More

  ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​ ಅಜ್ಜಿ ಚಾರುಲತಾ ಪಟೇಲ್​​ ನಿಧನ; ಬಿಸಿಸಿಐ ಸಂತಾಪ

  ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ.

  2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ ಬಿದ್ದಿದ್ದರು. ಕ್ರಿಕೆಟ್​ ಬಗೆಗಿನ ಅವರ ಉತ್ಸಾಹ ಇಡೀ ಜಗತ್ತಿನ ಗಮನಸೆಳೆದಿತ್ತು. ಬರ್ಮಿಂಗ್​ಹ್ಯಾಂನ ಎಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಪಂದ್ಯ ನೋಡಲು ಆಗಮಿಸಿದ್ದ ಅಜ್ಜಿ, ಭಾರತ ಧ್ವಜದ ಶಾಲು ಹೊದ್ದು, ಕೆನ್ನೆಮೇಲೆ ಧ್ವಜ ಬಿಡಿಸಿಕೊಂಡು ಕುಳಿತಿದ್ದರು. ಟೀಂ ಇಂಡಿಯಾ ಆಟಗಾರರು ಬೌಂಡರಿ, ಸಿಕ್ಸರ್​​ ಹೊಡೆದಾಗಲೆಲ್ಲ ಚಿಕ್ಕಮಕ್ಕಳಂತೆ ಸಂಭ್ರಮಿಸಿದ್ದರು. ಅವರು ಟೀಂ ಇಂಡಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಪರಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.

  ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಚಾರುಲತಾ ಪಟೇಲ್​ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಚಾರುಲತಾ ಅವರು ಕೊಹ್ಲಿಯ ಕೆನ್ನೆ ಹಿಡಿದು ಆಶೀರ್ವಾದ ಮಾಡಿದ ಫೋಟೋ ಕೂಡ ವೈರಲ್ ಆಗಿತ್ತು.

  87 ವರ್ಷದ ವೃದ್ಧೆ ಚಾರುಲತಾ ಅವರ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿ ಟ್ವೀಟ್​ ಮಾಡಿದೆ.
  ಟೀಂ ಇಂಡಿಯಾದ ಸೂಪರ್​ಫ್ಯಾನ್​ ಚಾರುಲತಾ ಪಟೇಲ್​ ಜೀ ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ. ಆಟದ ಬಗ್ಗೆ ಅವರಿಗೆ ಇದ್ದ ಉತ್ಸಾದ ನಮಗೆ ಯಾವಾಗಲೂ ಪ್ರೇರೇಪಣೆ. ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಹೇಳಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts