More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್‌ಗೆ ಕೈಕೊಟ್ಟ ಪಿಸ್ತೂಲ್, ತಪ್ಪಿದ ಪದಕ!

    ಟೋಕಿಯೊ: ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪದಕ ಗೆಲುವಿನ ಫೇವರಿಟ್ ಎನಿಸಿದ್ದ ಯುವ ಶೂಟರ್ ಮನು ಭಾಕರ್‌ಗೆ ಪಿಸ್ತೂಲ್ ಕೈಕೊಡುವುದರೊಂದಿಗೆ ಫೈನಲ್‌ಗೇರುವ ಅವಕಾಶ ತಪ್ಪಿಹೋಯಿತು. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅವರ ಪಿಸ್ತೂಲ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಸರಿಪಡಿಸಿಕೊಳ್ಳಲು ಸುಮಾರು 20 ನಿಮಿಷ ವ್ಯರ್ಥವಾಯಿತು. ಇದರ ನಡುವೆಯೂ ಅಮೋಘ ನಿರ್ವಹಣೆ ತೋರಿದ 19 ವರ್ಷದ ಮನು ಕೊನೆಗೆ 12ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರಿಂದಾಗಿ ಸ್ಪರ್ಧೆಯ ಮೊದಲ 2 ದಿನಗಳಲ್ಲೂ ಭಾರತೀಯ ಶೂಟರ್‌ಗಳು ಪದಕದ ಖಾತೆ ತೆರೆಯದೆ ನಿರಾಸೆ ತಂದರು.

    ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಮೇಲೆ ಚಿನ್ನದ ನಿರೀಕ್ಷೆಯಲ್ಲಿ ಇಡಲಾಗಿತ್ತು. ಆದರೆ ಶೂಟಿಂಗ್ ಸ್ಪರ್ಧೆಯಲ್ಲಿ ಶೇ. 0.01 ಸಾಧ್ಯತೆ ಇರುವ ಶಸ್ತ್ರಾಸ್ತ್ರದಲ್ಲಿನ ದೋಷ ಮನು ಪಾಲಿಗೆ ನಿರ್ಣಾಯಕ ಘಟ್ಟದಲ್ಲೇ ಎದುರಾಯಿತು. ಈ ಅತಿ ದುರಾದೃಷ್ಟದ ಘಟನೆ ಮನುಗೆ ಸಾಕಷ್ಟು ಹಿನ್ನಡೆ ತಂದಿತು. ಇದರ ನಡುವೆಯೂ ಅವರು 575 ಅಂಕ ಗಳಿಸಿದರು. 577 ಅಂಕ ಗಳಿಸಿದ್ದರೆ ಅವರು ಫೈನಲ್‌ಗೇರುತ್ತಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೋರ್ವ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್ (574) 13ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಅನುಭವಿ ದೀಪಕ್ ಕುಮಾರ್ (624.7) ಮತ್ತು ಯುವ ಶೂಟರ್ ದಿವ್ಯಾಂಶ್ ಸಿಂಗ್ ಪನ್ವರ್ (622.8) ಕೂಡ ಫೈನಲ್‌ಗೇರಲು ಸಲರಾಗದೆ, ಕ್ರಮವಾಗಿ 26 ಮತ್ತು 32ನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಇದನ್ನೂ ಓದಿ:  ಒಲಿಂಪಿಕ್ಸ್ ​ಬೆಳ್ಳಿ ವಿಜೇತೆ ಮೀರಾಬಾಯಿ ಚಿನ್ನದ ಕಿವಿಯೋಲೆಗೆ ಅನುಷ್ಕಾ ಶರ್ಮ ಫಿದಾ!

    ಅಡಚಣೆಯಲ್ಲೂ ಮನು ದಿಟ್ಟ ನಿರ್ವಹಣೆ
    ವಿಶ್ವ ನಂ. 2 ಶೂಟರ್ ಮನು ಭಾಕರ್ ಅಗ್ರ 8 ಸ್ಪರ್ಧಿಗಳ ಫೈನಲ್‌ಗೇರುವ ಛಲದೊಂದಿಗೆ ಉತ್ತಮ ಆರಂಭವನ್ನೇ ಕಂಡಿದ್ದರು. ಪಿಸ್ತೂಲ್‌ನಲ್ಲಿ ದೋಷ ಕಾಣಿಸಿಕೊಂಡಾಗ ಅವರು 55 ನಿಮಿಷಗಳಲ್ಲಿ 44 ಶಾಟ್ ಹೊಡೆಯಬೇಕಾಗಿತ್ತು. ಪಿಸ್ತೂಲ್‌ನಲ್ಲಿನ ತಾಂತ್ರಿಕ ದೋಷ ಸರಿಪಡಿಸಿಕೊಂಡು ಅವರು ಸ್ಪರ್ಧೆಗೆ ಮರಳಿದ ಬಳಿಕ 36 ನಿಮಿಷಗಳಲ್ಲೇ ಎಲ್ಲ ಶಾಟ್‌ಗಳನ್ನು ಪೂರೈಸಿದರು. ಇದು ಯಾವುದೇ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಅಸಂಭವ ಎನಿಸುವಂಥ ನಿರ್ವಹಣೆ. ಆದರೆ ಅಡಚಣೆಯ ಬಳಿಕ ಎದುರಾದ ಅನಗತ್ಯ ಒತ್ತಡದಿಂದಾಗಿ ಅವರಿಗೆ ನಿಖರ ಗುರಿ ಇಡುವುದು ಕಷ್ಟಕರವಾಗಿತ್ತು. ಈ ಮುನ್ನ 2019ರ ಮ್ಯೂನಿಚ್ ವಿಶ್ವಕಪ್‌ನಲ್ಲೂ ಮನು ಪಿಸ್ತೂಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿತ್ತು. ಬಳಿಕ ಮತ್ತೊಂದು ಸ್ಪರ್ಧೆಯಲ್ಲಿ ಅವರು ಪದಕ ಗೆದ್ದು ಭರ್ಜರಿ ಪುನರಾಗಮನ ಕಂಡಿದ್ದರು.

    ಹಿಡಿಕೆ ಮುರಿದ ಕಾರಣ ಮನು ಪಿಸ್ತೂಲ್ ಕೈಕೊಟ್ಟಿತ್ತು. ಅದನ್ನು ಸರಿಪಡಿಸಿಕೊಳ್ಳಲು ಅವರು ಸ್ಪರ್ಧೆಯ ನಡುವೆಯೇ, ಪ್ರತ್ಯೇಕವಾಗಿ ನಿಗದಿ ಪಡಿಸಿದ್ದ ಜಾಗಕ್ಕೆ ಹೋಗಿ ಬರಬೇಕಾಯಿತು. ಜತೆಗೆ ಪರಿಶೀಲನೆಗೆ ತೀರ್ಪುಗಾರರು ಮತ್ತು ತಮ್ಮ ಕೋಚ್ (ರೋನಕ್ ಪಂಡಿತ್) ಅವರನ್ನು ಕರೆದೊಯ್ಯಬೇಕಾಗಿತ್ತು.

    ಇನ್ನೂ 2 ಸ್ಪರ್ಧೆ ಬಾಕಿ
    ಮೊದಲ ಸ್ಪರ್ಧೆಯಲ್ಲಿ ದುರಾದೃಷ್ಟ ಕಾಡಿದರೂ, ಮನು ಭಾಕರ್‌ಗೆ ಕೂಡದಲ್ಲಿ ಇನ್ನೂ 2 ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಅವಕಾಶವಿದೆ. ಮಂಗಳವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಸೌರಭ್ ಚೌಧರಿ ಜತೆಗೆ ಮನು ಕಣಕ್ಕಿಳಿಯಲಿದ್ದಾರೆ. ಬಳಿಕ ಶುಕ್ರವಾರ 25 ಮೀ. ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. ‘ಅದೃಷ್ಟ ನನಗೆ ಎಷ್ಟರವರೆಗೆ ಕೈಕೊಡುತ್ತದೋ ನೋಡೇ ಬಿಡುತ್ತೇನೆ’ ಎಂದು ಮನು ಭಾನುವಾರದ ನಿರಾಸೆಯ ಬಳಿಕ ಅಪ್ಪನೊಂದಿಗೆ ಮಾತನಾಡುತ್ತ ಹೇಳಿದ್ದಾರೆ ಎಂದೂ ವರದಿಯಾಗಿದೆ.

    ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts