More

    ತೆರಿಗೆ ವಸೂಲಿ ನಿರ್ಲಕ್ಷಿಸಿದರೆ ಕಠಿಣ ಕ್ರಮ

    ಬೆಳಗಾವಿ: ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹಿಸದಿದ್ದರೆ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು.

    ನಗರದ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಭಾಗೀಯ ಮಟ್ಟದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ, ನೀರು, ಜಾಹೀರಾತು ಸೇರಿ ವಿವಿಧ ಕರ ವಸೂಲಿ ಬಹಳಷ್ಟು ಕಡಿಮೆ ಇದೆ. ಇದರಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ವಸೂಲಿಯಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸುವಂತೆ ಸೂಚಿಸಲಾಗಿದೆ ಎಂದರು.

    ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತ, ಆದಾಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಹಲವು ಬದಲಾವಣೆ ತರಲಾಗುತ್ತಿದೆ. ವಾಣಿಜ್ಯ ವ್ಯಾಪಾರ-ವಹಿವಾಟು ಪರವಾನಗಿ ಐದು ವರ್ಷ ಅವಧಿಗೆ ನೀಡಲಾಗುತ್ತಿದೆ. ಅಲ್ಲದೆ, ಐದು ವರ್ಷದ ತೆರಿಗೆಯನ್ನು ಮುಂಗಡವಾಗಿ ತುಂಬಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳು ಪ್ರತಿ ವರ್ಷ ಪರವಾನಗಿ ನವೀಕರಣಕ್ಕಾಗಿ ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು. ಹಲವು ವರ್ಷಗಳಿಂದ ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಕಡೆ ಜಾಹೀರಾತು ಲಕ ಅಳವಡಿಸಲಾಗುತ್ತಿದೆ. ಆದರೆ, ಮಾಲೀಕರು ತೆರಿಗೆ ಕಟ್ಟುತ್ತಿಲ್ಲ. ಯಾವುದೋ ಉದ್ದಮಿಗೆ ಪುಕ್ಕಟೆ ಪ್ರಚಾರ ನೀಡುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡಬಾರದು. ಇಂಥ ಜಾಹಿರಾತು ಲಕ ತೆರವುಗೊಳಿಸಬೇಕು ಎಂದು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.

    ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅವಶ್ಯವಿ ರುವ ಸ್ಥಳಗಳಲ್ಲಿ ತಕ್ಷಣ ಕ್ಯಾಂಟೀನ್ ಪ್ರಾರಂಭಿಸಬೇಕು. ಈ ಕುರಿತು ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಗೋಕಾಕ ತಾಲೂಕಿನಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಇದೆ. ಸರ್ಕಾರದ ಮಾರ್ಗಸೂಚಿ ಅನ್ವಯ 25 ಸಾವಿರ ಜನಸಂಖ್ಯೆ ಇರುವ ಸ್ಥಳಗಳಲ್ಲಿ 1 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಸೂಚಿಸಿದರು. ಪಟ್ಟಣ ಪಂಚಾಯಿತಿಗಳಲ್ಲಿ ಜನಸಂಖ್ಯಾ ಅನುಗುಣವಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಕ್ಯಾಂಟೀನ್‌ಗಳ ಪ್ರಾರಂಭಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ತುಂಬ ಮುಖ್ಯ. ಹಾಗಾಗಿ, ಯಾವುದೇ ಅಧಿಕಾರಿಗಳು ವಿಳಂಬ ತೋರಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

    ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಗಣೇಶ್ ಹುಕ್ಕೇರಿ,ಶಾಸಕ ವಿಶ್ವಾಸ ವೈದ್ಯ, ಮಹೇಶ ತಮ್ಮಣ್ಣವರ, ಆಸ್ೀ ಸೇಠ್, ಪೌರಾಡಳಿತ ನಿರ್ದೇಶಕಿ ಎನ್. ಮಂಜುಶ್ರೀ, ಕೆ.ಯುಐ.ಡಿ.ಎ್.ಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್ ಇತರರಿದ್ದರು.
    ನಿರ್ಲಕ್ಷಿಸಿದರೆ ನೋಟಿಸ್ ಜಾರಿ

    ಧಾರವಾಡ ವ್ಯಾಪ್ತಿಯಲ್ಲಿ ಈಗಾಗಲೇ 8 ಹಳೆಯ ಕ್ಯಾಂಟೀನ್‌ಗಳಿವೆ. 20 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ, ಟೆಂಡರ್ ಆಹ್ವಾನಿಸಲಾಗುವುದು. ಅದೇ ರೀತಿ ಹಾವೇರಿಯಲ್ಲಿ 3 ಇಂದಿರಾ ಕ್ಯಾಂಟೀನ್‌ಗಳಿವೆ ಮತ್ತು 7 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ ಸದ್ಯದಲ್ಲೇ ಟೆಂಡರ್ ಕರೆದು ಆರಂಭಕ್ಕೆ ಸೂಚಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭಕ್ಕೆ ಸರ್ಕಾರದ ಹೊಸ ನಿರ್ದೇಶನದಂತೆ ಯಾರು ಕ್ರಮ ವಹಿಸುವುದಿಲ್ಲವೋ ಅಂಥ ಅಧಿಕಾರಿಗಳ ವಿರುದ್ಧ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಸಚಿವ ಸುರೇಶ್ ಸೂಚಿಸಿದರು.

    ಕುಡಿಯುವ ನೀರು ಸರಬರಾಜು ನಿಲ್ಲದಿರಲಿ

    ನಗರಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಯಾವುದೇ ರೀತಿ ತೊಂದರೆ ಆಗಬಾರದು. ಅಗತ್ಯ ಸ್ಥಳಗಳಲ್ಲಿ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಬೇಕು. ಅನುದಾನ ಕೊರತೆಯಾದಲ್ಲಿ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹಿಡಕಲ್ ಜಲಾಶಯದಿಂದ ನಗರದವೆರೆಗೆ ಹೊಸ ಪೈಪ್‌ಲೈನ್ ಅಳವಡಿಸಲು ಆದೇಶವಿದ್ದು, ಅರಣ್ಯ ಇಲಾಖೆಯಿಂದ ಎನ್‌ಒಸಿ ನೀಡದೆ ತಡೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರ ಜತೆ ಚರ್ಚಿಸಿ ಈಗಾಗಲೇ ಇರುವ ಪೈಪ್‌ಲೈನ್ ಪಕ್ಕ ಹೊಸ ಪೈಪ್‌ಲೈನ್ ಅಳವಡಿಸಲು ಕೂಡಲೇ ಎನ್‌ಒಸಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಬಿ.ಎಸ್.ಸುರೇಶ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts