More

    ಬೆಳೆ ಸಮೀಕ್ಷೆಗೆ ತಾಂತ್ರಿಕ ಅಡ್ಡಿ

    ನಿಶಾಂತ್ ಬಿಲ್ಲಂಪದವು, ವಿಟ್ಲ

    ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ನೆಟ್‌ವರ್ಕ್ ಸಮಸ್ಯೆಯಾದರೂ ರೈತರಿಗೆ ತಮ್ಮ ಜಮೀನಿನ ಸಮೀಕ್ಷೆ ಮಾಡಲಾಗದ ಪರಿಸ್ಥಿತಿ ಬಂದಿದ್ದು, ತಂತ್ರಜ್ಞಾನದ ಎಡವಟ್ಟಿನಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಸಂಭವಿಸಲಿದೆ.

    2021-22ನೇ ಸಾಲಿನ ಬೆಳೆ ಸರ್ವೇ ಕಾರ್ಯವನ್ನು ಜುಲೈ ಮೊದಲ ವಾರದಿಂದ ಆರಂಭಿಸಲು ಅಧಿಕೃತ ಆ್ಯಪ್ ನೀಡಿದ್ದು, ಸಾಕಷ್ಟು ಸಮಸ್ಯೆಗಳಿದ್ದರೂ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಬದಲಿಗೆ ನಿಮ್ಮ ಜಾಗದ ಸಮೀಕ್ಷೆಯನ್ನು ಗ್ರಾಮ ಪಂಚಾಯಿತಿ ಭಾಗದಲ್ಲಿ ಇಲಾಖೆ ನೇಮಿಸಿದ ಸಿಬ್ಬಂದಿ ಮೂಲಕ ಮಾಡಿಸಲಾಗುವುದು ಎಂಬ ಹಾರಿಕೆಯ ಉತ್ತರ ನೀಡಲಾಗುತ್ತಿದೆ.

    ಒಂದು ವಾರದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡದಿದ್ದರೆ, ಸರ್ವೇಯನ್ನು ಪಿಆರ್‌ಒಗೆ ವರ್ಗಾವಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿ, ರೈತರಿಗೆ ಬೆಳೆ ಸರ್ವೇ ಮಾಡಲು ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿತ್ತು. ಪೋಲಿಗಾನ್ ಡೌನ್ಲೋಡ್ ಆಗಿದ್ದರೆ, ಅದು ಮೊಬೈಲ್ ಆ್ಯಪ್‌ನಲ್ಲಿ ಕಾಣಿಸಬೇಕು. ಆ್ಯಪ್‌ನಲ್ಲಿ ಕಾಣಿಸದೆ ಪೋಲಿಗಾನ್ ಡೌನ್ಲೋಡ್ ಆಗಿದೆ ಎಂದು ಹೇಳುತ್ತಿರುವುದು ತಂತ್ರಜ್ಞಾನದ ಸಮಸ್ಯೆ. ಹಲವು ಭಾಗದಲ್ಲಿ ಜಿಪಿಎಸ್ ಹಾಗೂ ಸ್ಥಳದ ನಕ್ಷೆಗೆ ತಾಳೆಯಾಗದೆ ರೈತರು ತಮ್ಮ ಜಾಗದ ಸಮೀಕ್ಷೆ ಮಾಡಲು ಇನ್ನೊಬ್ಬರ ಜಾಗದಲ್ಲಿ ಹೋಗಿ ನಿಲ್ಲಬೇಕಾದ ಪರಿಸ್ಥಿತಿಯೂ ಇದೆ.

    ಸರ್ವೇ ನಂಬರ್ ನಾಪತ್ತೆ: ಕೃಷಿಯೇತರ ಉದ್ದೇಶಕ್ಕೆ ಬಳಕೆಯಾದ ಭೂಮಿ ಬಿಟ್ಟು ಕೃಷಿ ಭೂಮಿಯಾಗಿಯೇ ಇರುವ ಜಾಗದ ಸರ್ವೇ ಮಾಡಲಾಗುತ್ತದೆ. ಆದರೆ ಕೃಷಿ ಭೂಮಿಯಾಗಿರುವ ಹಲವು ಸರ್ವೇ ನಂಬರ್‌ಗಳೇ ಈ ಬಾರಿ ಆ್ಯಪ್‌ನಲ್ಲಿ ರೈತರಿಗೆ ಲಭಿಸುತ್ತಿಲ್ಲ.

    ವಾರ್ಷಿಕ ಸಮೀಕ್ಷೆ ಅಗತ್ಯವೇ?: ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಹುವಾರ್ಷಿಕ ಬೆಳೆಗಳಾದ ಅಡಕೆ, ತೆಂಗು, ಗೇರುಬೀಜ, ಕಾಳುಮೆಣಸು, ಶ್ರೀಗಂಧ, ತೇಗ ಸೇರಿ ಅರಣ್ಯ ಜಾತಿಯ ಮರಗಳನ್ನು ಬೆಳೆಸಲಾಗುತ್ತದೆ. ಬಯಲು ಪ್ರದೇಶದ ರೀತಿ ವರ್ಷದಿಂದ ವರ್ಷಕ್ಕೆ ಬೆಳೆಗಳನ್ನು ಬದಲಾವಣೆ ಮಾಡಲು ಅವಕಾಶಗಳು ಕಡಿಮೆ. ಹೀಗಾಗಿ ಈ ವಾರ್ಷಿಕ ಸಮೀಕ್ಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಕೇಷಿಕರ ವಲಯದಲ್ಲಿ ಕೇಳಿಬರುತ್ತಿದೆ.

    ಡೌನ್‌ಲೋಡ್ ಪ್ರಾಬ್ಲಂ: ಸರ್ವೇ ನಂಬರ್ ಪಹಣಿ ಡೌನ್‌ಲೋಡ್ ಸಂದರ್ಭ ಜಿಐಎಸ್ ಡೌನ್‌ಲೋಡ್ ಆಗಬೇಕು. ಆದರೆ ಹಲವು ರೈತರಿಗೆ ಇದು ಡೌನ್‌ಲೋಡ್ ಆಗದೆ, ಅನಂತರ ಎರಡು ಬಾರಿ ಡೌನ್‌ಲೋಡ್ ಆಗಿದೆ. ಇನ್ನು ನಿಮಗೆ ಅವಕಾಶವಿಲ್ಲ ಎಂಬ ಮಾಹಿತಿ ತೋರಿಸುತ್ತಿದೆ. ಲಾಕ್ ಆದ ಸರ್ವೇ ನಂಬರನ್ನು ಆಯಾ ಗ್ರಾಮಕ್ಕೆ ನೇಮಕ ಮಾಡಿದ ಪಿಆರ್‌ಒಗಳು ಬೆಳೆ ಸರ್ವೇ ಮಾಡಬೇಕಾಗಿದ್ದು, ಸರ್ವೇ ನಂಬರ್ ಒಂದಕ್ಕೆ ಸರ್ಕಾರ 10 ರೂ. ನೀಡುತ್ತದೆ. ಆ್ಯಪ್ ಸಮಸ್ಯೆಯಿಂದ ಸರ್ಕಾರದ ಬೊಕ್ಕಸಕ್ಕೆ ಇದು ಹೊರೆಯಾಗಲಿದೆ.

    ರೈತರ ಆಶಯವೇನು?: ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳ ವ್ಯಾಪ್ತಿಯ ಬೆಳೆ ಸಮೀಕ್ಷೆ ಜವಾಬ್ದಾರಿಯನ್ನು ಆಯಾ ಇಲಾಖೆ ವ್ಯಾಪ್ತಿಗೆ ತರುವ ಕಾರ್ಯ ಆಗಬೇಕಾಗಿದೆ. ಇದರಿಂದ ಆಯಾ ಇಲಾಖೆ ಅಧಿಕಾರಿಗಳು ರೈತರ ಬಳಿಗೆ ಹೋಗುವ ಜತೆಗೆ ಬೆಳೆಯ ಸಮಗ್ರ ಮಾಹಿತಿಯನ್ನೂ ಸ್ಥಳದಲ್ಲೇ ನೀಡಲು ಅನುಕೂಲವಾಗುತ್ತದೆ ಎನ್ನುವುದು ರೈತರ ಆಶಯ.

    ದಕ್ಷಿಣ ಕನ್ನಡದ ಬಹುವಾರ್ಷಿಕ ಬೆಳೆ ವ್ಯವಸ್ಥೆಗೆ ಬೆಳೆ ಸರ್ವೇ ಸಮಂಜಸವಲ್ಲ. ಡಿಜಿಟಲ್ ವ್ಯವಸ್ಥೆಯಲ್ಲಿರುವ ಹಲವು ಲೋಪದೋಷಗಳನ್ನು ಸರಿಪಡಿಸದೆ ಬೆಳೆ ಸರ್ವೇ ನಡೆಸಲು ರೈತರಿಗೇ ಹೇಳುವುದು ಅವೈಜ್ಞಾನಿಕ. ತಂತ್ರಜ್ಞಾನದ ಅವ್ಯವಸ್ಥೆಯನ್ನು ಇಲಾಖೆ ತಕ್ಷಣ ಸರಿಪಡಿಸಬೇಕು.
    – ಶ್ರೀಧರ ಶೆಟ್ಟಿ ಬೈಲುಗುತ್ತು, ಅಧ್ಯಕ್ಷರು,
    ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ. ಜಿಲ್ಲೆ

    ದ.ಕ.ದಲ್ಲಿ ಬಹುವಾರ್ಷಿಕ ಬೆಳೆಗಳು ಹೆಚ್ಚಿರುವ ಕಾರಣ ರೈತರಿಗೇ ಸಮೀಕ್ಷೆ ಅವಕಾಶ ನೀಡಲಾಗಿದೆ. ತಂತ್ರಜ್ಞಾನದ ಸಮಸ್ಯೆಯ್ನನು ಸಂಬಂಧಪಟ್ಟವರ ಗಮನಕ್ಕೆ ತಂದು, ಸರಿಪಡಿಸಲು ಪ್ರಯತ್ನ ಮಾಡಲಾಗುವುದು.
    – ಚೆನ್ನಕೇಶವ ಮೂರ್ತಿ ಎಚ್.
    ಸಹಾಯಕ ಕೃಷಿ ನಿರ್ದೇಶಕರು, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts