More

    ಹುಬ್ಬಳ್ಳಿಯಲ್ಲಿ ಟೆಕ್ ಸಮ್ಮಿತ್ ಪೂರ್ವಭಾವಿ ಸಭೆ

    ಹುಬ್ಬಳ್ಳಿ: ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ‘ಬೆಂಗಳೂರು ಟೆಕ್ ಸಮ್ಮಿತ್’ ನಡೆಸಲು ಉದ್ದೇಶಿಸಲಾಗಿದ್ದು, ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ ಇಲ್ಲವೆ ಅಕ್ಟೋಬರ್ ತಿಂಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

    ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಸ್ಟಾರ್ಟ್​ಅಪ್​ನಲ್ಲಿ ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ (ಕೆಡಿಇಎಂ) ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಕ್ಲಸ್ಟರ್ ಆಧಾರಿತವಾಗಿ ಈ ಕೇಂದ್ರವನ್ನು ಆರಂಭಿಸಲಾಗಿದೆ. ಕೈಗಾರಿಕೆಗಳಲ್ಲಿ ಹೊಸ ತಂತ್ರಜ್ಞಾನ, ಆವಿಷ್ಕಾರಗಳು ನಡೆಯುತ್ತಿವೆ. ಇಂಥವುಗಳನ್ನು ಅಳವಡಿಸಿಕೊಂಡ ದೇಶದಲ್ಲಿ ಮೊದಲ ರಾಜ್ಯ ಕರ್ನಾಟಕ. ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಡಿಜಿಟಲ್ ಉದ್ಯಮಕ್ಕೆ ಆದ್ಯತೆ ನೀಡಿದೆ. ಶೇ. 51ರಷ್ಟು ಕೈಗಾರಿಕೆಗಳು ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ ಶೇ. 49 ಇದೆ. ಉದ್ಯಮಿ ಬಿ.ವಿ. ನಾಯ್ಡು ಅವರನ್ನು ಕೆಡಿಇಎಂ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರ್ಕಾರ, ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಸ್ಥಾಪಿಸಿ ಆ ಕ್ಷೇತ್ರಕ್ಕೆ 600 ಕೋಟಿ ರೂ. ಮೀಸಲಿರಿಸಿದೆ ಎಂದರು.

    ದೇಶದ ಆರ್ಥಿಕ ವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್​ಗೆ ತೆಗೆದುಕೊಂಡು ಹೋಗುವ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಇದರಲ್ಲಿ ಡಿಜಿಟಲ್ ಆರ್ಥಿಕ ಮಾರುಕಟ್ಟೆಯಿಂದ 1 ಟ್ರಿಲಿಯನ್ ಡಾಲರ್ ನಿರೀಕ್ಷಿಸಲಾಗುತ್ತಿದೆ. ಸದ್ಯ ಡಿಜಿಟಲ್ ಕ್ಷೇತ್ರದಿಂದ 150 ಬಿಲಿಯನ್ ಡಾಲರ್ ಬರುತ್ತಿದೆ. ಕರ್ನಾಟಕದಿಂದ 54 ಬಿಲಿಯನ್ ಡಾಲರ್ ಕೊಡುಗೆ ಇದೆ. ಇದನ್ನು ರಾಜ್ಯದ ಐಟಿ-ಬಿಟಿ ವಲಯದಿಂದ 300 ಬಿಲಿಯನ್ ಡಾಲರ್​ಗೆ ತೆಗೆದುಕೊಂಡು ಹೋಗುವ ಗುರಿ ಇದೆ ಎಂದರು.

    ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಹೆಚ್ಚಾಗಬೇಕೆಂಬ ಕನಸನ್ನು 20 ವರ್ಷದಿಂದ ಕಾಣುತ್ತಿದ್ದೆವು. ಈಗ ಅದು ನನಸಾಗುತ್ತಿದೆ. ವಿವಿಧ ಕೈಗಾರಿಕೆಗಳು ಬಂದಿವೆ. ಇನ್ನೂ ಬರುತ್ತಿವೆ. ಬಹಳಷ್ಟು ನಿರುದ್ಯೋಗಿಗಳಿಗೆ ಉದ್ಯೋಗವೂ ಲಭಿಸಲಿದೆ. ಇದು ಆರ್ಥಿಕ ಕ್ಷೇತ್ರದ ಚೇತರಿಕೆಗೆ ಕಾರಣವಾಗಲಿದೆ. ‘ಜ್ಞಾನದ ಕೈಗಾರಿಕೆಗಳು’ ಇನ್ನಷ್ಟು ಬೆಳೆಯಬೇಕಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದರು.

    ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ ಮಾತನಾಡಿ, ದೇಶಪಾಂಡೆ ಫೌಂಡೇಷನ್ ಕೈಗೊಂಡಿರುವ ಕೈಗಾರಿಕಾ ಚಟುವಟಿಕೆಗಳು, ವಿವಿಧ ಕಂಪನಿಗಳ ಜತೆಗೆ ಆಗಿರುವ ಒಪ್ಪಂದ, ಮುಂದಿನ ಕಾರ್ಯ ಯೋಜನೆಗಳ ಕುರಿತು ವಿವರಿಸಿದರು.

    ಎಂಎಲ್​ಸಿ ಎಸ್.ವಿ. ಸಂಕನೂರ, ರಾಜೀವ ಪ್ರಕಾಶ, ಸಂತೋಷ ಇತರರು ಇದ್ದರು.

    ಸ್ಟಾರ್ಟ್​ಅಪ್​ಗಳ ಕಾರ್ಯವೈಖರಿಗೆ ಅಚ್ಚರಿ

    ದೇಶಪಾಂಡೆ ಫೌಂಡೇಷನ್​ನ ಸ್ಟಾರ್ಟ್​ಅಪ್​ಗಳ ಕಾರ್ಯವೈಖರಿಯನ್ನು ಕಂಡು ಡಿಸಿಎಂ ಡಾ. ಅಶ್ವತ್ಥನಾರಾಯಣ ಅಚ್ಚರಿ ವ್ಯಕ್ತಪಡಿಸಿದರು. ಸ್ಟಾರ್ಟ್​ಅಪ್ ಸ್ಯಾಂಡ್ ಬಾಕ್ಸ್​ನಲ್ಲಿರುವ ಅಗ್ರಿ ವೆರ್ಟಿಕಲ್, ಇನ್​ಕ್ಯುಬೇಷನ್ ಪ್ರೋಗ್ರಾಂ, ಸ್ಕೇಲ್​ಅಪ್ ಪ್ರೋಗ್ರಾಂ, ಯುವಾ, ಎಡ್ಜ್ ಸೇರಿ ಇತರ ಸ್ಟಾರ್ಟ್​ಅಪ್​ಗಳ ಮಾಹಿತಿ ಪಡೆದರು. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನವೋದ್ಯಮಿಗಳು ಉದ್ಯಮ ರಂಗದಲ್ಲಿ ಯಶಸ್ಸು ಗಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts