More

    ಗುಡಿಸಲು ವಾಸಿಗಳಿಗೆ ತಾತ್ಕಾಲಿಕ ಸೂರು

    ಹೆಬ್ರಿ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಗುಂಡಳಾ ಸಮೀಪದ ಮಂಗನಜೆಡ್ದು ಎಂಬಲ್ಲಿ ಹೀನಾಯ ಸ್ಥಿತಿಯಲ್ಲಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ದಾನಿಗಳ ನೆರವಿನಿಂದ ತಾತ್ಕಾಲಿಕವಾಗಿ ಶೀಟಿನ ಮನೆ ನಿರ್ಮಿಸಲಾಗಿದೆ.
    ಸುತ್ತ ಅಡಕೆ ಹಾಳೆಕಟ್ಟಿ, ಸೋಗೆಯ ಛಾವಣಿಯ ಗುಡಿಸಲಿನಲ್ಲಿ ಕುಟುಂಬ ಜೀವನ ನಡೆಸುತ್ತಿತ್ತು. ಈಗ ಸಿಮೆಂಟ್ ಶೀಟ್ ಮತ್ತು ಟಾರ್ಪಾಲಿನ್ ಹೊಂದಿಸಿದ ತಾತ್ಕಾಲಿಕ ಮನೆಯನ್ನು ದಾನಿಗಳ ಸಹಕಾರದಿಂದ ನಿರ್ಮಿಸಲಾಯಿತು.

    ಮಂಗನಜೆಡ್ಡುವಿನ ಗೌರಿ ಕುಟುಂಬದ ಸ್ಥಿತಿ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಮಗ, ಸೊಸೆ ಹಾಗೂ ಇಬ್ಬರು ಮಕ್ಕಳು ಕುಟುಂಬದ ಸದಸ್ಯರು. ಮಗ ವಿಶ್ವನಾಥ್‌ಗೆ ಒಂದು ಕಣ್ಣು ಕಾಣಿಸುತ್ತಿಲ್ಲ. ಕಳೆದ ಲಾಕ್‌ಡೌನ್‌ನಲ್ಲಿ ಈ ಕುಟುಂಬ ಜೀವನ ನಿರ್ವಃಣೆಗೆ ತೀರಾ ಪಡಿಪಾಟಿಲು ಪಟ್ಟಿತ್ತು.

    ವರದಿ ಪ್ರಕಟಗೊಂಡ ನಂತರ ಹೆಬ್ರಿ ಪರಿಸರದ ಸುತ್ತಮುತ್ತಲಿನ ಅನೇಕ ದಾನಿಗಳು ಮುಂದೆ ಬಂದು ಕುಟುಂಬಕ್ಕೆ ದಿನಸಿ, ಬಟ್ಟೆ, ಆರ್ಥಿಕ ಸಹಾಯ ನೀಡಿದ್ದರು. ಹೆಬ್ರಿ ತಹಸೀಲ್ದಾರ್ ಪುರಂದರ ಕೆ. ಗುಡಿಸಲು ವಾಸಿಗಳಿಗೆ ಸರ್ಕಾರದ ನೆರವು ನೀಡುವುರೊಂದಿಗೆ ಸ್ವಂತ ಖರ್ಚಿನಲ್ಲಿ ಪಡಿತರ ನೀಡಿದ್ದರು. ಸ್ವತಃ ತಹಸೀಲ್ದಾರ್ ಉಪಸ್ಥಿತಿಯಲ್ಲಿ ಕುಟುಂಬದ ಸದಸ್ಯರಿಗೆ, ಆಧಾರ್ ಕಾರ್ಡ್ ಮತ್ತು ವೃದ್ಧಾಪ್ಯ ಪಿಂಚಣಿ ಮತ್ತು ಅಂಗವಿಕಲರ ಪಿಂಚಣಿ ಮಾಡಿಸಿಕೊಟ್ಟಿದ್ದರು.

    ಶಿವಪುರ ಸುರೇಶ್ ಶೆಟ್ಟಿ, ಆನಂದ ಬೆಳಗುಂಡಿ, ಗುಂಡಳಾ ಸದಾಶಿವ ಶೆಟ್ಟಿ, ಸುಕುಮಾರ ಮುನಿಯಾಲು, ವಾದಿಯಾದ ಶೆಟ್ಟಿ ಮತ್ತು ಶಾಂತಿನಿಕೇತನ ಯುವ ವೃಂದ ಕುಡಿಬೈ ಲ್ ಕುಚ್ಚೂರು ತಂಡದ ಸದಸ್ಯರ ಸೇವೆಯನ್ನು ಮನೆಯ ಗೌರಮ್ಮ ಸ್ಮರಿಸಿದರು.

    ಬೆಳಕು ನೀಡಿದ ಹೆಬ್ರಿ ಸಿಟಿ ಲಯನ್ಸ್ ಕ್ಲಬ್: ಸೆಲ್ಕೋ ಫೌಂಡೇಶನ್ ಸಹಭಾಗಿತ್ವದೊಂದಿಗೆ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸೋಲಾರ್ ನೀಡುವ ಮೂಲಕ ಬೆಳಕು ನೀಡಲಾಗಿತ್ತು. ನಂತರದಲ್ಲಿ ಮನೆ ನಿರ್ಮಿಸಲು ಸುಮಾರು 15 ಸಿಮೆಂಟ್ ಶೀಟ್‌ಗಳನ್ನು ನೀಡಿದ್ದರು. ತಾತ್ಕಾಲಿಕ ಮನೆಯನ್ನು ಆನಂದ ಬೆಳಗುಂಡಿ ನಿರ್ಮಿಸಿಕೊಟ್ಟರು. ಶಿವಪುರ ಗ್ರಾಮ ಪಂಚಾಯಿತಿ ವತಿಯಿಂದ ಮನೆಗೆ ಬೇಕಾದ ಪರಿಕರಗಳನ್ನು ಉಚಿತವಾಗಿ ನೀಡಲಾಯಿತು. ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ ಅಗತ್ಯ ಸಾಮಗ್ರಿ ನೀಡಿ ಧನಸಹಾಯ ಒದಗಿಸಿತ್ತು.

    ಮೊದಲ ಬಾರಿಗೆ ಅವರನ್ನು ಸಂಪರ್ಕಿಸಿದಾಗ ಸ್ಥಿತಿಯನ್ನು ಕಂಡು ಬಹಳ ಬೇಸರವಾಗಿತ್ತು. ಈಗ ತಾತ್ಕಾಲಿಕ ಮನೆ ನಿರ್ಮಾಣವಾಗಿದೆ. ಇದರಲ್ಲಿ ಮಾಧ್ಯಮ ಮಿತ್ರರ ಪಾತ್ರವೂ ಅಪಾರವಾದದ್ದು. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
    ಡಾ.ಭಾರ್ಗವಿ ಆರ್. ಐತಾಳ್
    ಅಧ್ಯಕ್ಷೆ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts