More

    ವಿದ್ಯಾಗಮದಿಂದ ಶಿಕ್ಷಕಿ ಪ್ರಾಣ ಆಪತ್ತಿನಲ್ಲಿ

    ಮೂಡುಬಿದಿರೆ: ಅನುದಾನಿತ ಶಾಲೆಗಳಲ್ಲಿ ಶಿಕ್ಷಕ ದಂಪತಿ ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಪರ್ಕಕ್ಕೆ ಊರು ಸುತ್ತಾಡಿ ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಒಬ್ಬರ ಆರೋಗ್ಯ ವಿಷಮಿಸುತ್ತಿದ್ದು, ಚಿಕಿತ್ಸೆ ಖರ್ಚು ಭರಿಸಲು ಪರದಾಡುತ್ತಿರುವ ಪುತ್ರಿ ನೆರವಿಗಾಗಿ ಸರ್ಕಾರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮೊರೆ ಇಟ್ಟಿದ್ದಾರೆ.

    ಮೂಡುಬಿದಿರೆಯ ಡಿ.ಜೆ ಅನುದಾನಿತ ಶಾಲಾ ಮುಖ್ಯ ಶಿಕ್ಷಕ ಶಶಿಕಾಂತ್ ವೈ. ಹಾಗೂ ಮಕ್ಕಿಯ ಜವಾಹರಲಾಲ್ ನೆಹರು ಅನುದಾನಿತ ಪ್ರೌಢಶಾಲೆ ಶಿಕ್ಷಕಿ ಪದ್ಮಾಕ್ಷಿ ಎನ್. ವಿದ್ಯಾಗಮ ಕರ್ತವ್ಯಕ್ಕೆ ಹಾಜರಾದ ಬಳಿಕ ಅಸ್ವಸ್ಥಗೊಂಡಿದ್ದರು. ಇಬ್ಬರಿಗೂ ಕೋವಿಡ್ ದೃಢಗೊಂಡಿದ್ದು, ಶಶಿಕಾಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಪದ್ಮಾಕ್ಷಿ ಸೆ.29ರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು, ಪ್ರತಿದಿನ 30 ಸಾವಿರ ರೂ.ನಷ್ಟು ಆಸ್ಪತ್ರೆ ವೆಚ್ಚವಾಗುತ್ತಿದೆ. ಇದುವರೆಗೆ ಆರೇಳು ಲಕ್ಷ ರೂ. ಖರ್ಚಾಗಿದ್ದು, ಕುಟುಂಬ ಕಂಗಾಲಾಗಿದೆ.
    ‘ನನ್ನ ಹೆತ್ತವರು ಕ್ಷೇಮವಾಗಿದ್ದರು. ವಿದ್ಯಾಗಮದಿಂದಾಗಿ ಈಗ ಅಮ್ಮನ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ. ನನ್ನ ಅಮ್ಮನಿಗೇನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದು ಪುತ್ರಿ, ಮೂಡುಬಿದಿರೆಯ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಐಶ್ವರ್ಯಾ ಜೈನ್ ಆಕ್ರೋಶದಿಂದ ಅಳಲು ವ್ಯಕ್ತಪಡಿಸಿದ್ದಾರೆ.

    ಆರ್ಥಿಕವಾಗಿ ನೆರವು ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ- ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಐಶ್ವರ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ. ಶಾಸಕ, ಸಂಸದರ ಜತೆಗೆ ವಿವಿಧ ಇಲಾಖೆಗಳಿಗೂ ಕೋರಿಕೆ ಸಲ್ಲಿಸಲಾಗಿದೆ.

     ನನ್ನ ಕುಟುಂಬಕ್ಕೀಗ ವೈದ್ಯಕೀಯ ಸೌಲಭ್ಯಗಳಿಗಾಗಿ ತುರ್ತಾಗಿ ಆರ್ಥಿಕ ನೆರವು ಬೇಕಾಗಿದೆ. ಸರ್ಕಾರ ಶಿಕ್ಷಕರನ್ನು ಈ ತುರ್ತು ಅಗತ್ಯದ ಸಂದರ್ಭದಲ್ಲಿ ಕೈಬಿಡುವುದಿಲ್ಲ ಎಂದು ನಂಬಿದ್ದೇನೆ. ವಿದ್ಯಾಗಮ ಕರ್ತವ್ಯ ನಿರ್ವಹಿಸಿದ ನನ್ನ ಅಮ್ಮನ ಪ್ರಾಣ ಸಂಕಟದಲ್ಲಿದೆ. ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿಕೊಡಿ. ಒತ್ತಡದ ನಡುವೆ ಶಿಕ್ಷಣ ಸಚಿವರು, ಇತರರನ್ನು ಭೇಟಿಯಾಗಿ ನನ್ನ ನೋವನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ.
    – ಐಶ್ವರ್ಯಾ, ಶಿಕ್ಷಕ ದಂಪತಿ ಪುತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts