More

    ಕೊಚ್ಚಿನ್ ಶಿಪ್‌ಯಾರ್ಡ್ ತೆಕ್ಕೆಗೆ ಟೆಬ್ಮಾ?, ಮೀನುಗಾರರಿಂದ ಹೋರಾಟದ ಎಚ್ಚರಿಕೆ

    ಉಡುಪಿ: ಮಲ್ಪೆ ಮೀನುಗಾರಿಕೆ ಬಂದರು ಸಮೀಪದಲ್ಲಿರುವ ಟೆಬ್ಮಾ ಶಿಪ್‌ಯಾರ್ಡನ್ನು ಕೊಚ್ಚಿನ್ ಶಿಪ್‌ಯಾರ್ಡ್‌ಗೆ ನೀಡಿರುವ ಗುಮಾನಿ ಇದ್ದು, ಇದು ನಿಜವಾಗಿದ್ದಲ್ಲಿ ಸರ್ಕಾರ ಕೂಡಲೇ ನಿರ್ಧಾರ ಬದಲಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಲ್ಪೆ ಮೀನುಗಾರರ ಸಂಘ ಎಚ್ಚರಿಕೆ ನೀಡಿದೆ.

    ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಪೆಯಲ್ಲಿ 2000ರಲ್ಲಿ ಹಡಗು ನಿರ್ಮಾಣ ಸಂಸ್ಥೆ ಟೆಬ್ಮಾ ಕಾರ್ಯ ಚಟುವಟಿಕೆ ಆರಂಭಿಸಿದ್ದು, 30 ವರ್ಷದ ಅವಧಿಗೆ ಜಾಗ ಗುತ್ತಿಗೆ ನೀಡಲಾಗಿತ್ತು. ಮಲ್ಪೆಯ ಸರ್ವಋತು ಬಂದರಿಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಅವಧಿಯನ್ನು 15 ವರ್ಷಕ್ಕೆ ಇಳಿಸಿ, ಆ ಜಾಗವನ್ನು ಬಂದರು ವಿಸ್ತರಣೆ, ಅಭಿವೃದ್ಧಿಗೆ ಮೀಸಲಿಡುವಂತೆ ಮೀನುಗಾರರು ದಶಕದ ಹಿಂದೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಸಕ ಕೆ.ರಘುಪತಿ ಭಟ್ ಸಮಕ್ಷಮದಲ್ಲಿ ಮನವಿ ಮಾಡಿದ್ದರು. ಬಳಿಕ ಸರ್ಕಾರ ಟೆಬ್ಮಾ ಕಾರ್ಯನಿರ್ವಹಣೆ ಅವಧಿಯನ್ನು 15 ವರ್ಷಕ್ಕೆ ಇಳಿಸಿ ಆದೇಶಿಸಿತ್ತು. ಅದರಂತೆ ಟೆಬ್ಮಾ ಅವಧಿ 2023ಕ್ಕೆ ಕೊನೆಗೊಳ್ಳಲಿದೆ.

    ಟೆಬ್ಮಾ ಸಂಸ್ಥೆ 4 ವರ್ಷ ಹಿಂದೆ ಕಾರ್ಯಚಟುವಟಿಕೆ ನಿಲ್ಲಿಸಿದ್ದು, ಅದನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಹಸ್ತಾಂತರಿಸುವ ಮಾತುಗಳು ಕೇಳಿಬಂದಿವೆ. 3 ಎಕರೆಯಷ್ಟಿರುವ ಜಾಗವನ್ನು ಬಂದರು ಅಭಿವೃದ್ಧಿಗೆ ಮೀಸಲಿಡಬೇಕು. ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ನೀಡಬಾರದೆಂಬುದು ನಮ್ಮ ಒತ್ತಾಯ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಸಂಘದ ಪ್ರಮುಖರಾದ ವಿಠಲ ಕರ್ಕೇರ, ರಮೇಶ್ ಕೋಟ್ಯಾನ್, ನಾಗರಾಜ್ ಕುಂದರ್, ಕೋಶಾಧಿಕಾರಿ ಶಿವಾನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts