More

    ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ಟೆಂಡರ್

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ಐದು ವರ್ಷಗಳ ಬಳಿಕ ಸ್ಪಷ್ಟ ರೂಪ ಬಂದಿದೆ. ಯೋಜನೆ ಕಾರ್ಯಗತಗೊಳಿಸಲು ಮುಂದಾಗಿರುವ ಇಂಧನ ಇಲಾಖೆ ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಐದು ವರ್ಷಗಳ ಹಿಂದೆ 4,500 ಕೋಟಿ ರೂ.ಗೆ ಸೀಮಿತವಾಗಿದ್ದ ಯೋಜನೆಯ ಗಾತ್ರ ಈಗ 8,500 ಕೋಟಿ ರೂ.ಗೆ ವಿಸ್ತಾರಗೊಂಡಿದೆ.

    ರಾಜ್ಯದ ಎರಡನೇ ಭೂಗರ್ಭ ವಿದ್ಯುತ್ ಯೋಜನೆ ಹಾಗೂ ರಾಜ್ಯದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್. ಕಾರ್ಗಲ್ ಸಮೀಪದ ಹಿರೇಹೆನ್ನಿ ಗ್ರಾಮದ ಬಳಿ ಈ ಯೋಜನೆ ಅನುಷ್ಠಾನವಾಗಲಿದೆ. ನೀರು ಸಂಗ್ರಹ ಟ್ಯಾಂಕ್ ಹಾಗೂ ವಿದ್ಯುತ್ ಉತ್ಪಾದನಾ ಘಟಕ (ಪವರ್ ಸ್ಟೇಷನ್) ನಿರ್ಮಾಣಕ್ಕೆ ಅಂದಾಜು ಮಾಡಿರುವ ಸ್ಥಳದಲ್ಲಿ ಡ್ರಿಲ್ಲಿಂಗ್ ನಡೆಸಿ ಅದರ ವರದಿ ಆಧರಿಸಿ ಅಂತಿಮವಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ಟ್ಯಾಂಕ್, ಪವರ್ ಸ್ಟೇಷನ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
    ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ಕೆಪಿಸಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಂಗೆ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಅಲ್ಲಿಂದ ಹಿರೇಹೆನ್ನಿ ಬಳಿ ಪವರ್ ಸ್ಟೇಷನ್‌ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬಳಿಕ ಈ ನೀರು ಮತ್ತೆ ಗೇರುಸೊಪ್ಪ ತಲುಪಲಿದೆ.
    ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವುದೇ ಅಪರೂಪವಾಗಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳುವುದಕ್ಕೆ ಈ ಯೋಜನೆ ಅನುಕೂಲವಾಗಲಿದೆ ಎಂಬುದು ಕೆಪಿಸಿ ಅಧಿಕಾರಿಗಳ ಅಭಿಪ್ರಾಯ.
    ರಾಜ್ಯದ ಎರಡನೇ ಭೂಗರ್ಭ ಯೋಜನೆ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ. ಪ್ರಸ್ತುತ ವಾರಾಹಿ ಜಲವಿದ್ಯುತ್ ಯೋಜನೆ ಮೂಲಕ ನಾಲ್ಕು ಘಟಕಗಳಲ್ಲಿ 460 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದೀಗ ಎರಡನೇ ಭೂಗರ್ಭ ಯೋಜನೆಯಾಗಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್’ ಸಿದ್ಧವಾಗುತ್ತಿದೆ. ಇದರಿಂದ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ.
    ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗೆ 2017ರಲ್ಲಿ 4,800 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಈಗ ಯೋಜನಾ ಗಾತ್ರ 8,500 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೂ ಹಿಂದೇಟು ಹಾಕದ ಕೆಪಿಸಿ ರಾಜ್ಯದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಎಸ್‌ವಿಪಿ (ಶರಾವತಿ ಕಣಿವೆ ಪ್ರಾಜೆಕ್ಟ್) ಸಾಲಿಗೆ ಸೇರ್ಪಡೆ ಮಾಡಲು ಕೆಪಿಸಿ ಮುಂದಾಗಿದೆ.
    ಪರಿಸರಾಸಕ್ತರ ವಿರೋಧ: ರಾಜ್ಯ ಸರ್ಕಾರ 2019ರಲ್ಲಿ ಶರಾವತಿ ಅಭಯಾರಣ್ಯವನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಸಿಂಗಳೀಕ ಹಾಗೂ ಹಾರ್ನ್‌ಬಿಲ್‌ಗಳ ಸಂರಕ್ಷಣೆಗೆ ಈ ಕ್ರಮ ಅನಿವಾರ್ಯ ಎಂದು ಸರ್ಕಾರವೇ ಹೇಳಿತ್ತು. 43 ಸಾವಿರ ಹೆಕ್ಟೇರ್ ಶರಾವತಿ ಅಭಯಾರಣ್ಯವನ್ನು 93 ಸಾವಿರ ಹೆಕ್ಟೇರ್‌ಗೆ ಹಿಗ್ಗಿಸಲಾಗಿತ್ತು. ಹೀಗಿರುವಾಗ ಅಭಯಾರಣ್ಯ ವ್ಯಾಪ್ತಿಯಲ್ಲಿ ಎರಡು ಸಾವಿರ ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಏಕೆ ಎಂದು ಪರಿಸರಾಸಕ್ತರು ಪ್ರಶ್ನೆ ಎತ್ತಿದ್ದರು. ಅದಕ್ಕೂ ಮುನ್ನ 2017ರಲ್ಲಿ ಯೋಜನೆ ಘೋಷಣೆಯಾದಾಗಲೂ ವ್ಯಾಪಕ ವಿರೋಧ ವ್ಯಕ್ತವಾಗಿ ಪರಿಸರ ಪ್ರೇಮಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಈ ಯೋಜನೆಯಿಂದ ಸುಮಾರು 2 ಲಕ್ಷ ಮರ ಹಾಗೂ 10 ಲಕ್ಷ ಗಿಡಗಳು ನಾಶವಾಗಲಿವೆ. ಕಸ್ತೂರಿ ರಂಗನ್ ವರದಿ ಪ್ರಕಾರ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶರಾವತಿ ಕಣಿವೆ ಪರಿಸರ ಸೂಕ್ಷ್ಮ ವಲಯವಾಗಿದೆ. ಹೀಗಾಗಿ ಇಲ್ಲಿ ಯೋಜನೆ ಜಾರಿ ಮಾಡಿದರೆ ಅಪಾಯ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದರು.
    ಕೋರ್ಟ್ ಕಟಕಟೆಗೆ: ಬಳ್ಳಾರಿಯ ಪರಿಸರಾಸಕ್ತ ಸಂತೋಷ್ ಮಾರ್ಟಿನ್ ಮತ್ತು ಬೆಂಗಳೂರಿನ ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್ ಸಂಘಟನೆ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ವಿರುದ್ಧ ಹೈಕೋರ್ಟ್‌ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಲಿಂಗನಮಕ್ಕಿ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದನೆ ಬಳಿಕ ಪುನಃ ನದಿಗೆ ಸೇರುತ್ತಿರುವ ನೀರನ್ನು ಮೇಲೆತ್ತಿ ವಿದ್ಯುತ್ ಉತ್ಪಾದಿಸಲು ಕೆಪಿಸಿ ಯೋಜಿಸಿದೆ. ಇದಕ್ಕೆ ಕರ್ನಾಟಕ ಸರ್ಕಾರ ಅನುಮತಿಯನ್ನೂ ನೀಡಿದೆ. ಆದರೆ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಪ್ರದೇಶ ಶರಾವತಿ ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. 2020ರಲ್ಲಿ ನ್ಯಾಯಾಲಯ ಸರ್ವೇಗೆ ತಡೆಯಾಜ್ಞೆ ನೀಡಿತ್ತು. ನಂತರ ನಡೆದ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಜಯ ಸಿಕ್ಕಿದ್ದು, ಇದೀಗ ಯೋಜನೆಯು ಟೆಂಡರ್‌ಗೆ ತೆರೆದುಕೊಂಡಿದೆ.
    ಸೆಳೆಯಲಿದೆ ದೇಶದ ಗಮನ: ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅನುಷ್ಠಾನವಾದರೆ ಇದು ದೇಶದ ದೊಡ್ಡ ಭೂಗರ್ಭ ವಿದ್ಯುತ್ ಯೋಜನೆ ಎನಿಸಿಕೊಳ್ಳಲಿದೆ. ತಲಕಳಲೆ ಹಾಗೂ ಗೇರುಸೊಪ್ಪ ನಡುವೆ ಸುರಂಗ ಮಾರ್ಗದ ಮೂಲಕ ವಿದ್ಯುದಾಗಾರ, ನೀರು ಪೂರೈಕೆಯ ಕಾಂಕ್ರೀಟ್ ಕಾಲುವೆಗಳು ಸಾಗಿ ಹೋಗಲಿವೆ. ಪವರ್‌ಸ್ಟೇಷನ್ ಕೂಡ ಸುರಂಗದಲ್ಲೇ ನಿರ್ಮಾಣವಾಗಲಿದೆ. ತಲಾ 250 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ 8 ಘಟಕಗಳು ಕಾರ್ಯನಿರ್ವಹಿಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts