗಾರಿ ಮಾಡಲಾಗುವುದು. ಚನ್ನಮ್ಮನ ಮೂರ್ತಿ ಸ್ಥಾಪನೆಯ ನಂತರ ಅದೇ ಸ್ಥಳದಲ್ಲಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಎಲ್ಲಿ ಚನ್ನಮ್ಮನ ಮೂರ್ತಿ ಸ್ಥಾಪನೆಯಾಗತ್ತೋ ಅಲ್ಲಿ ರಾಯಣ್ಣನ ಮೂರ್ತಿ ಸ್ಥಾಪನೆ ಆಗಲೇಬೇಕು. ಇದಲ್ಲದೆ, ಅಂಭೇಡ್ಕರ್ ಮೂರ್ತಿಯು ಸಿದ್ಧವಾಗಿದ್ದು, ಶೀಘ್ರದಲ್ಲೇ ಪಟ್ಟಣದಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts