More

    ಪಂಚನಬೆಟ್ಟು ಶಾಲೆಗೆ ಶಿಕ್ಷಕರ ಕೊರತೆ

    | ನರೇಂದ್ರ ಎಸ್.ಮರ್ಸಣಿಗೆ ಹೆಬ್ರಿ
    ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಹೋರಾಟ ಎಲ್ಲೆಡೆ ನಡೆಯುತ್ತಿದೆ. ಇದರ ನಡುವೆ ಮಕ್ಕಳ ಸಂಖ್ಯೆ ಕೊರತೆ ನೆಪದಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢಶಾಲೆಯಲ್ಲಿದ್ದ ಮೂವರು ಶಿಕ್ಷಕರನ್ನು ವರ್ಗಾಯಿಸಿ ಬಳಿಕ ವರ್ಗಾವಣೆ ರದ್ದುಗೊಳಿಸಿ ಸರ್ಕಾರ ಆದೇಶಿಸಿದರೂ ಶಿಕ್ಷಕರು ವಾಪಸಾಗದೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.
    ಇಲ್ಲಿನ ವಿದ್ಯಾರ್ಥಿಗಳಿಗೆ ಪಂಚನಬೆಟ್ಟು ಶಾಲೆ ಬಿಟ್ಟರೆ ಸುಮಾರು 7 ಕಿ.ಮೀ. ದೂರದ ಹಿರಿಯಡ್ಕ ಹಾಗೂ ಬೈಲೂರಿನ ಪ್ರೌಢಶಾಲೆಗಳಿಗೆ ಹೋಗಬೇಕು. ಶಾಲೆಯ 8,9,10ನೇ ತರಗತಿಯಲ್ಲಿ 45 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಬಹುತೇಕ ಕೂಲಿಕಾರ್ಮಿಕರ ಮಕ್ಕಳು. ಒಂದು ವೇಳೆ ಶಾಲೆ ಮುಚ್ಚಿದರೆ ಮಕ್ಕಳ ಭವಿಷ್ಯ ಕತ್ತಲಾಗಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಲ್ವರು ಗೌರವ ಶಿಕ್ಷಕರನ್ನು ನೇಮಿಸಿದ್ದು, ಪ್ರತಿ ತಿಂಗಳು 20000 ರೂ. ಗೌರವ ಧನವನ್ನು ಹಳೇ ವಿದ್ಯಾರ್ಥಿಗಳು ಹಾಗೂ ಊರಿನ ದಾನಿಗಳ ಸಹಕಾರದಿಂದ ನೀಡಲಾಗುತ್ತಿದೆ. ಶಾಲೆಯ ಮುಖ್ಯಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕ್ಲರ್ಕ್ ವೇತನವನ್ನು ಜೂನ್‌ನಿಂದ ತಡೆಹಿಡಿಯಲಾಗಿದ್ದು, ಅವರಿಗೂ ಸಮಸ್ಯೆಯಾಗಿದೆ.
    ಶಾಲೆಯಲ್ಲಿ ದೂರದ ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಬಳ್ಳಾರಿಯಿಂದ ಆಗಮಿಸಿದ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗಾಗಿ ವಿದ್ಯಾರ್ಥಿನಿಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಸ್ಟೆಲ್‌ಗೆ ಪ್ರತಿ ತಿಂಗಳು 50ರಿಂದ 60 ಸಾವಿರ ರೂ. ಖರ್ಚು ತಗುಲಿದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಳೇ ವಿದ್ಯಾರ್ಥಿಗಳು, ದಾನಿಗಳು ಸಹಕರಿಸುತ್ತಿದ್ದಾರೆ.
    ಶಾಲೆಗೆ ಸಂಚಕಾರ: ಪ್ರತಿ ತರಗತಿಯಲ್ಲಿ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಈ ಸಂಖ್ಯಾಬಲ ಹೊಂದಿಸುವುದು ಕಷ್ಟಸಾಧ್ಯ. ಇಂತಹ ಆದೇಶ ಮುಂದಿನ ದಿನಗಳಲ್ಲಿ ಕಡ್ಡಾಯವಾದರೆ ಬಹುತೇಕ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದು ಖಚಿತ. ಸಂಬಂಧಪಟ್ಟವರು ಈ ಬಗ್ಗೆ ಗಮನಿಸಬೇಕಿದೆ.
    ಖಾಸಗಿ ಒತ್ತಡದ ಪ್ರಭಾವ: ವರ್ಗಾವಣೆಗೊಂಡ ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಶಿಕ್ಷಕರು ಮೂಲ ಶಾಲೆಗೆ ವಾಪಸಾಗದೆ 10ನೇ ತರಗತಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗಣಿತ ಹಾಗೂ ವಿಜ್ಞಾನಕ್ಕೆ ಇನ್ನೂ ಶಿಕ್ಷಕರ ನೇಮಕವಾಗಿಲ್ಲ. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಾನೂನುಬಾಹಿರವಾಗಿ ಶಿಕ್ಷಕರನ್ನು ವರ್ಗಾಯಿಸಿದ್ದಾರೆ. ಆದರೂ ಅಂಥ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಶಿಕ್ಷಣ ಇಲಾಖೆ ಮೇಲಧಿಕಾರಿಗಳ ಆದೇಶ ಪಾಲಿಸುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ದೂರಿದೆ.

    ಪ್ರಧಾನಿ ಕಚೇರಿ ಪತ್ರಕ್ಕೂ ಕ್ಯಾರೇ ಇಲ್ಲ!: ಊರಿಗಿರುವ ಏಕೈಕ ಪ್ರೌಢಶಾಲೆಯ ಸಮಸ್ಯೆ ಬಗ್ಗೆ ವಿದ್ಯಾರ್ಥಿನಿ ವರ್ಷಿತಾ ಪಂಚನಬೆಟ್ಟು ಎಂಬಾಕೆ ಪ್ರಧಾನಿಗೆ ಪತ್ರ ಬರೆದಿದ್ದಳು. ಮನವಿಗೆ ಸ್ಪಂದಿಸಿ ಪ್ರಧಾನಿ ಕಾರ್ಯಾಲಯ, ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪರಮರ್ಶಿಸಿ ಕ್ರಮಕೈಗೊಂಡು ಉತ್ತರ ನೀಡಲು ಸೂಚಿಸಿತ್ತು. ಆದರೂ ಶಾಲೆಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಸರ್ಕಾರವಾದರೂ ಶಾಲೆಯನ್ನು ನಡೆಸಿ ಪಂಚನಬೆಟ್ಟು ಗ್ರಾಮೀಣ ಭಾಗದಲ್ಲಿ ಬಡ, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.ಪಂಚನಬೆಟ್ಟು ಶಾಲೆಗೆ ಶಿಕ್ಷಕರ ಕೊರತೆ


    ಕೋವಿಡ್ ಸಂದರ್ಭ ಶಾಲೆಗಳು ಮುಚ್ಚಿದ್ದ ಕಾರಣ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಖ್ಯಾಬಲದ ಸಬೂಬು ನೀಡಿ ಕಾನೂನುಬಾಹಿರವಾಗಿ ಶಿಕ್ಷಕರನ್ನು ವರ್ಗಾಯಿಸಿದ್ದಾರೆ. ಪಂಚನಬೆಟ್ಟು ಶಾಲೆಯ ಶಿಕ್ಷಕರನ್ನು ಇತರ ಶಾಲೆಗಳಿಗೆ ನಿಯುಕ್ತಿಗೊಳಿಸಿ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ದುಸ್ಸಾಹಸಕ್ಕೆ ಇಳಿದಿರುವುದು ದುರದೃಷ್ಟ.
    |ಎ.ನರಸಿಂಹ, ಅಧ್ಯಕ್ಷ, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆ


    ವರ್ಗಾವಣೆಗೆ ಸಂಬಂಧಿಸಿದಂತೆ ಶಾಲೆಗೆ ಸಂಖ್ಯಾಬಲದ ಸಬೂಬು ನೀಡುತ್ತಾರೆ. ಸರ್ಕಾರದ ಆದೇಶದ ಪ್ರಕಾರ ವರ್ಗಾವಣೆಗೊಂಡ ಶಿಕ್ಷಕರ ವಾಪಸಾತಿ ಕುರಿತು ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಗಮನಕ್ಕೂ ತರಲಾಗಿದೆ. ಮತ್ತೊಮ್ಮೆ ಇಲಾಖಾಧಿಕಾರಿಗಳ ಜತೆ ಚರ್ಚಿಸಲಾಗುವುದು.
    |ಲಾಲಾಜಿ ಆರ್. ಮೆಂಡನ್ ಶಾಸಕ ಕಾಪು ವಿಧಾನಸಭಾ ಕ್ಷೇತ್ರ

    ವರ್ಗಾವಣೆಗೊಂಡ ಶಿಕ್ಷಕರನ್ನು ವಾಪಸು ಕರೆತರುವ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಕಮಿಷನರ್ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
    |ಎಚ್.ಎನ್.ನಾಗೂರ, ಡಿ.ಡಿ.ಪಿ.ಐ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts