More

    ಒಂದೂವರೆ ವರ್ಷದಲ್ಲಿ ಶಿಕ್ಷಕರು ಭರ್ತಿ

    ಸಾಗರ:ಮುಂದಿನ ಒಂದೂವರೆ ವರ್ಷದಲ್ಲಿ ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಲಾಗುತ್ತದೆ ಎಂದು ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
    ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗೆ ಮಂಜೂರಾತಿ ಸಿಕ್ಕಿದ್ದು 13,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರ ನಡೆಯಲಿದೆ ಎಂದರು.
    ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ನಿರ್ಮಾಣ, ಶೌಚಗೃಹ, ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಬೇಕು. ಕೊಠಡಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು ಅಗತ್ಯ ಇರುವ ಕಡೆಗಳಲ್ಲಿ ತಕ್ಷಣ ರಿಪೇರಿ ಕೆಲಸ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು, ನಗರದ ಖಾಸಗಿ ಶಾಲೆಯೊಂದರಲ್ಲಿ ಮಗುವೊಂದನ್ನು ಡ್ರಮ್‌ನಲ್ಲಿ ಹಾಕಿ ಉರುಳಿಸಿದ ಘಟನೆ ನಡೆದಿದ್ದು ತಕ್ಷಣ ಆ ಶಾಲೆಯ ಶಿಕ್ಷಕರಿಗೆ ನೋಟಿಸ್ ಕೊಡಿ ಎಂದರು. ಅಲ್ಲದೇ 15 ಶಾಲೆಗಳ ಮೇಲೆ ವಿದ್ಯುತ್ ಕಂಬಗಳು ಹಾದುಹೋಗುತ್ತಿದ್ದು, ಅದನ್ನು ತಕ್ಷಣ ತೆರವುಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.
    ಮಕ್ಕಳು ಅತಿಯಾದ ಪುಸ್ತಕಗಳನ್ನು ಮಕ್ಕಳು ಹೊತ್ತೊಯುವುದನ್ನು ತಪ್ಪಿಸಲು ನಿಗದಿತ ಮಾನದಂಡ ಅನುಸರಿಲಾಗುತ್ತದೆ. ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಎಲ್ಲ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನಿಗದಿತ ಅವಧಿಯಲ್ಲಿ ತಲುಪಿಸಲಾಗಿದೆ ಎಂದು ತಿಳಿಸಿದರು.
    ಗ್ರಾಮೀಣ ಭಾಗಗಳಲ್ಲಿ ಹಿಂದಿನ ಸರ್ಕಾರ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ವಾರಕ್ಕೆ ಒಂದು ದಿನ ಮೊಟ್ಟೆ ಕೊಡುವ ತೀರ್ಮಾನ ಕೈಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ಸೂಚಿಸಿದ್ದಾರಲ್ಲದೇ ಮೊಟ್ಟೆ ಸೇವಿಸದ ಮಕ್ಕಳಿಗೆ ಕಡಲೆ ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲಾಗುತ್ತದೆ ಎಂದರು.
    ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರು ಬೇರೆ ವ್ಯವಹಾರಗಳಲ್ಲಿ ತೊಡಗಿಕೊಂಡು ತಮ್ಮ ಬದಲಿಗೆ ಇನ್ನೊಬ್ಬರನ್ನು ಪಾಠ ಮಾಡಲು ಕಳುಹಿಸುತ್ತಿರುವ ದೂರುಗಳು ಬಂದಿವೆ. ಕೆಲ ಶಿಕ್ಷಕರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡು ತಮ್ಮ ಮೂಲ ಕರ್ತವ್ಯವನ್ನೇ ಮರೆಯುತ್ತಿರುವ ಬಗ್ಗೆಯೂ ನಮಗೆ ಮಾಹಿತಿಗಳು ಲಭ್ಯವಾಗಿದ್ದು ಅಂತಹ ಶಿಕ್ಷಕರ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಧು ಬಂಗಾರಪ್ಪ ಕಡಕ್ ಎಚ್ಚರಿಕೆ ನೀಡಿದರು.
    ಸುಮ್ಮನೆ ರೈತರಿಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ತೊಂದರೆ ಕೊಡಬೇಡಿ ಎಂದು ಸಚಿವರು, ಶೀಘ್ರದಲ್ಲಿಯೇ ಉನ್ನತ ಮಟ್ಟದ ಅಧಕಾರಿಗಳು ಮತ್ತು ಮಂತ್ರಿಗಳ ಸಭೆ ಕರೆದು ಕೆಲವು ನಿರ್ಣಯಗಳನ್ನು ತೆಗೆದುಕೊಂಡು ಕಾನೂನು ತಿದ್ದುಪಡಿಗೆ ಪ್ರಯತ್ನ ನಡೆಸುತ್ತಿದ್ದೇವೆ. ಅಲ್ಲಿಯವರೆಗೆ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಅತಿಕ್ರಮ ಒತ್ತುವರಿ ನಡೆಸಿದರೆ ಅಗತ್ಯ ಕ್ರಮ ಕೈಗೊಳ್ಳಿ. ಸಮಸ್ಯೆಗಳನ್ನು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಮೊದಲು ತನ್ನಿರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಕಂದಾಯ, ಅರಣ್ಯ, ಅಬಕಾರಿ, ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಎಂದು ಶಾಸಕ ಗೋಪಾಲಕೃಷ್ಣ ಬೇಳೂರು, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಡಿಸಿಎಫ್ ಸಂತೋಷ್, ತಾಪಂ ಇಒ ನಾಗೇಶ್ ಬ್ಯಾಲದ್, ಡಿವೈಎಸ್ಪಿ ರೋಹನ್ ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts