More

    ನನಸಾಗದ ‘ಸಿದ್ದು ನಿಜಕನಸುಗಳು’; ಪುರಭವನ ಮುಂಭಾಗ ಕೆಲ ಕಾಲ ಅಹಿತಕರ ವಾತಾವರಣ

    ಬೆಂಗಳೂರು: ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ವಿಚಾರ ಸಂಬಂಧ ಪುರಭವನ ಮುಂಭಾಗದಲ್ಲಿ ಸೋಮವಾರ ಕೆಲ ಕಾಲ ಆತಂಕ ವಾತಾವರಣ ಸೃಷ್ಟಿಯಾಯಿತು. ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಬರಹಗಾರ ರೋಹಿತ್ ಚಕ್ರತೀರ್ಥ ಸೇರಿ ಇತರ ಗಣ್ಯರ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿತ್ತು. ಅಶ್ವತ್ಥನಾರಾಯಣ ಹೊರತುಪಡಿಸಿ ಉಳಿದ ಗಣ್ಯರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾನಹಾನಿ ಕುರಿತು ಪುಸ್ತಕ ಬಿಡುಗಡೆ ವಿಚಾರ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಪುರಭವನ ಮುಂಭಾಗ ಜಮಾವಣೆಗೊಂಡು,ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಯತ್ನಿಸಿದ್ದರು. ಇದರಿಂದ ಕೆಲ ಕಾಲ ಆತಂಕ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ತಡೆದು ಬಸ್ಸಿನಲ್ಲಿ ಕರೆದೊಯ್ದರು. ಮುಂಜಾಗ್ರತಾ ಕ್ರಮದಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಪುರಭವನ ಮುಂಭಾಗದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಪೊಲೀಸರು ಇನ್ನಷ್ಟು ಬಿಗಿ ಬಂದೋಬಸ್ತ್ ಕೈಗೊಂಡರು.

    ಏತನ್ಮಧ್ಯೆ, ಪುಸ್ತಕ ಬಿಡುಗಡೆ ವಿಚಾರ ಚರ್ಚೆಯಾಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಾನಹಾನಿ ಈ ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್ ‘ಸಿದ್ದು ನಿಜಕನಸುಗಳು’ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ನೀಡಿ ಫೆ.9ಕ್ಕೆ ವಿಚಾರಣೆ ಮುಂದೂಡಿತು. ಕೋರ್ಟ್ ಆದೇಶ ಬರುತ್ತಿದ್ದಂತೆ ಆಯೋಜಕರು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದುಗೊಳಿಸಿದರು.

    ಖಡ್ಗ ಹಿಡಿದು ನಿಂತಿರುವ ಸಿದ್ದು: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ ಪುಸ್ತಕವನ್ನು ಬರೆಯಲಾಗಿದೆ. ಪುಸ್ತಕದ ಮುಖಪುಟದಲ್ಲಿ ಸಿದ್ದರಾಮಯ್ಯ ಖಡ್ಗ ಹಿಡಿದು ಪೋಸ್ ನಿಂತಿದ್ದಾರೆ. ಹಸಿರು ಬಣ್ಣದ ಮುಖಪುಟದಲ್ಲಿ ‘ಸಿದ್ದು ನಿಜಕನಸುಗಳು’ (ಸಂಪುಟ-1), ಇಂದಿರಾ ಕ್ಯಾಂಟೀನ್, ಕೃಷಿಭಾಗ್ಯ ಮತ್ತು ಕ್ಷೀರಧಾರೆ ಯೋಜನೆಗಳ ಹೆಸರು, ಅಂದಿನ ಟಿಪ್ಪು ಈಗಿನ ಸಿದ್ದುವೇ? ಎಂದು ನಮೂದಿಸಲಾಗಿದೆ. ಅಲ್ಲದೆ, ಕರ್ನಾಟಕ ಬಿಜೆಪಿ ಪ್ರಕಟಣೆ ಎಂದು ಹೆಸರು ಹಾಕಲಾಗಿದೆ. ಇದಕ್ಕೆ ಸೆಡ್ಡು ಹೊಡೆದ ಕಾಂಗ್ರೆಸ್, ಟೌನ್‌ಹಾಲ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ‘ಗುಜರಾತ್ ನರಮೇಧ’!, ‘ಬಿಜೆಪಿ ಕಳ್ಳಮಾರ್ಗ’-ಸಂಪುಟ-1 ಪುಸ್ತಕ ಪೋಸ್ಟರ್ ತಯಾರಿಸಿ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿತು. ಈ ಎರಡು ಪುಸ್ತಕದ ಮುಖಪುಟಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಸಿದ್ದುಗೆ ಸೋಲು ಖಚಿತ: ಪುಸ್ತಕ ಬಿಡುಗಡೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ನಾನು ಬಂದಿದ್ದೆ. ಪುಸ್ತಕದಲ್ಲಿ ಸಿದ್ದರಾಮಯ್ಯ ಅವರ ನಿಜಗುಣಗಳ ಬಗ್ಗೆ ಇವೆ. ಸಿದ್ದು ಅವರ ತಪ್ಪುಗಳು ಹೊರಬರಲಿವೆ ಎಂಬ ಭಯದಿಂದ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರು ಮೇಲ್ನೋಟಕ್ಕೆ ಬಸಪ್ಪ, ಒಳಗಡೆ ಉಸಪ್ಪ ಇದ್ದಂತೆ. ಐದು ವರ್ಷ ಆಡಳಿತದಲ್ಲಿ ಎಲ್ಲ ಭಾಗ್ಯಗಳನ್ನು ಕೊಟ್ಟರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಹೀನಾಯವಾಗಿ ಸೋತರು. ಬಾದಾಮಿ ಕ್ಷೇತ್ರದಲ್ಲಿ ಹರಸಾಹಸಪಟ್ಟು ಗೆಲ್ಲುವ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದಾರೆ. ಬದಾಮಿಯ ಜನರು ಈಗಾಗಲೇ ಸಿದ್ದರಾಮಯ್ಯರನ್ನು ತಿರಸ್ಕಾರ ಮಾಡಿರುವ ಕಾರಣದಿಂದಲೇ ಈಗ ಕೋಲಾರ ಕ್ಷೇತ್ರಕ್ಕೆ ಬಂದಿದ್ದಾರೆ. ಈ ಬಾರಿ ಚುನಾವಣೆಯಲ್ಲೂ ಅವರು ಸೋಲುತ್ತಾರೆ ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts