More

    ಗಿಡಗಳ ದಾಹ ತಣಿಸುವ ‘ಟೀಂ ಮೈಸೂರು’

    ಸದೇಶ್ ಕಾರ್ಮಾಡ್ ಮೈಸೂರು
    ಪ್ರತಿಯೊಬ್ಬರು ಪರಿಸರ ದಿನಾಚರಣೆ ಸಂದರ್ಭ ಗಿಡಗಳನ್ನು ನೆಡಲು ಉತ್ಸಾಹ ತೋರುತ್ತಾರೆ. ಆದರೆ, ನೆಟ್ಟ ಗಿಡಗಳಿಗೆ ನೀರುಣಿಸುವ ಉತ್ಸಾಹವನ್ನು ಬಹುತೇಕರು ತೋರುವುದಿಲ್ಲ. ಆದರೆ, ನಗರದ ‘ಟೀಂ ಮೈಸೂರು’ ತಂಡ ಎಲ್ಲರಿಗಿಂತ ಭಿನ್ನ. ಇವರು ಗಿಡ ನೆಡುವುದರ ಜತೆಗೆ ಇತರರು ನೆಟ್ಟ ಗಿಡಗಳಿಗೂ ನೀರುಣಿಸಿ ಬೆಳೆಸುವ ಕಾರ್ಯದಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.

    ಪರಿಸರ ದಿನಾಚರಣೆ ಸಂದರ್ಭ ಸಾಕಷ್ಟು ಜನರು ಗಿಡ ನೆಟ್ಟು ಗಿಡದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಆ ನಂತರ ಗಿಡದತ್ತ ತಿರುಗಿ ಸಹ ನೋಡುವುದಿಲ್ಲ. ಆದರೆ, ‘ಟೀಂ ಮೈಸೂರು’ ತಂಡ ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಒಂದು ದಶಕವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಪರಿಸರದ ಮೇಲೆ ಇವರಿಗಿರುವ ಪ್ರೀತಿಯೇ ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಒಂದು ದಶಕವನ್ನು ಯಶಸ್ವಿಯಾಗಿ ಪೂರೈಸುವಂತೆ ಮಾಡಿದೆ.

    ಸಮಾನ ಮನಸ್ಕರು ಒಗ್ಗೂಡಿ 2014ರಲ್ಲಿ ‘ಟೀಂ ಮೈಸೂರು’ ರಚನೆ ಮಾಡಿದರು. ಬೇಸಿಗೆ ಸಂದರ್ಭದಲ್ಲಿ ಗಿಡಗಳಿಗೆ ನೀರುಣಿಸು ವುದು ‘ಟೀಂ ಮೈಸೂರು’ನ ಮುಖ್ಯ ಉದ್ದೇಶಗಳಲ್ಲಿ ಒಂದು. ಪ್ರಸ್ತುತ ತಂಡದಲ್ಲಿ 36 ಜನರು ಇದ್ದಾರೆ. ಇವರೆಲ್ಲರೂ ಬೇರೆ ಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪರಿಸರಕೋಸ್ಕರ ಅಳಿಲು ಸೇವೆ ಸಲ್ಲಿಸಲು ವಾರದಲ್ಲಿ ಎರಡು ದಿನ ಒಂದಷ್ಟು ಸಮಯವನ್ನು ಮೀಸಲಿಡುತ್ತಿದ್ದಾರೆ.

    ನಗರದ ಆಯ್ದ ರಸ್ತೆಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಗಿಡಗಳಿಗೆ ನೀರು ಹಾಕುವ ಕಾರ್ಯವನ್ನು ‘ಟೀಂ ಮೈಸೂರು’ ತಂಡದ ಸದಸ್ಯರು ಮಾಡುತ್ತಾರೆ. 4 ಸಾವಿರ ಲೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಒಂದು ಟ್ಯಾಂಕರ್ ನೀರನ್ನು ದಿನವೊಂದಕ್ಕೆ ಗಿಡಗಳಿಗೆ ನೀರುಣಿಸಲು ಬಳಕೆ ಮಾಡಲಾಗುತ್ತಿದೆ. 2014ರಲ್ಲಿ ಇವರು ಗಿಡಗಳಿಗೆ ನೀರುಣಿಸಲು ಪ್ರಾರಂಭಿಸಿದಾಗ ಒಂದು ಟ್ಯಾಂಕರ್ ನೀರಿಗೆ 800 ರೂ. ಇತ್ತು. ಪ್ರಸ್ತುತ 1,600 ರೂ. ದರ ಇದೆ. ಇದಕ್ಕೆ ಬೇಕಾದ ಹಣವನ್ನು ತಂಡದ ಸದಸ್ಯರೇ ಹೊಂದಿಸಿಕೊಳ್ಳುತ್ತಾರೆ. ಕೆಲವೊಮ್ಮೆ ದಾನಿಗಳು ಸಹ ಹಣವನ್ನು ನೀಡುತ್ತಾರೆ. ತಂಡದಲ್ಲಿರುವ ಸದಸ್ಯರು ತಮ್ಮ ಹುಟ್ಟುಹಬ್ಬದ ಸಂದರ್ಭ ಗಿಡಗಳಿಗೆ ನೀರುಣಿಸುವ ಒಂದು ದಿನದ ಸಂಪೂರ್ಣ ವೆಚ್ಚವನ್ನು ಭರಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಜೂನ್‌ವರೆಗೆ ಗಿಡಗಳಿಗೆ ನೀರುಣಿಸುವ ಕಾರ್ಯವನ್ನು ತಂಡದ ಸದಸ್ಯರು ಮಾಡುತ್ತಾರೆ.

    ಒಂದು ಗಿಡ ಮರವಾಗಿ ಬೆಳೆಯಲು ಕನಿಷ್ಠ 3 ರಿಂದ 5 ವರ್ಷಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಟೀಂ ಮೈಸೂರು ತಂಡ ಯಾವುದಾದರು ಒಂದು ರಸ್ತೆಯನ್ನು ಆಯ್ಕೆ ಮಾಡಿಕೊಂಡು 5 ವರ್ಷಗಳ ಕಾಲ ನಿರಂತರವಾಗಿ ಪ್ರತಿ ವಾರ ನೀರುಣಿಸುವ ಕಾರ್ಯವನ್ನು ಮಾಡುತ್ತಿದೆ. ಇವರ ಸೇವಾ ಕಾರ್ಯದಿಂದ ನಗರದಲ್ಲಿ ನೂರಾರು ಗಿಡಗಳು ಇಂದು ಮರಗಳಾಗಿ ಬೆಳೆದು ನಿಂತಿವೆ.

    ಟೀಂ ಮೈಸೂರು ಪ್ರಾರಂಭದಲ್ಲಿ ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸುವ ಕಾರ್ಯವನ್ನು ಮಾಡಿ ದ್ದರು. ಅಲ್ಲಿ 800ಕ್ಕೂ ಹೆಚ್ಚು ಗಿಡಗಳು ಇದೀಗ ಮರವಾಗಿ ಬೆಳೆದು ನಿಂತಿದೆ. ಇದೀಗ ನಗರದ ಕಲಾಮಂದಿರದಿಂದ ಕುಕ್ಕರಹಳ್ಳಿಕೆರೆಯವರೆಗೆ, ಕ್ರಾಫರ್ಡ್ ಹಾಲ್‌ನಿಂದ ನ್ಯಾಯಾಲಯದವರೆಗಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆ ಹಾಗೂ ನಜರ್‌ಬಾದ್‌ನ ಎಫ್.ಕೆ. ಇರಾನಿ ಮನೆಯ ರಸ್ತೆಯ ಗಿಡಗಳಿಗೆ ಗಿಡಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನಜರ್‌ಬಾದ್‌ನಲ್ಲಿ ಪ್ರತಿ ಶನಿವಾರ ಸಂಜೆ 5ಕ್ಕೆ, ಕೃಷ್ಣರಾಜ ಬುಲೇವಾರ್ಡ್ ಸುತ್ತಮುತ್ತ ಭಾನುವಾರ ಬೆಳಗ್ಗೆ 7ಕ್ಕೆ ಗಿಡಗಳಿಗೆ ನೀರು ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರತಿವಾರ ಕೈಗೊಳ್ಳುವ ಸೇವಾ ಚಟುವಟಿಕೆಯ ಕುರಿತು ಚರ್ಚಿಸಲು ತಂಡದ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಈ ವಾಟ್ಸ್‌ಆ್ಯಪ್ ಗ್ರೂಪ್ ನಲ್ಲಿಯೇ ಸೇವಾ ಚಟುವಟಿಕೆಯ ಕುರಿತು ಚರ್ಚೆಗಳು ನಡೆಯುತ್ತವೆ. ಟೀಂ ಮೈಸೂರು ತಂಡ ಗಿಡಗಳಿಗೆ ನೀರುಣಿಸುವ ಜತೆಗೆ ನಗರದ ವಿವಿಧೆಡೆ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಸಹ ಮಾಡುತ್ತಿದೆ.

    ಗಿಡಗಳಿಗೆ ನೀರುಣಿಸುವ ಈ ಸೇವಾ ಕಾರ್ಯಕ್ಕೆ ಟ್ಯಾಂಕರ್‌ಗಳನ್ನು ನೀಡಲು ಸಾಕಷ್ಟು ಜನರು ಆಸಕ್ತಿ ತೋರಲಿಲ್ಲ. ಆದರೆ, ಎಲೆತೋಟದ ಮಂಜು ಎಂಬವರು ಪರಿಸರದ ಮೇಲೆ ಹೊಂದಿರುವ ಕಾಳಜಿಯಿಂದ ಕಳೆದ 7 ವರ್ಷದಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ರೀತಿ ಹಲವರ ಸಹಕಾರದಿಂದ ‘ಟೀಂ ಮೈಸೂರು’ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇವರ ಪ್ರಯತ್ನದಿಂದ ಮೈಸೂರು ಹಸಿರಿನಿಂದ ಕಂಗೊಳಿಸುತ್ತಿದೆ.

    ಪರಿಸರ ದಿನಾಚರಣೆ ಸಂದರ್ಭ ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ಆದರೆ, ಬಹುತೇಕರು ಗಿಡ ನೆಟ್ಟ ನಂತರ ಗಿಡಗಳಿಗೆ ನೀರುಣಿಸಲು ಆಸಕ್ತಿಯನ್ನೇ ತೋರುತ್ತಿಲ್ಲ. ಹೀಗಾಗಿ ನಗರದ ಬಹುತೇಕ ಕಡೆಗಳಲ್ಲಿ ಪರಿಸರ ದಿನಾಚರಣೆ ಸಂದರ್ಭ ನೆಟ್ಟ ಗಿಡಗಳು ಬಹುಬೇಗನೆ ಸತ್ತು ಹೋಗುತ್ತಿವೆ. ನಮ್ಮ ಸಂಸ್ಥೆಯು ಗಿಡ ನೆಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನೆಟ್ಟಿರುವ ಗಿಡಗಳಿಗೆ ನೀರುಣಿಸುವ ಕಾರ್ಯವನ್ನು ಕಳೆದ ಒಂದು ದಶಕದಿಂದ ಮಾಡಿಕೊಂಡು ಬರುತ್ತಿದ್ದೇವೆ. ಹೆಚ್ಚು ಸಸಿಗಳನ್ನು ನೆಡುವ ಬದಲು ಕೆಲವೇ ಕೆಲವು ಸಸಿಗಳನ್ನು ನೆಟ್ಟು ಅವುಗಳಿಗೆ ನೀರುಣಿಸುವ ಪೋಷಿಸುವುದು ಅತ್ಯಂತ ಮುಖ್ಯ.
    ಗೋಕುಲ್ ಗೋವರ್ಧನ್,
    ಸಂಚಾಲಕ, ಟೀಂ ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts