ನವದೆಹಲಿ: ‘ವಾಟ್ಸ್ಆ್ಯಪ್’ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಂ’, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್ ಆದ ನಾನ್-ಗೇಮಿಂಗ್ ಆ್ಯಪ್ ಆಗಿ ಹೊರಹೊಮ್ಮಿದೆ. ಸೆನ್ಸಾರ್ ಟವರ್ ನೀಡಿರುವ ವರದಿಯ ಪ್ರಕಾರ 2021 ರ ಜನವರಿಯಲ್ಲಿ ಟೆಲಿಗ್ರಾಂ 63 ಮಿಲಿಯನ್ ಇನ್ಸ್ಟಾಲ್ಗಳನ್ನು ಕಂಡಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಈವರೆಗೆ ‘ಟಿಕ್ಟಾಕ್’ ಆ್ಯಪ್ಗಿದ್ದ ಮೊದಲ ಸ್ಥಾನವನ್ನು ತಾನು ಪಡೆದುಕೊಂಡಿದೆ.
2020ರ ಡಿಸೆಂಬರ್ ತಿಂಗಳಲ್ಲಿ 9 ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಜನವರಿ ತಿಂಗಳಲ್ಲಿ ದಿಢೀರನೇ ಮೊದಲ ಸ್ಥಾನಕ್ಕೇರಿದೆ. ಮತ್ತು ಒಟ್ಟು ಡೌನ್ಲೋಡ್ ಸಂಖ್ಯೆಯಲ್ಲಿ ಶೇ.24 ರಷ್ಟು ಭಾರತೀಯ ಬಳಕೆದಾರರದ್ದೇ ಆಗಿದೆ. ಹೀಗಾಗಿ ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿಯ ಹಿನ್ನೆಲೆಯಲ್ಲಿ ಭಾರತೀಯ ಬಳಕೆದಾರರು ಪರ್ಯಾಯ ಮೆಸೇಂಜಿಂಗ್ ಆ್ಯಪ್ಗಳಿಗಾಗಿ ಹುಡುಕಾಡಿದ್ದು, ಟೆಲಿಗ್ರಾಂನ ಈ ಸಾಧನೆಗೆ ಇಂಬು ನೀಡಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಯೋಧನಿಗೊಂದು ಹೃದಯಸ್ಪರ್ಶಿ ಸ್ವಾಗತ- ಹೂವಿನಿಂದ ಅಲಂಕೃತಗೊಂಡ ಚಿಕ್ಕಮಗಳೂರಿನ ಬಿದರೆ ಗ್ರಾಮ
2020 ರ ಜನವರಿಯಲ್ಲಿನ ಅಂಕಿಅಂಶಗಳಿಗೆ ಹೋಲಿಸಿದರೆ ಟೆಲಿಗ್ರಾಂನ ಈ ಬಾರಿಯ ಡೌನ್ಲೋಡ್ ಗತಿಯು ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ಲೇ ಸ್ಟೋರ್ನಲ್ಲಿ ಮೊದಲ ಸ್ಥಾನ ಗಳಿಸಿದರೆ, ಆ್ಯಪಲ್ನ ಆ್ಯಪ್ ಸ್ಟೋರ್ನಲ್ಲಿ ನಾಲ್ಕನೇ ಸ್ಥಾನವನ್ನು ಟೆಲಿಗ್ರಾಂ ಗಳಿಸಿದೆ. ಆದರೆ ಐಒಎಸ್ ಡಿವೈಸ್ಗಳಲ್ಲಿ ಟಿಕ್ಟಾಕ್ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಯೂಟ್ಯೂಬ್ ಮತ್ತು ಜೂಮ್ ಅದರ ಹಿಂದಿವೆ.
ಮತ್ತೊಂದು ಮೆಸೇಜಿಂಗ್ ಆ್ಯಪ್ ಆದ ಸಿಗ್ನಲ್ ಕೂಡ ಡೌನ್ಲೋಡ್ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಎರಡನೇ ಅತಿ ಹೆಚ್ಚು ಡೌನ್ಲೋಡ್ ಗಳನ್ನು ಕಂಡ ಆ್ಯಪ್ ಆಗಿ ಸಿಗ್ನಲ್ ಹೊರಹೊಮ್ಮಿದೆ. ಮತ್ತೆ ಒಟ್ಟಾರೆಯಾಗಿ ಮೂರನೇ ಸ್ಥಾನ ಗಳಿಸಿದ್ದು, ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ 10 ನೇ ಸ್ಥಾನ ಪಡೆದು ಟಾಪ್ ಟೆನ್ ಸೇರಿದೆ.
ಭಾರತದಲ್ಲಿ ವೀಡಿಯೋ ಶೇರಿಂಗ್ ಆ್ಯಪ್ ಟಿಕ್ಟಾಕ್ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಅದೇ ತೆರನ ಮೇಡ್ ಇನ್ ಇಂಡಿಯಾ ಆ್ಯಪ್ ಆದ ಮೋಜ್ ಗೆ ಪ್ಲೇ ಸ್ಟೋರ್ ನಲ್ಲಿ 8 ನೇ ಸ್ಥಾನ ದೊರಕಿದೆ. ಮೋಜ್, ಈವರೆಗೆ 100 ಮಿಲಿಯನ್ ಡೌನ್ಲೋಡ್ಗಳನ್ನು ಕಂಡಿದೆ. ತನ್ನ ನಿಯಮಗಳ ಬಗೆಗಿನ ವಿವಾದಗಳ ನಡುವೆಯೂ ವಾಟ್ಸಾಪ್ ಒಟ್ಟಾರೆ 5ನೇ ಸ್ಥಾನದಲ್ಲಿ ಮುಂದುವರೆದಿದೆ.(ಏಜೆನ್ಸೀಸ್)
ಬಾಲಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೈಕ್ ಸವಾರರ ಪತ್ತೆಗೆ ನೆರವಾಯ್ತು ಫೇಸ್ಬುಕ್ ಪೋಸ್ಟ್!
ಜಲಸೇನೆಯ ಸೇಲರ್ನನ್ನು ಜೀವಂತ ಸುಟ್ಟ ಅಪಹರಣಕಾರರು