More

    ದೇಗುಲ ಪ್ರವೇಶ ವ್ಯಾಜ್ಯ ಇತ್ಯರ್ಥ: ತಹಸೀಲ್ದಾರ್ ಮಂಜುನಾಥ್ ಸಮ್ಮುಖದಲ್ಲಿ ಶಾಂತಿ ಸಭೆ


    ನೆಲಮಂಗಲ: ಯಂಟಗಾನಹಳ್ಳಿ ಗ್ರಾಪಂನ ಮಲ್ಲರಬಾಣವಾಡಿಯಲ್ಲಿ ಎದುರಾಗಿದ್ದ ಎರಡು ಕೋಮಿನ ಸಂಘರ್ಷವನ್ನು ತಹಸೀಲ್ದಾರ್ ಸಮ್ಮುಖದಲ್ಲಿ ಬಗೆಹರಿಸಲಾಯಿತು.


    ಮುಜರಾಯಿ ಇಲಾಖೆಯ ವೀರಭದ್ರಸ್ವಾಮಿ, ಆಂಜನೇಯ ಮತ್ತು ಪಟ್ಟಳದಮ್ಮದೇವಾಲಯಕ್ಕೆ ದಲಿತರ ಪ್ರವೇಶಕ್ಕೆ ಅನುಮತಿ ಇಲ್ಲ. ದಸರಾ ಸಂದರ್ಭದಲ್ಲಿ 3 ದೇವರನ್ನು ಮೆರವಣಿಗೆ ಮಾಡುತ್ತಿದ್ದು, ದಲಿತರು ವಾಸ ಮಾಡುವ ಪ್ರದೇಶಕ್ಕೆ ದೇವರನ್ನು ತೆಗೆದುಕೊಂಡು ಹೋಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಎರಡು ಸಮುದಾಯದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇತ್ತೀಚೆಗೆ ಡಿಸಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.


    ಸಮಸ್ಯೆ ಬಗೆಹರಿಯದ ಕಾರಣ ಸೆ.30ರಂದು ಪರಿಶಿಷ್ಟ ಜಾತಿ, ಪಂಗಡದವರು ವಾಸಿಸುತ್ತಿದ್ದ ಪ್ರದೇಶಕ್ಕೆ ದೇವರ ಉತ್ಸವ ಮೂರ್ತಿ ತೆಗೆದುಕೊಂಡು ಬರುವುದಿಲ್ಲ ಮತ್ತು ದೇವಾಲಯಕ್ಕೆ ಪರಿಶಿಷ್ಟರಿಗೆ ಪ್ರವೇಶವಿಲ್ಲ ಎಂದು ಕೆಲ ಗ್ರಾಮಸ್ಥರು ನೀಡಿದ್ದ ಮಾಹಿತಿ ಮೇರೆಗೆ ಶುಕ್ರವಾರ ತಹಸೀಲ್ದಾರ್ ಕೆ.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎರಡು ಸಮುದಾಯದ ನಡುವಿನ ಹಿರಿಯರ ಮುಖಂಡರೊಂದಿಗೆ ಶಾಂತಿ ಸಭೆ ಹಮ್ಮಿಕೊಂಡು ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಲಾಯಿತು.


    ದೇವರ ವಿಚಾರವಾಗಿ ಜಾತಿ ಮತ್ತು ರಾಜಕೀಯ ತರಬಾರದು. ಪ್ರತಿಯೊಬ್ಬರೂ ಸಮಾನರಾಗಿದ್ದು, ಸಹೋದರ ಮನೋಭಾವನೆಯೊಂದಿಗೆ ಜೀವನ ನಡೆಸಬೇಕು. ತಾಲೂಕಿನಲ್ಲಿ ಯಾವುದೇ ಅಸ್ಪೃಶ್ಯತೆ ಆಚರಣೆ ನಡೆದಿಲ್ಲ. ಮುಂದೆಯೂ ಅದಕ್ಕೆ ಆಸ್ಪದ ಬೇಡ. ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಎಚ್ಚರಿಕೆ ನೀಡಿದರು.

    ದೇವಾಲಯಕ್ಕೆ ಪ್ರವೇಶ: ಹಿರಿಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ ಬಳಿಕ ಸ್ನೇಹ ಸಂಬಂಧ ಮೂಡಿ, ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು.


    ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಬೀಟ್ ಪೊಲೀಸರು ಈ ಮೊದಲೇ ಮೇಲಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
    ಗ್ರಾಪಂ ಸದಸ್ಯರಾದ ರುದ್ರಪ್ಪ, ವಿರುಪಾಕ್ಷಯ್ಯ, ಮುಖಂಡರಾದ ಎಂ.ಬಿ.ಪ್ರಕಾಶ್, ಎಂ.ಎಚ್.ಜಯರಾಮಯ್ಯ, ಮುನಿಕುಮಾರ್, ಶಿವರಾಜು, ದೊಡ್ಡರಂಗಯ್ಯ, ಶ್ರೀನಿವಾಸ್, ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts