More

    ಬಿಟ್ ಕಾಯಿನ್ ಪ್ರಕರಣದ ಡಿವೈಎಸ್ಪಿ ಶ್ರೀಧರ ಪೂಜಾರಗೆ ಹೈಕೋರ್ಟ್ ರಿಲೀಫ್

    ಬೆಂಗಳೂರು : ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ ಅವರ ವಿರುದ್ಧದ ಘೋಷಿತ ಆರೋಪಿ ಆದೇಶವನ್ನು ಗುರುವಾರ ಹೈಕೋರ್ಟ್ ರದ್ದುಪಡಿಸಿದೆ.


    ಎಫ್.ಐ.ಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಶ್ರೀಧರ್ ಕೆ. ಪೂಜಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರ ಏಕ ಸದಸ್ಯ ಪೀಠ ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿದ್ದು, ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದೆ.


    ಜತೆಗೆ ಮೇ 8ರಂದು ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಶ್ರೀಧರ್ ಪೂಜಾರ ಸಹಕರಿಸಬೇಕು. ಜಾಮೀನು ಅರ್ಜಿ ಸಲ್ಲಿಸಿದ್ದರೆ ಪೊಲೀಸರು ಆಕ್ಷೇಪಿಸಬಾರದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.


    ಶ್ರೀಧರ್ ಪೂಜಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ದೇಶದಲ್ಲಿ ಕಾನೂನು ಪಾಲಿಸುವ ನಾಗರಿಕರಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೆ ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅವರ ವೃತ್ತಿಪರ ಘನತೆಯನ್ನು ಹಾಳು ಮಾಡುವ ಸಲುವಾಗಿ ಪ್ರಕರಣದಲ್ಲಿ ಅವರನ್ನು ಆರೋಪಿ ಎಂಬಂತೆ ಬಿಂಬಿಸಲಾಗಿದೆ.

    ಮಧ್ಯಂತರ ಆದೇಶದ ಮೇರೆಗೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿದ್ದು, ತನಿಖೆಗೂ ಸಹಕರಿಸಿದ್ದಾರೆ. ಆದರೆ, ಪ್ರತಿವಾದಿಗಳು ಅವರು ತನಿಖೆಗೆ ಹಾಜರಾಗಿಲ್ಲ ಎಂದಿರುವುದು ಆಧಾರ ರಹಿತ ಆಪಾದನೆ. ಜತೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡದೆ ವಾರೆಂಟ್ ಜಾರಿಗೊಳಿಸಿದ್ದು, ಕಾನೂನಿಗೆ ವಿರುದ್ಧವಾದ ನಡೆ.

    ಹಾಗಾಗಿ ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದ್ದು, ಮುಂದಿನ ಎಲ್ಲ ಹಂತದ ತನಿಖೆಗೂ ಆರೋಪಿಗಳು ಸಹಕರಿಸುವುದಾಗಿ ಭರವಸೆ ನೀಡಿದ್ದರು.


    ನಿನ್ನೆಯ ತಪ್ಪುಗಳೇ ನಾಳಿನ ಪಾಠ….!
    ಶ್ರೀಧರ ಪೂಜಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು ಕೂಡ ವಿಚಾರಣೆಗೆ ಹಾಜರಾಗಿಲ್ಲ ಎಂದಿರುವ ಬಗ್ಗೆ ಅರುಣ್ ಶ್ಯಾಮ್ ಅಸಮಾಧಾನ ಹೊರಹಾಕಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ನಿನ್ನೆಯ ತಪ್ಪುಗಳೇ ನಾಳಿನ ಪಾಠಗಳು’. ಪ್ರಾಸಿಕ್ಯೂಷನ್ ಏಜೆನ್ಸಿ ಚಿಂತನೆ ಬದಲಾಗಬೇಕಾಗಿದೆ. ಇಲ್ಲಿ ಆಧಿಕಾರಿಗಳು, ಆರೋಪಿಗಳನ್ನು ದೇಶ ವಿರೋಧಿಗಳು ಎಂದು ಭಾವಿಸುವುದರ ಬದಲಿಗೆ ಯಾರೋ ಒಬ್ಬ ಪ್ರಜೆ ಸಮಾಜಕ್ಕೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಆ ವ್ಯಕ್ತಿಯನ್ನು ಹೇಗೆ ಕಾನೂನಿನ ಚೌಕಟ್ಟಿನಲ್ಲಿ ತಂದು ನಿಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಮಾಜಕ್ಕೆ ಆರೋಪಿಗಳಿಂದಾದ ಕಂಟಕವನ್ನು ನಿವಾರಣೆ ಮಾಡಬೇಕು. ಆ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಿ ಎಂದು ಮೌಖಿಕವಾಗಿ ಸಲಹೆ ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts