More

    ತಾರಸಿ ತೋಟಕ್ಕೆ ‘ಉತ್ತೇಜನ’

    ಉಡುಪಿ: ನಗರೀಕರಣ ಪ್ರಭಾವದಿಂದ ಕಾಂಕ್ರಿಟ್ ಕಟ್ಟಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೃಷಿ ಭೂಮಿ ಹಿಡುವಳಿ ಕಡಿಮೆಯಾಗುತ್ತಿದೆ. ಹೀಗಾಗಿ ನಗರವಾಸಿಗಳು ತಮ್ಮ ಸೀಮಿತ ಜಾಗದಲ್ಲಿ ತರಕಾರಿ, ಹೂಗಳನ್ನು ಬೆಳೆಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ‘ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ’ ಕಾರ್ಯಕ್ರಮ ಆಯೋಜಿಸಿದೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ 700 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶಿವಳ್ಳಿ ದೊಡ್ಡಣಗುಡ್ಡೆ ತೋಟಗಾರಿಕಾ ಕೇಂದ್ರದಲ್ಲಿ ಕೈತೋಟ ಹಾಗೂ ತಾರಸಿ ಮನೆ ತರಕಾರಿ ಕೃಷಿ ತರಬೇತಿಯನ್ನೂ ನೀಡಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಗೆ 200, ಸಾಲಿಗ್ರಾಮ ಪ.ಪಂ. ವ್ಯಾಪ್ತಿಗೆ 100, ಕಾರ್ಕಳ ಪುರಸಭೆ ವ್ಯಾಪ್ತಿಗೆ 200, ಕುಂದಾಪುರ ಪುರಸಭೆ ವ್ಯಾಪ್ತಿಗೆ 200 ಕಿಟ್ ವಿತರಣೆಗೆ ಗುರಿ ನಿಗದಿ ಮಾಡಲಾಗಿದೆ. ಮನೆಯಲ್ಲಿ ದಿನನಿತ್ಯ ದೊರೆಯುವ ಸಾವಯವ ಉಳಿಕೆ ಪದಾರ್ಥಗಳನ್ನು ಕೈತೋಟದ ಉತ್ಪಾದನಾ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಬಹುದು. ತರಬೇತಿಗೆ ಬಂದವರಿಗೆ ತಾರಸಿ ತೋಟಗಳ ಪ್ರಾಮುಖ್ಯತೆ ಮತ್ತು ಅನುಕೂಲಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಆಯ್ಕೆಯಾದ ಫಲಾನುಭವಿಗಳಿಗೆ 500 ರೂ.ಮೊತ್ತದ ತೋಟಗಾರಿಕೆ ಕಿಟ್ ದೊರೆಯಲಿದೆ. ಇದರಲ್ಲಿ ವಿವಿಧ ತರಕಾರಿ ಬೀಜಗಳು, 5 ಕೆಜಿ ಬಯೋಮಿಕ್ಸ್, ವೆಜಿಟೇಬಲ್ ಸ್ಪೆಷಲ್ ಇರಲಿದೆ. ಜತೆಗೆ ಟೊಮ್ಯಾಟೊ, ಬದನೆ, ಮೆಣಸಿನಕಾಯಿಯ 70 ಗಿಡಗಳನ್ನು ವಿತರಿಸಲಾಗುತ್ತದೆ. 3 ವರ್ಷಗಳಿಂದ ತೋಟಗಾರಿಕಾ ಇಲಾಖೆ ತಾರಸಿ ತೋಟ ಮತ್ತು ಕೈತೋಟ ನಿರ್ಮಾಣಕ್ಕೆ ತರಬೇತಿ ಮತ್ತು ಕಿಟ್‌ಗಳನ್ನು ವಿತರಿಸುತ್ತಿದ್ದು, 2019-20ನೇ ಸಾಲಿನಲ್ಲಿ ಅತೀ ಹೆಚ್ಚು 700 ಮಂದಿಗೆ ನೀಡಲು ಗುರಿ ನಿಗದಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ 600, 2018-19ರಲ್ಲಿ 300 ಮಂದಿಗೆ ಕಿಟ್‌ಗಳನ್ನು ನೀಡಲಾಗಿತ್ತು.

    ತೋಟದ ಅನುಕೂಲಗಳು: ಇಲಾಖೆಯಿಂದ ಕೈತೋಟ ಮತ್ತು ತಾರಸಿ ತೋಟಗಳಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಲು ತಾಂತ್ರಿಕ ಮಾರ್ಗದರ್ಶನ ಮತ್ತು ಉತ್ತೇಜನ ನೀಡಲಾಗುತ್ತದೆ. ಸಾವಯವ ಉಳಿಕೆ ಪದಾರ್ಥಗಳನ್ನು ಬಳಸಿಕೊಂಡು ಎರೆಹುಳಗೊಬ್ಬರ, ಕಾಂಪೋಸ್ಟ್ ಇತ್ಯಾದಿಗಳನ್ನು ತಯಾರಿಸಿ ಮರುಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತಾರಸಿ ತೋಟದಿಂದ ಆರೋಗ್ಯಕರ ಹಾಗೂ ತಾಜಾ ತರಕಾರಿಗಳನ್ನು ಪಡೆಯಲು ಸಾಧ್ಯ. ತಾರಸಿ ತೋಟ ಕಟ್ಟಡದ ತೀವ್ರ ಉಷ್ಣವನ್ನು ತಡೆದು ತಂಪು ಮಾಡುತ್ತದೆ. ಸೊಪ್ಪು ತರಕಾರಿ, ಬಸಳೆ, ಮೂಲಂಗಿ, ಟೊಮ್ಯಾಟೋ ವರ್ಷದ ಎಲ್ಲ ಕಾಲದಲ್ಲೂ ಬೆಳೆಯಬಹುದು. ಕುಂಬಳಕಾಯಿ, ಹೀರೆಕಾಯಿ, ಸಾಂಬಾರ್ ಸೌತೆ, ತುಪ್ಪದ ಹೀರೆಕಾಯಿ ಇತ್ಯಾದಿ ಜೂನ್ -ಅಗಸ್ಟ್ ಮತ್ತು ಜನವರಿ- ಫೆಬ್ರವರಿಯಲ್ಲಿ ತಿಂಗಳಲ್ಲಿ ಬೆಳೆಯಬಹುದು. ಸುಮಾರು 4ರಿಂದ 5 ಜನರಿರುವ ಕುಟುಂಬಕ್ಕೆ ಹಣ್ಣು ಮತ್ತು ತರಕಾರಿಗಳನ್ನು ಒದಗಿಸಲು 500 ಚ.ಮೀ. ಜಾಗ ಸಾಕಾಗುತ್ತದೆ.

    ನಗರ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ತಾರಸಿ ತೋಟ ಮತ್ತು ಕೈ ತೋಟಗಳ ಉತ್ತೇಜನಕ್ಕೆ ತರಬೇತಿ ಹಾಗೂ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಉಡುಪಿಯಲ್ಲಿ ಜ.28ರಂದು 200 ಮಂದಿಗೆ ಕಿಟ್‌ಗಳನ್ನು ನೀಡಿದ್ದೇವೆ. ಇದಕ್ಕೂ ಹೆಚ್ಚಿನ ಬೇಡಿಕೆ ಇತ್ತು. ಸಾಲಿಗ್ರಾಮದಲ್ಲಿ ಫೆ.20ರೊಳಗೆ ಕಿಟ್‌ಗಳನ್ನು ವಿತರಿಸಲಾಗುವುದು.
    ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts