More

    ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವ್ಯವಸ್ಥೆ, ಶಿರೂರಿನಲ್ಲಿ ಕಂಗಾಲಾಗಿದ್ದ 274 ಮಂದಿ

    ಬ್ರಹ್ಮಾವರ: ಕರೊನಾ ವೈರಸ್ ನಿಯಂತ್ರಣ ಸಲುವಾಗಿ ಉಡುಪಿ ಜಿಲ್ಲೆಯ ವಿವಿಧೆಡೆ ವಾಸವಿದ್ದ ಉತ್ತರ ಕರ್ನಾಟಕದ ಹಲವಾರು ವಲಸೆ ಕಾರ್ಮಿಕರಿಗೆ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

    ಸರ್ಕಾರದ ಲಾಕ್‌ಡೌನ್ ಆದೇಶದಿಂದ ಅತ್ತ ಅವರ ಊರಿಗೆ ಹೋಗಲಾಗದೆ ಇಲ್ಲಿ ಇರಲೂ ಸಾಧ್ಯವಾಗದೆ ಚಿಕ್ಕ ಮಕ್ಕಳು ಸೇರಿದಂತೆ ಅನ್ನ ಆಹಾರವಿಲ್ಲದೆ ಉಡುಪಿ ಜಿಲ್ಲಾ ಗಡಿ ಭಾಗದ ಶಿರೂರಿನಲ್ಲಿ ಕಂಗಾಲಾಗಿದ್ದರು. ಇದನ್ನರಿತ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪರ್ಯಾಯ ವ್ಯವಸ್ಥೆಗೆ ಬ್ರಹ್ಮಾವರ ತಹಸೀಲ್ದಾರ ಕಿರಣ್ ಗೌರಯ್ಯ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಬ್ರಹ್ಮಾವರ ಹೋಬಳಿ ಕಂದಾಯ ಇಲಾಖೆ ತಂಡ ಶನಿವಾರ ಮಧ್ಯಾಹ್ನ 274 ಮಂದಿ ವಲಸೆ ಕಾರ್ಮಿಕರನ್ನು ಪ್ರತ್ಯೇಕ ವಾಹನದಲ್ಲಿ ಕರೆಸಿ ಊಟ, ವಸತಿ ಮತ್ತು ಆರೋಗ್ಯ ವಿಚಾರಿಸಿ 30 ಕೊಠಡಿಯಲ್ಲಿ ಪ್ರತ್ಯೇಕವಾಗಿ ಇರುವಂತೆ ವ್ಯವಸ್ಥೆ ಮಾಡಿದ್ದಾರೆ.

    ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಮತ್ತು ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ರಾಜು, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಚೆಲುವರಾಜು ನಾನಾ ಗ್ರಾಮದ 15 ಮಂದಿ ಗ್ರಾಮ ಲೆಕ್ಕಿಗರು, ಹಲವಾರು ಪೊಲೀಸ್ ಸಿಬ್ಬಂದಿ, ಹನೆಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಕಾಲೇಜು, ಗ್ರಾಪಂ ಸಿಬ್ಬಂದಿ ಸಹಕರಿಸಿದ್ದರು.

    ದೇವಳ, ಬಾರಕೂರು ಜನತೆ ಸಹಕಾರ: ಬಾರಕೂರಿನಲ್ಲಿ ವ್ಯವಸ್ಥೆ ಕಲ್ಪಿಸಿದ ಎಲ್ಲ ವಲಸೆ ಕಾರ್ಮಿಕರಿಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ವತಿಯಿಂದ ಏಪ್ರಿಲ್ 14ರ ತನಕ ಊಟದ ವ್ಯವಸ್ಥೆ ಮಾಡಲಾಗಿದೆ. ಬಾರಕೂರಿನ ಜನತೆ ನೀರು ಉಪಾಹಾರ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿದ್ದರು. ವಾಸ್ತವ್ಯವಿರುವ ಇವರಿಗೆ ಸಹಕರಿಸ ಬಯಸುವ ಸಾರ್ವಜನಿಕರು ಹನೆಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts