More

    ಟೀಮ್ ಇಂಡಿಯಾ ಮನೋಬಲ, ಸಿಂಹಛಲಕ್ಕೆ ಸಲಾಂ

    ಟೀಮ್ ಇಂಡಿಯಾ ಮನೋಬಲ, ಸಿಂಹಛಲಕ್ಕೆ ಸಲಾಂಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ಬಾಹ್ಯ ಸನ್ನಿವೇಶಗಳು ಪ್ರತಿಕೂಲವಾಗಿದ್ದಾಗ ಕೈಹಿಡಿಯುವುದು ಮನೋಬಲವೊಂದೇ. ಅಡಿಲೇಡ್ ಟೆಸ್ಟ್​ನ ಅಪಘಾತದ ಬಳಿಕವೂ ಭಾರತ ತಂಡ ತಿರುಗಿಬಿದ್ದಿದ್ದು ಇಂಥ ಮನೋಬಲದ ಮೂಲಕವೇ ಎಂಬುದು ವಿಶೇಷ.

    ಗಾಯಗೊಂಡ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ…

    ಇತಿಹಾಸವನ್ನು ಪ್ಲ್ಯಾನ್​ ಮಾಡಿಕೊಂಡು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಇತಿಹಾಸ ಸೃಷ್ಟಿಸುವ ಆ ಸಂದರ್ಭ ಬಂದಾಗ ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಾಗುವುದಿಲ್ಲ.

    ಕೆಲವು ಸಾಧನೆಗಳೇ ಹಾಗೆ. ಪರ್ವತ ಏರಿದ ಮೇಲೆ ಕೆಳಗಿನ ಇಳಿಜಾರು ನೋಡುವಾಗ ಎದೆ ಝುಲ್ಲೆನ್ನುತ್ತದೆ… ಈ ಸಾಧನೆ ನಿಜವೇನಾ ಎಂಬ ಬೆರಗು ಮೂಡುತ್ತದೆ. ಶಿಖರ ಸಾಧನೆ ಆತ್ಮತೃಪ್ತಿ ತರುತ್ತದೆ. ಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ನೆಲದಾಳದ ಲೋಹದ ತುಣುಕು ಅಪರಂಜಿ ಚಿನ್ನವಾಗಬೇಕಾದರೆ, ಬೆಂಕಿಯಲ್ಲಿ ಬೇಯಬೇಕು. ಸಾಧಕನೂ ಅಷ್ಟೇ, ಕಷ್ಟಗಳಲ್ಲಿ ನೋಯಬೇಕು. ಸವಾಲುಗಳನ್ನೆದುರಿಸಿ ಕಾದಬೇಕು, ಬೀಳಬೇಕು, ಮೈಕೊಡವಿ ಏಳಬೇಕು.

    ಯಾರೋ ಸಾಗಿದ ಕಾಲು ಹಾದಿ ಅನುಸರಿಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ನಮ್ಮ ಗುರಿಯ ಮಾರ್ಗ ನಾವೇ ನಿರ್ವಿುಸಿಕೊಳ್ಳಬೇಕು. ಸಂದರ್ಭಗಳು ಹಾಗೆಯೇ ಇರುತ್ತವೆ. ಇಡೀ ಜಗತ್ತೇ ತನ್ನ ವಿರುದ್ಧವಾಗಿದೆ ಎಂಬ ಭಾವನೆ ಬಲಿಯುತ್ತಿರುತ್ತದೆ. ಕಷ್ಟಗಳು ಬರುವಾಗ ಸಾಲುಸಾಲಾಗಿ ಬರುತ್ತವೆ, ನಿಲುಗಡೆಯೇ ಇಲ್ಲದ ಜಡಿಮಳೆಯಂತೆ ಹೆದರಿಸುತ್ತಿರುತ್ತವೆ. ಈಗಲೋ ಆಗಲೋ ಮುಳುಗುವಂತಿರುವ ಒಡಕಲು ದೋಣಿಯಲ್ಲಿ ದಡವೇ ಕಾಣದ ಸಾಗರ ಮಧ್ಯದಲ್ಲಿ ಅತಂತ್ರವಾದ ಅಸಹಾಯಕತೆ ಸೃಷ್ಟಿಸಿಬಿಟ್ಟಿರುತ್ತವೆ. ಮುಳುಗುನೀರಿನ ಅಂಥ ದಾರುಣ ಕ್ಷಣ ಮನುಷ್ಯ ಜಾತಿಯ ದೈತ್ಯ ಶಕ್ತಿ ಅನಾವರಣಕ್ಕೆ ವೇದಿಕೆಯಾಗಿಬಿಡುತ್ತದೆ. ಜೀವನ್ಮರಣ ಸಂದಿಗ್ಧದಲ್ಲಿ ಸಿಲುಕಿದಾಗಲೂ ಹೋರಾಡುವ, ಬದುಕುವುದಕ್ಕೊಂದು ಹೊಸ ದಾರಿ ಹುಡುಕುವ ಶಕ್ತಿಯನ್ನು, ಛಾತಿಯನ್ನು ಪ್ರಕೃತಿ ಮನುಷ್ಯನಿಗೆ ಕೊಟ್ಟಿದೆ. ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರೆ ಸಾಕು ಜೀವದ ಹೋರಾಟ ಮುಂದುವರಿಸುವುದಕ್ಕೆ.

    4+9+2+0+4+0+8+4+0+4+1

    ಇದು ಅಡಿಲೇಡ್​ನಲ್ಲಿ ನಡೆದ ಮೊದಲ ಟೆಸ್ಟ್​ನ ಎರಡನೇ ಇನಿಂಗ್ಸ್​ನಲ್ಲಿ ಭಾರತ ತಂಡದ ಆಟಗಾರರು ಗಳಿಸಿದ ರನ್​ಗಳು. ತಂಡದ ಎಲ್ಲ 11 ಮಂದಿ ಸೇರಿ ಅಂದು ಗಳಿಸಿದ್ದು ಕೇವಲ 36 ರನ್. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅದು ಅತ್ಯಂತ ನಿಕೃಷ್ಟ ಕ್ಷಣ. ಆತ್ಮಸ್ಥೈರ್ಯವನ್ನೇ ಉಡುಗಿಸುವಂಥ ಹೀನಾತಿಹೀನ ಆಟ ಅದು. ಇಡೀ ಪ್ರವಾಸದಲ್ಲಿ ಆಸ್ಟ್ರೇಲಿಯಾ ಬೌಲರ್​ಗಳ ಮೆರೆದಾಟದ ಎದುರು ಬ್ಯಾಟ್ಸ್​ಮನ್​ಗಳ ಪರದಾಟ ಯಾವ ರೀತಿ ಇರುತ್ತದೆ ಎಂಬ ದಿಕ್ಸೂಚಿಯಂತಿತ್ತು ಆ ದಿನದ ಸ್ಕೋರ್. ಸುದೀರ್ಘ ಸರಣಿಯ ಮೊದಲ ಟೆಸ್ಟ್​ನಲ್ಲೇ ಇಂಥ ವೈಫಲ್ಯ, ಇಂಥ ಸೋಲು, ಸರ್ವತ್ರ ಎದುರಾದ ಆಕ್ರೋಶ, ಎದುರಾಳಿ ಪಾಳೆಯದ ಕುಹಕ, ವಿಶ್ಲೇಷಕ ವಲಯದ ಟೀಕೆ, ಜೊತೆಗೆ ಪ್ರವಾಸದ ಒಂದೊಂದು ಕ್ಷಣವೂ ಅಸಹನೀಯವಾಗುವಂತೆ ಎದುರಾದ ಗಾಯದ ಸಮಸ್ಯೆಗಳ ಹಾವಳಿ…

    ಬಾಹ್ಯ ಸನ್ನಿವೇಶಗಳು ಪ್ರತಿಕೂಲವಾಗಿದ್ದಾಗ ಕೈಹಿಡಿಯುವುದು ಮನೋಬಲವೊಂದೇ. ಅಡಿಲೇಡ್ ಟೆಸ್ಟ್​ನ ಅಪಘಾತದ ಬಳಿಕವೂ ಭಾರತ ತಂಡ ತಿರುಗಿಬಿದ್ದಿದ್ದು ಇಂಥ ಮನೋಬಲದ ಮೂಲಕವೇ. ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ಮರಳಿದ್ದರು. ರೋಹಿತ್ ಶರ್ಮ ಗಾಯಾಳುವಾಗಿ ತಂಡದಿಂದ ಹೊರಗಿದ್ದರು. ಇಶಾಂತ್ ಶರ್ಮ ಲಭ್ಯತೆಯೇ ಇರಲಿಲ್ಲ. ಬ್ಯಾಟಿಂಗ್​ನಲ್ಲಿ ರಹಾನೆ, ಪೂಜಾರ, ಬೌಲಿಂಗ್​ನಲ್ಲಿ ಬುಮ್ರಾ, ಅಶ್ವಿನ್ ಬಿಟ್ಟರೆ ಅನುಭವಿ ಆಟಗಾರರೇ ಇಲ್ಲದ ಅರೆಬರೆ ತಂಡವಾಗಿತ್ತದು. ಆದರೆ, ಅಂಥ ಹೀನಾಯ ಸನ್ನಿವೇಶದಲ್ಲೂ ತಂಡ ಮೈಕೊಡವಿ ಹೋರಾಡುವುದಕ್ಕೆ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವುದಕ್ಕೆ ಒಂದು ಬೆಳಕಿನ ಕಿಡಿ ಬೇಕಾಗಿತ್ತು. ಮೆಲ್ಬೋರ್ನ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಶತಕ ಆ ಕೊರತೆಯನ್ನು ನೀಗಿಸಿತು. ಇಡೀ ಪ್ರವಾಸದಲ್ಲಿ ಭಾರತೀಯರು ಗಳಿಸಿದ ಏಕೈಕ ಶತಕ ಅದು. ಅದೇ ಟರ್ನಿಂಗ್ ಪಾಯಿಂಟ್ ಎನಿಸಿತು. ಅಧೋಗತಿಯ ಕೂಪದಿಂದ ತಿರುಗೆದ್ದ ತಂಡ ಉತ್ಥಾನದ ದಾರಿ ಕಂಡುಕೊಂಡಿತು.

    ಅಡಿಲೇಡ್, ಮೆಲ್ಬೋರ್ನ್​ನಿಂದ ಸಿಡ್ನಿ, ಬ್ರಿಸ್ಬೇನ್​ವರೆಗಿನ ಈ ಟೆಸ್ಟ್ ಸರಣಿ ಆದ್ಯಂತವಾಗಿ ಭಾರತೀಯ ಬ್ಯಾಟಿಂಗ್ ಹಾಗೂ ಆಸ್ಟ್ರೇಲಿಯಾ ಬೌಲಿಂಗ್ ನಡುವಿನ ಕದನವಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಮುನ್ನವೇ ಇಶಾಂತ್ ಶರ್ಮ ಹೊರಬಿದ್ದಿದ್ದರು. ಮೊದಲ ಟೆಸ್ಟ್ ಬಳಿಕ ಮೊಹಮ್ಮದ್ ಶಮಿ, 2ನೇ ಟೆಸ್ಟ್ ಬಳಿಕ ಉಮೇಶ್ ಯಾದವ್, 3ನೇ ಟೆಸ್ಟ್ ಬಳಿಕ ಜಸ್​ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರಬಿದ್ದರು. ಇಂಥ ಶೂನ್ಯ ಸನ್ನಿವೇಶದಲ್ಲೇ ಹೊಸ ನಾಯಕರು ಉದ್ಭವಗೊಳ್ಳುವರೆಂಬ ಮಾತು ಭಾರತದ ಪಾಲಿಗೆ ನಿಜವಾಯಿತು. ಮೊಹಮ್ಮದ್ ಸಿರಾಜ್, ನಟರಾಜನ್, ಶಾರ್ದೂಲ್ ಠಾಕುರ್, ವಾಷಿಂಗ್ಟನ್ ಸುಂದರ್ ರೂಪದಲ್ಲಿ ಭಾರತ ನಾಲ್ವರು ಹೀರೋಗಳನ್ನು ಕಂಡುಕೊಳ್ಳುವುದಕ್ಕೆ ಈ ನಿರ್ವಾತ ಅವಕಾಶ ಸೃಷ್ಟಿಸಿತು.

    ಭಾರತ ತಂಡ ಎದುರಿಸುತ್ತಿದ್ದ ಗಾಯಾಳು ಸಮಸ್ಯೆ, ಪ್ರಮುಖ ಆಟಗಾರರ ಅಲಭ್ಯತೆ ದೃಷ್ಟಿಯಿಂದ ಆತಿಥೇಯ ಆಸ್ಟ್ರೇಲಿಯಾ ಈ ಸರಣಿಯನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಾಗಿತ್ತು. ಹೆಚ್ಚಿನವರ ನಿರೀಕ್ಷೆಯೂ ಅದೇ ಆಗಿತ್ತು. ಅಡಿಲೇಡ್ ಅವಾಂತರದ ಬಳಿಕ ಭಾರತ 0-4ರಿಂದ ಸೋಲಲಿದೆ ಎಂದು ಆಸೀಸ್​ನ ಮಾಜಿ ಕ್ರಿಕೆಟಿಗರು ಭವಿಷ್ಯವಾಣಿ ನುಡಿಯಲಾರಂಭಿಸಿದ್ದರು. ಆದರೆ, ಭಾರತದ ಸಮಸ್ಯೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂಥ ಗಟ್ಟಿ ಮನೋಬಲವಾಗಲೀ, ಬಲಾಢ್ಯ ಬ್ಯಾಟಿಂಗ್ ಪಡೆಯಾಗಲೀ, ಸ್ಪೂರ್ತಿಯುತ ನಾಯಕತ್ವವನ್ನಾಗಲೀ ಆಸ್ಟ್ರೇಲಿಯಾ ಹೊಂದಿರಲಿಲ್ಲ.

    ಹಾಲಿ ಪ್ರವಾಸದಲ್ಲಿ ಎಲ್ಲರೂ ಗಮನಿಸಿದಂತೆ ಆಸ್ಟ್ರೇಲಿಯಾದ ಬೌಲಿಂಗ್ ಅತ್ಯಂತ ಬಲಾಢ್ಯವಾಗಿತ್ತು. ಪ್ಯಾಟ್ ಕಮಿನ್ಸ್, ಜೋಷ್ ಹ್ಯಾಜಲ್​ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲ್ಯಾನ್ ಒಳಗೊಂಡ ಆಸೀಸ್ ಬೌಲಿಂಗ್ ಪಡೆ ಸಮಕಾಲೀನ ಕ್ರಿಕೆಟ್​ನಲ್ಲೇ ಅತ್ಯಂತ ಪ್ರಬಲ. ಈ ನಾಲ್ವರೂ ಉತ್ತುಂಗ ಫಾಮ್ರ್ ನಲ್ಲಿದ್ದರು. ಪೂರ್ಣ ಫಿಟ್ ಆಗಿದ್ದರು. ಸರಣಿಯುದ್ದಕ್ಕೂ ಒಂದೇ ಒಂದು ಅನಗತ್ಯ ಎಸೆತ, ಅನಗತ್ಯ ರನ್ ಭಾರತೀಯರಿಗೆ ದಕ್ಕದಂತೆ ಭೋರ್ಗರೆದರು. ಭಾರತದ ಪ್ರತಿಯೊಬ್ಬ ಬ್ಯಾಟ್ಸ್​ಮನ್​ಗಳ ಕೌಶಲ ಮತ್ತು ದೌರ್ಬಲ್ಯ ಅರಿತು ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರು. ಆದರೆ, ಈ ದೈತ್ಯ ಬೌಲರ್​ಗಳ ವಿರುದ್ಧ ಯಾವ ರೀತಿ ಆಡಬೇಕೆನ್ನುವುದನ್ನು ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ತೋರಿಸಿಕೊಟ್ಟ ಮೇಲೆ ಉಳಿದ ಬ್ಯಾಟ್ಸ್​ಮನ್​ಗಳಿಗೂ ಆತ್ಮವಿಶ್ವಾಸ ಚಿಗುರಿತು. ಅಲ್ಲಿಂದ ಮೂರು ಟೆಸ್ಟ್​ಗಳಲ್ಲಿ ಆಸೀಸ್ ಬೌಲರ್​ಗಳ ವಿರುದ್ಧ ಭಾರತೀಯ ಬ್ಯಾಟ್ಸ್​ಮನ್​ಗಳ ಸಾಹಸಗಾಥೆ ಸರಣಿಯ ಭವಿಷ್ಯ ನಿರ್ಧರಿಸಿತು.

    ಟೀಮ್ ಇಂಡಿಯಾ ಮನೋಬಲ, ಸಿಂಹಛಲಕ್ಕೆ ಸಲಾಂ
    ನಟರಾಜನ್​ಗೆ ಸ್ವಗ್ರಾಮ ತ.ನಾಡಿನ ಸೇಲಂ ಜಿಲ್ಲೆಯ ಚಿನ್ನಾಪ್ಪಾಂಪಟ್ಟಿಯಲ್ಲಿ ದೊರೆತ ಸ್ವಾಗತ.

    ಆದರೆ, ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಸಾಧ್ಯವಾಗಿದ್ದು ಆಸೀಸ್ ಬ್ಯಾಟ್ಸ್​ಮನ್​ಗಳಿಂದ ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆ ವಿಶ್ವಶ್ರೇಷ್ಠವೆನಿಸಿದ್ದ ಕಾಲವೊಂದಿತ್ತು. ಆಲನ್ ಬಾರ್ಡರ್, ಡೇವಿಡ್ ಬೂನ್, ಮಾರ್ಕ್ ಟೇಲರ್, ಮೈಕೆಲ್ ಸ್ಲೇಟರ್, ಸ್ಟೀವ್ ವಾ, ಮಾರ್ಕ್ ವಾ, ಇಯಾನ್ ಹೀಲಿ, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್, ಮೈಕೆಲ್ ಬೆವನ್, ಮ್ಯಾಥ್ಯೂ ಹೇಡನ್, ಡರೆನ್ ಲೆಹ್ಮನ್, ಆಡಂ ಗಿಲ್ಕ್ರಿಸ್ಟ್, ಮೈಕೆಲ್ ಕ್ಲಾರ್ಕ್, ಶೇನ್ ವಾಟ್ಸನ್, ಸೈಮನ್ ಕ್ಯಾಟಿಚ್ ಹೀಗೆ ಆಸೀಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಷ್ಠರ ಬರಗಾಲ ಎದುರಾಗಿದ್ದೇ ಇಲ್ಲ. ಆದರೆ, ಈ ಬಾರಿ ಭಾರತದ ಅನನುಭವಿ ಬೌಲಿಂಗ್ ಪಡೆಯನ್ನೂ ದಿಟ್ಟವಾಗಿ ಎದುರಿಸಿ ನಿಲ್ಲುವ ಬ್ಯಾಟಿಂಗ್ ಶಕ್ತಿ ಕಾಣಲೇ ಇಲ್ಲ. ಆಸೀಸ್ ಬ್ಯಾಟಿಂಗ್ ಸಂಪೂರ್ಣವಾಗಿ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್​ರನ್ನು ಅವಲಂಬಿಸಿತ್ತು. ಆದರೆ, ವಾರ್ನರ್​ಗೆ ಗಾಯ ಹಾಗೂ ನಿಕೃಷ್ಟ ಫಾಮ್ರ್ ಮುಳುವಾದರೆ, ಸ್ಟೀವನ್ ಸ್ಮಿತ್ ಭಾರತದ ಅಶ್ವಿನ್, ಸುಂದರ್​ರ ಸ್ಪಿನ್ ಚಕ್ರವ್ಯೂಹದಿಂದ ಹೊರಬರಲಾಗದೆ ಪರದಾಡಿದರು. ಸರಣಿಯುದ್ದಕ್ಕೂ ಲಬುಶೇನ್ ಹೋರಾಡಿದರೂ, ಭಾರತಕ್ಕೆ ಎಟುಕದಂಥ ಬೃಹತ್ ಮೊತ್ತ ಪೇರಿಸಲು ಅವರಿಗೆ ಉಳಿದವರ ನೆರವು ಸಿಗಲಿಲ್ಲ. ಇನ್ನು ಭಾರತೀಯ ಬ್ಯಾಟಿಂಗ್​ನಲ್ಲಿ ರಿಷಬ್ ಪಂತ್, ಶುಭಮಾನ್ ಗಿಲ್, ಜಡೇಜಾ, ಹನುಮ ವಿಹಾರಿ, ಅಶ್ವಿನ್, ಸುಂದರ್, ಶಾರ್ದೂಲ್ ರೂಪದಲ್ಲಿ ನವೋದಯವಾದಂತೆ ಆಸೀಸ್ ಪಡೆಯಲ್ಲಿ ಸಾಧ್ಯವಾಗಲಿಲ್ಲ. ಮೊದಲ ಮೂರು ಟೆಸ್ಟ್​ಗಳಲ್ಲಿ ಭಾರತೀಯ ಬೌಲಿಂಗ್ ತಂಡದಲ್ಲಿ ಬುಮ್ರಾ, ಅಶ್ವಿನ್​ರಾದರೂ ಇದ್ದರು. ಕೊನೆಯ ಟೆಸ್ಟ್​ನಲ್ಲಿ ಸಿರಾಜ್, ಶಾರ್ದೂಲ್, ನಟರಾಜನ್, ಸುಂದರ್ ರೂಪದಲ್ಲಿ ಸಂಪೂರ್ಣ ಹೊಸಬರೇ ದಾಳಿಗಿಳಿದಾಗಲೂ ಅದರ ಲಾಭ ಪಡೆಯಲು ಆಸೀಸ್ ಬ್ಯಾಟಿಂಗ್ ಪಡೆಗೆ ಶಕ್ತಿ ಇರಲಿಲ್ಲ. 8 ಇನಿಂಗ್ಸ್​ಗಳಲ್ಲಿ ಒಮ್ಮೆಯೂ 400 ರನ್ ಗಡಿಯನ್ನು ದಾಟಲಾಗಲಿಲ್ಲ. ವಾರ್ನರ್, ಸ್ಮಿತ್, ಲಬುಶೇನ್ ಬಿಟ್ಟರೆ ಆಸೀಸ್ ಪಡೆಯಲ್ಲಿ ನೆನಪಿನಲ್ಲುಳಿಯುವ ಇನ್ನೊಬ್ಬ ಬ್ಯಾಟ್ಸ್​ಮನ್ ಇಲ್ಲ ಎನ್ನುವುದೇ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ. ವಾರ್ನರ್, ಸ್ಮಿತ್​ಗೆ ಯಶಸ್ಸು ಸಿಗದಂತೆ, ಹೊಸ ಹೀರೋ ಉದ್ಭವವಾಗದಂತೆ ಅದುಮಿ ಹಿಡಿದಿದ್ದು, ಭಾರತದ ಯುವ ಬೌಲರ್​ಗಳ ಮಹತ್ಸಾಧನೆ.

    ವಿಶ್ವದರ್ಜೆಯ ಬೌಲಿಂಗ್ ಎದುರು ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ಯಾವ ರೀತಿ ಆಡಬೇಕೆಂಬುದನ್ನು ಪೂಜಾರ ಈ ಪ್ರವಾಸದಲ್ಲಿ ತೋರಿಸಿಕೊಟ್ಟರು. ಹಾಗೆ ನೋಡಿದರೆ, ನಾಲ್ಕೂ ಟೆಸ್ಟ್​ಗಳಲ್ಲಿ ಭಾರತದ ಬ್ಯಾಟಿಂಗ್ ಯಶಸ್ಸಿಗೆ ಪೂಜಾರ ಆಟವೇ ಆಧಾರಸ್ತಂಭ. ರಹಾನೆ ಮೆಲ್ಬೋರ್ನ್​ನಲ್ಲಿ ಶತಕ ಬಾರಿಸಿ, ಮೇಲ್ಪಂಕ್ತಿ ಹಾಕಿಕೊಟ್ಟರೂ ಉಳಿದ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್​ಗಿಂತ ನಾಯಕತ್ವವೇ ಚೇತೋಹಾರಿಯಾಗಿತ್ತು. ಆದರೆ, ಪೂಜಾರ ಒಂದೂ ಶತಕ ಬಾರಿಸದಿದ್ದರೂ, ಆಡಿದ ಅಷ್ಟೂ ಇನಿಂಗ್ಸ್​ಗಳಲ್ಲಿ ಥೇಟ್ ಬಂಡೆಯಂತೆ ಕ್ರೀಸ್ ಆಕ್ರಮಿಸಿಕೊಳ್ಳುವ ಮೂಲಕ ಆಸೀಸ್ ಬೌಲರ್​ಗಳನ್ನು ಬಳಲಿಸಿದರು. ಈ ಸರಣಿಯುದ್ದಕ್ಕೂ ಭಾರತದ ಪಾಲಿಗೆ ರನ್ ಗಳಿಸುವುದಕ್ಕಿಂತ ಔಟಾಗದೆ ಉಳಿಯುವುದು ಮುಖ್ಯವಾಗಿತ್ತು. ಅಂಥ ಕೋಟೆ ಕಾಯುವ ಆಟವನ್ನು ಪೂಜಾರ ಉಳಿದವರಿಗೆ ಕಲಿಸಿದರು. ಪೂಜಾರ ಒಂದು ಬದಿಯಲ್ಲಿ ಹೆಬ್ಬಂಡೆಯಂತೆ ನಿಂತಿದ್ದರಿಂದಲೇ ಜಡೇಜಾ, ರಿಷಬ್ ಪಂತ್, ಗಿಲ್ ಸಿಡಿಯುವುದಕ್ಕೆ ಸಾಧ್ಯವಾಯಿತು. ಪೂಜಾರ ರಕ್ಷಣಾತ್ಮಕ ಆಟವೇ ಸಿಡ್ನಿಯಲ್ಲಿ ವಿಹಾರಿ-ಅಶ್ವಿನ್, ಬ್ರಿಸ್ಬೇನ್​ನಲ್ಲಿ ಶಾರ್ದೂಲ್- ಸುಂದರ್ ಬ್ಯಾಟಿಂಗ್ ಯಶಸ್ಸಿಗೆ ಪ್ರೇರಣೆಯಾಯಿತು. ಈ ಸರಣಿಯಲ್ಲಿ ಪೂಜಾರ ಗಳಿಸಿದ ಒಂದೊಂದು ರನ್​ಗೂ ಚಿನ್ನದ ತೂಕ. ಮುಖ್ಯವಾಗಿ ರಾಹುಲ್ ದ್ರಾವಿಡ್ ನಿವೃತ್ತಿ ಬಳಿಕ ಅಪರೂಪವಾಗಿದ್ದ ರಕ್ಷಣಾತ್ಮಕ ಬ್ಯಾಟಿಂಗ್​ನ ಕೌಶಲ ಈ ಸರಣಿಯಲ್ಲಿ ಕಾಣಿಸಿತು. ಪೂಜಾರ, ವಿಹಾರಿ ಮತ್ತು ಸಿಡ್ನಿಯಲ್ಲಿ ಅಶ್ವಿನ್​ರ ರಕ್ಷಣಾತ್ಮಕ ಬ್ಯಾಟಿಂಗ್ ಕಾಂಗರೂ ಬೌಲರ್​ಗಳ ವಿರುದ್ಧ ಯಾವ ರೀತಿ ಆಡಬೇಕೆನ್ನುವುದಕ್ಕೆ ಪಠ್ಯಮಾದರಿಯಂತಿತ್ತು.

    ಒಟ್ಟಾರೆ ಭಾರತ ತಂಡ ಪ್ರವಾಸದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಘಾಸಿಗೊಂಡಿತ್ತು. ಆದರೆ, ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿತ್ತು. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್​ನ ಶಕ್ತಿಯಾಗಿ ಉಳಿದಿಲ್ಲ ಎಂದು ನಿರೂಪಿಸಿದ ಭಾರತೀಯರ ಸಿಂಹಸಾಧನೆ ಹೊಸ ಮನ್ವಂತರವನ್ನು ಬರೆಯಿತು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts