More

    ಪ್ರಧಾನಿ ಕೈಸೇರದ ಅಭಿಮಾನಿ ಕಾಣಿಕೆ!

    ಡಿ.ಎಂ.ಮಹೇಶ್, ದಾವಣಗೆರೆ
    ಒಂದಲ್ಲ, ಎರಡನೇ ವರ್ಷವೂ ಸಹ ದೇಶದ ಚೌಕೀದಾರನನ್ನು ಕಣ್ತುಂಬಿಕೊಳ್ಳುವ ಜತೆಗೆ ಖುದ್ದು ರಚಿಸಿದ ಅವರದೇ ಭಾವಚಿತ್ರದ ಕಲಾಕೃತಿಯನ್ನು ಉಡುಗೊರೆಯಾಗಿ ನೀಡುವ ದಾವಣಗೆರೆ ಶಬರಿಯ ಆಸೆ ಫಲಿಸಲಿಲ್ಲ!
    ಜವಳಿ ಉದ್ಯಮಿ, ಹವ್ಯಾಸಿ ಕಲಾವಿದೆ ನೀತಾ ಹರ್ಷಾ ಗೌಡರ್, ಈ ಆಧುನಿಕ ಶಬರಿಯ ನಾಮಧೇಯ. ಚುನಾವಣಾ ಪ್ರಚಾರ ಸಭೆಗೆಂದು ಭಾನುವಾರ ನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಣಿಕೆ ನೀಡಲು ಎನ್‌ಎಸ್‌ಜಿ  ಅನುಮತಿ ಸಿಗದಿದ್ದರಿಂದ ಕೊಂಚ ನಿರಾಶರಾದ ನೀತಾ, ನವದೆಹಲಿಗಾದರೂ ತೆರಳಿ ನೀಡಿಬರುವ ಉಮೇದಿನಲ್ಲಿದ್ದಾರೆ.
    ದಾವಣಗೆರೆ ಚೌಕಿಪೇಟೆಯ ಗೌಡರ ಜಯದೇವಪ್ಪ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲಕಿಯೂ ಆಗಿರುವ ನೀತಾ, ಎಂಬಿಎ ಪದವೀಧರೆ.  ಬಣ್ಣದ ಪೇಪರ್‌ಗಳನ್ನು ಕತ್ತರಿಸಿ ಅಂಟಿಸಿ ಕಲಾಕೃತಿ ರಚಿಸುವ ಸೂಕ್ಷ್ಮವಾದ, ಪೇಪರ್ ಕ್ವಿಲ್ಲಿಂಗ್ ಆರ್ಟ್‌ಗೆ ಮೋಹಿತರಾಗಿ ಸಾಮಾಜಿಕ ಜಾಲತಾಣದಿಂದಲೇ ನೋಡುತ್ತ ಕಲಿತು, ಹವ್ಯಾಸಿ ಕಲಾವಿದೆಯಾಗಿ ಮಾರ್ಪಟ್ಟಿದ್ದಾರೆ.
    ಕಳೆದ 10 ವರ್ಷದಿಂದ ಇದೇ ಕಲೆಯಲ್ಲಿ ಪರಿಣತಿ ಪಡೆದಿರುವ ಇರುವ ಅನೇಕ ಕಲಾಕೃತಿಗಳನ್ನು ರಚಿಸಿ ತಮ್ಮ ಜವಳಿಯಂಗಡಿಯಲ್ಲಿ ಗ್ರಾಹಕರಿಗೆ ಪ್ರದರ್ಶನಕ್ಕೆ ಇರಿಸಿದ್ದಾರೆ. ಇದೇ ಕಲಾ ಮಾದರಿಯಲ್ಲಿ ಗಣೇಶ ದೇವರ (4.5 ಸೆಂ.ಮೀ.-5 ಸೆಂ.ಮೀ)ಕಲಾಕೃತಿ ರಚಿಸಿ 2023ನೇ ವರ್ಷದಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿದ್ದಾರೆ.
    3 ಮಿ.ಮೀ ಅಳತೆಯ ಕತ್ತರಿಸಿದ ಕಾಗದದ ಸುಮಾರು 5 ಸಾವಿರ ತುಂಡುಗಳನ್ನು ಜೋಡಿಸಿ ಅಂಟಿಸಿ, ಪ್ಯಾಬ್ರಿಕ್ ಸ್ಟೋನ್‌ಗಳನ್ನು ಬಳಸಿ 2-3 ಅಡಿ ವಿಸ್ತೀರ್ಣ ಅಳತೆಯ ಮೋದಿ ಅವರ ಕಲಾಕೃತಿಯನ್ನು ರಚಿಸಿ ಗಾಜಿನ ಫ್ರೇಮ್ ಅಳವಡಿಸಿದ್ದಾರೆ. ಅವರ ಮೇಲಿನ ಅಭಿಮಾನಕ್ಕಾಗಿ ಚಿತ್ರ ನಿರ್ಮಿಸಲು ನಾಲ್ಕು ತಿಂಗಳ ಸಮಯದ ಜತೆ ತಾಳ್ಮೆಯನ್ನೂ ವ್ಯಯಿಸಿದ್ದಾರೆ.
    ಈ ಚಿತ್ರಪಟ ನೀಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೂಲಕ ಮನವಿ ಮಾಡಿಕೊಂಡಿದ್ದರು. ಆದರೆ ವೇದಿಕೆಯಲ್ಲಿ ಪ್ರಧಾನಿ ಅವರಿಗೆ ಗರಿಷ್ಟ ಎರಡು ಕಾಣಿಕೆ ನೀಡುವುದು ಅದಾಗಲೆ ನಿಗದಿಯಾಗಿದ್ದರಿಂದ ನೀತಾ ಅವರಾಸೆಯನ್ನು ಎನ್‌ಎಸ್‌ಜಿ ಭದ್ರತಾ ಪಡೆ ನಿರಾಕರಿಸಿತು. ಆದರೆ ನೆಚ್ಚಿನ ಮೋದಿ ಅವರನ್ನು ಎಂದಾದರೊಂದು ದಿನ ಕಾಣುತ್ತೇನೆ ಎಂಬ ಅಭೀಪ್ಸೆ ನೀತಾ ಅವರದು.
    ,…..
    ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಬಿಜಿ ಇರುವ ವ್ಯಕ್ತಿತ್ವ. ಅವರಿಗೆ ಕಲಾಕೃತಿ ನೀಡುವ ಬಯಕೆ ಈಡೇರದಿದ್ದರೂ ಬೇಸರವಿಲ್ಲ. ಹೇಗಾದರೂ ಮಾಡಿ ನವದೆಹಲಿಗೆ ತೆರಳಿ ಕಾಣಿಕೆ ನೀಡುವ ಭರವಸೆ ನನಗಿದೆ.
    ನೀತಾ ಹರ್ಷಾ ಗೌಡರ್
    ಜವಳಿ ಉದ್ಯಮಿ, ಕಲಾವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts