More

    10 ವರ್ಷವಾದರೂ ಭದ್ರಾ ನೀರು ಬರಲ್ಲ ; ಬಿಜೆಪಿ ಸಚಿವರು, ಶಾಸಕರಿಗೆ ಜಯಚಂದ್ರ ತಿರುಗೇಟು

    ತುಮಕೂರು: ಇನ್ನೂ 10 ವರ್ಷಗಳಾದರೂ ಭದ್ರಾ ಮೇಲ್ದಂಡೆ ಯೋಜನೆ ನೀರು ಜಿಲ್ಲೆಗೆ ಹರಿಯುವುದಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಾಂಗ್ ಕೊಟ್ಟರು.

    ಮಧ್ಯಕರ್ನಾಟಕ ಹಲವು ಜಿಲ್ಲೆಗಳಿಗೆ ನೀರೋದಗಿಸುವ 12,340 ಕೋಟಿ ರೂಪಾಯಿಯ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲಾ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಭೂಸ್ವಾಧೀನಪಡಿಸಿಕೊಳ್ಳದೆ ಹೋದಲ್ಲಿ ಈ ಯೋಜನೆ ಅನುಷ್ಠಾನ ಹತ್ತಾರು ವರ್ಷಗಳಾದರೂ ಸಾಧ್ಯವಿಲ್ಲ. ಇನ್ನೊಂದು ವರ್ಷದಲ್ಲಿ ನೀರು ಹರಿಯಲಿದೆ ಎಂಬ ಬಿಜೆಪಿ ಸರ್ಕಾರ, ಸ್ಥಳೀಯ ಶಾಸಕರ ಹೇಳಿಕೆಗಳು ಭರವಸೆಗಳಾಗೆ ಉಳಿಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತುಮಕೂರು ನಾಲಾ ಕಾಮಗಾರಿ ಶೇ.10 ನಡೆದಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಶಿರಾ, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಭದ್ರಾ ನೀರು ಬರುವುದು ಮರೀಚಿಕೆಯಾಗಲಿದೆ. 160 ಕಿ.ಮೀ., ನಾಲಾ ಕಾಮಗಾರಿಗೆ 2420 ಎಕರೆ ಭೂಮಿ ಅಗತ್ಯವಿದ್ದು 540 ಎಕರೆ ಭೂಮಿ ಹೊರತುಪಡಿಸಿದರೆ ಉಳಿದ ಭೂಮಿ ವಶಪಡಿಸಿಕೊಳ್ಳಲು ಅಧಿಸೂಚನೆಯೇ ಹೊರಡಿಸಿಲ್ಲ. ಇನ್ನು ಯೋಜನೆಗೆ ಭೂಮಿಕೊಟ್ಟವರಿಗೆ ಬಿಡಿಗಾಸು ಪರಿಹಾರ ಕೊಟ್ಟಿಲ್ಲ ಎಂದರು.

    ‘ವೈ’ ಅಲೈನ್ಮೆಂಟ್: ಅಜ್ಜಂಪುರದ ಬಳಿ ಚಿತ್ರದುರ್ಗಕ್ಕೆ ಹೋಗುವ ಎಡದಂಡೆ ನಾಲೆ ಹಾಗೂ ತುಮಕೂರಿಗೆ ಬರುವ ಬಲದಂಡೆ ನಾಲೆ ನಿರ್ಮಿಸುವ ಕಾಮಗಾರಿ ಆರಂಭಿಕ 3 ಕಿ.ಮೀ., ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಸರ್ಕಾರಿ ಭೂಮಿ ಇರುವ ಕಡೆಯಷ್ಟೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ 12 ವರ್ಷಗಳಲ್ಲಿ 4500 ಕೋಟಿ ರೂ. ಗಳವರೆಗೆ ಹಣ ವ್ಯಯ ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ. ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಯಾರೇ ಬಂದರೂ 2-3 ವರ್ಷಗಳಲ್ಲಿ ಈ ಕಾಮಗಾರಿ ಮುಗಿಯದು ಎಂದು ತಿರುಗೇಟು ಕೊಟ್ಟರು. ತುಮಕೂರು ನಾಲೆಗೆ ನಿಗದಿಪಡಿಸಲಾಗಿದ್ದ 10 ಟಿಎಂಸಿಗೆ ಬದಲಾಗಿ 4 ಟಿಎಂಸಿ ನೀರು ಹರಿಸಲು ಮುಂದಾಗಿದ್ದು ಇದರಿಂದ ಯಾವುದೇ ಪ್ರಯೋಜನವಾಗದು. ಸರ್ಕಾರದ ಹಣವಷ್ಟೇ ಪೋಲಾಗಲಿದೆ. ಇನ್ನು ಮೂಲ ಯೋಜನೆಯಂತೆ 29.90 ಟಿಎಂಸಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಧ್ಯಕರ್ನಾಟಕದ ಜಿಲ್ಲೆಗಳ ಜನರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜಯಚಂದ್ರ ಎಚ್ಚರಿಸಿದರು.

    ಕಾಂಗ್ರೆಸ್ ಮುಖಂಡರಾದ ಎಚ್.ಸಿ.ಹನುಮಂತಯ್ಯ, ಪರ್ವತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ನಟರಾಜು, ಸಂಜಯ್‌ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.

    ವಿಶ್ವನಾಥ್ ಆರೋಪ ನಿಜ:l ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 21 ಸಾವಿರ ಕೋಟಿ ರೂ., ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಸಚಿವ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪದಲ್ಲಿ ಸತ್ಯ ಇದೆ. ಶಿರಾ ಭಾಗಕ್ಕೆ ನೀರು ಹರಿಸುವ ಪೈಪ್‌ಲೈನ್ ಯೋಜನೆ ಮೂಲ ವೆಚ್ಚ 953 ಕೋಟಿ ರೂ.,ಗಳಿಗೆ ನಿಗದಿಪಡಿಸಿದ್ದು ರಾತ್ರೋರಾತ್ರಿ 1053 ಕೋ.ರೂ.,ಗಳಿಗೆ ಹೆಚ್ಚಿಸಿ ಟೆಂಡರ್ ಕರೆಯಲಾಗಿದ್ದು ಭ್ರಷ್ಟಾಚಾರದ ವಾಸನೆ ಹರಿದಾಡಿದೆ ಎಂದು ಟಿ.ಬಿ. ಜಯಚಂದ್ರ ದೂರಿದರು.

    ಮಂಕುಬೂದಿ ಎರಚುವ ಬಿಜೆಪಿ ! : ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಸಚಿವರು, ಶಾಸಕರು, ಮುಖಂಡರು ನೀಡಿದ ಎಲ್ಲ ಭರವಸೆಗಳು ಪೊಳ್ಳು ಎಂಬುದು ಈಗ ಜನತೆಗೆ ಅರಿವಾಗಿದೆ. 9 ತಿಂಗಳಾಗಿದ್ದು ಡಿಲಿವರಿ ಆಗಲಿ ಎಂದು ಕಾಯುತ್ತಿದ್ದೆ. ಮದಲೂರು ಕೆರೆ ತುಂಬಿಸಿ ಬಾಗಿನ ಅರ್ಪಿಸಲು ಯಡಿಯೂರಪ್ಪ ಬರಲಿಲ್ಲ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಜಾರಿಗೆ ಬಂದಿಲ್ಲ. ಒಳಮೀಸಲಾತಿ ಜಾರಿಯಾಗಿಲ್ಲ. ದೇಶದಲ್ಲಿ ಬಿಜೆಪಿಯವರು ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಮತದಾರರಿಗೆ ಮಂಕುಬೂದಿ ಎರಚಿ, ಜನರನ್ನು ಓಲೈಸಿಕೊಳ್ಳುತ್ತಾರೆ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಕ್ಷೇತ್ರದ

    ಸಿಎಂ ಯಾರೆಂಬುದು ಈಗ ಅಪ್ರಸ್ತುತ: ಸಿಎಂ ಹೆಸರನ್ನು ಕಾಂಗ್ರೆಸ್‌ನಲ್ಲಿ ಈಗಲೇ ಪ್ರಸ್ತಾಪ ಮಾಡುವುದು ಅಪ್ರಸ್ತುತ. 2023ಕ್ಕೆ ಜನರು ಬಹುಮತ ನೀಡಿದರೆ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಕರೊನಾ 3ನೇ ಅಲೆಯಲ್ಲಿ ಯಾರು ಇರುತ್ತಾರೊ, ಯಾರು ಹೋಗುತ್ತಾರೊ ಗೊತ್ತಿಲ್ಲ . ಮುಂದಿನ ಚುನಾವಣೆಯಲ್ಲಿ ಗೆದ್ದು ಬರುವ ಶಾಸಕರು ಪಕ್ಷದ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡುವವರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ. 224 ಶಾಸಕರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ನಮ್ಮದು ಕಾಂಗ್ರೆಸ್ ಬಣ ಒಂದೇ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts