More

    ಶುಲ್ಕ ಸಂಗ್ರಹ ಗುರಿ ತಲುಪುವ ನಿರೀಕ್ಷೆ

    ಬ್ಯಾಡಗಿ: ಕರೊನಾ ಸೃಷ್ಟಿಸಿದ ಬಿಕ್ಕಟ್ಟು, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಏರಿಳಿತ… ಹೀಗೆ ಹತ್ತು ಹಲವು ತೊಡಕುಗಳ ಮಧ್ಯೆಯೂ ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆ ಪ್ರಸಕ್ತ ಸಾಲಿನಲ್ಲಿ ಶುಲ್ಕ ಸಂಗ್ರಹ ಗುರಿ ಸಾಧಿಸುವತ್ತ ಸಾಗಿದೆ.

    ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆ ಗುಣಮಟ್ಟದ ವ್ಯಾಪಾರ, ಉತ್ತಮ ದರ, ರೈತರಿಗೆ ಮೂಲಸೌಲಭ್ಯ, ಇಲೆಕ್ಟ್ರಾನಿಕ್ ತೂಕ, ಆನ್​ಲೈನ್ ಟೆಂಡರ್​ನಿಂದ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದಿದೆ. ಸುಮಾರು 75 ಎಕರೆ ವಿಸ್ತಾರದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ 750ಕ್ಕೂ ಹೆಚ್ಚು ವರ್ತಕರು ಪರವಾನಗಿ ಹೊಂದಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ನಿಯಮದಂತೆ ಕ್ರಮಬದ್ಧ ವ್ಯಾಪಾರ ನಡೆದಿದೆ. ಮಾರಾಟವಾದ 24 ಗಂಟೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದೆ.

    ರಾಜ್ಯದ ಬಳ್ಳಾರಿ, ರಾಯಚೂರು, ಗದಗ, ಧಾರವಾಡದ ವಿವಿಧೆಡೆಯಿಂದ ರೈತರು ಮೆಣಸಿನಕಾಯಿ ಮಾರಾಟಕ್ಕೆ ಇಲ್ಲಿಗೆ ಬರುತ್ತಾರೆ. ಇಲ್ಲಿನ ವ್ಯಾಪಾರ ಉತ್ತರ ಕರ್ನಾಟಕ ರೈತರನ್ನು ಅವಲಂಬಿಸಿದ್ದು, ಬಯಲು ಸೀಮೆಯ ಮಣ್ಣಿನಲ್ಲಿ ಬೆಳೆದ ಮೆಣಸಿಕಾಯಿ ರುಚಿ, ಬಣ್ಣ ಇಂದಿಗೂ ಉಳಿಸಿಕೊಂಡಿದೆ. ದೇಶದ ಪ್ರಮುಖ ಮಸಾಲೆ ಪದಾರ್ಥಗಳ ಕಂಪನಿಗಳಿಗೆ ಇಲ್ಲಿನ ಮೆಣಸಿನಕಾಯಿ ರಫ್ತಾಗುತ್ತಿದೆ.

    2021-22ನೇ ಸಾಲಿನಲ್ಲಿ 9.5 ಕೋಟಿ ರೂಪಾಯಿ ಮಾರುಕಟ್ಟೆ ಶುಲ್ಕ ಸಂಗ್ರಹ ಗುರಿ ಹೊಂದಲಾಗಿದೆ. ಅತಿವೃಷ್ಟಿಯಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿ ಆವಕ ಇಳಿಮುಖವಾಗಿದೆ. ಈ ಮೊದಲು 100 ರೂಪಾಯಿಗೆ ಸೆಸ್ 1.60 ರೂಪಾಯಿ ಇತ್ತು. ಸದ್ಯ 0.60 ರೂಪಾಯಿಗೆ ಇಳಿಸಲಾಗಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಒಟ್ಟಾರೆ ಶುಲ್ಕ ಸಂಗ್ರಹ ಇಳಿಕೆ ಕಂಡಿದೆ. ಆದರೂ, ನಿಗದಿತ ಗುರಿ ತಲುಪುವಲ್ಲಿ ಮಾರುಕಟ್ಟೆ ಯಶಸ್ವಿಯಾಗಿದೆ.

    ಪ್ರಸಕ್ತ ಸಾಲಿನಲ್ಲಿ ಗುರಿ ಮುಟ್ಟುವ ನಿರೀಕ್ಷೆಯಿದೆ. ಡಿಸೆಂಬರ್ ಅಂತ್ಯಕ್ಕೆ 6,19,365 ಕ್ವಿಂಟಾಲ್ ಮೆಣಸಿನಕಾಯಿ ಆವಕವಾಗಿದ್ದು, 4.3 ಕೋಟಿ ರೂಪಾಯಿ ಶುಲ್ಕ ಸಂಗ್ರಹವಾಗಿದೆ. ಮೆಣಸಿನಕಾಯಿ ದರದಲ್ಲಿ ಏರಿಕೆ ಕಂಡಿರುವುದರಿಂದ 9.5 ಕೋಟಿ ರೂಪಾಯಿ ಶುಲ್ಕ ಸಂಗ್ರಹ ಗುರಿ ತಲುಪಬಹುದು. ಹೊಸಪೇಟೆ ಹಾಗೂ ಗದಗ ಸುತ್ತಮುತ್ತಲ ರೈತರು ಬೇಸಿಗೆಯಲ್ಲಿ ನೀರಾವರಿ ಬೆಳೆಯಾಗಿ ಮೆಣಸಿನಕಾಯಿ ಬೆಳೆಯಲು ಮುಂದಾಗಿದ್ದಾರೆ. ಕೆಲವರು ಮೆಸ್ಸ್ ಪದ್ಧತಿಯಲ್ಲಿ ಹೊಸ ಸೀಡ್ ತಳಿ ಬೆಳೆಯುತ್ತಿದ್ದಾರೆ. ಡಿಸೆಂಬರ್​ನಲ್ಲಿ ಮಾಮೂಲಿನಂತೆ ಆವಕ ಒಂದೂವರೆ ಲಕ್ಷ ಚೀಲ ದಾಟಿರುವುದರಿಂದ ಮಾರುಕಟ್ಟೆಯ ಶುಲ್ಕ ಸಂಗ್ರಹ ಗುರಿ ತಲುಪುವ ಭರವಸೆ ಮೂಡಿದೆ.

    ಅತಿವೃಷ್ಟಿಯಿಂದ ಮುಂಗಾರಿನ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು, ತುಸು ಗುಣಮಟ್ಟ ಕಳೆದುಕೊಂಡಿದೆ. ಈ ಬಾರಿ ಫೆಬ್ರವರಿ, ಮಾರ್ಚ್​ನಲ್ಲಿ ಆವಕ ಪ್ರತಿವಾರ ಅಂದಾಜು 2 ಲಕ್ಷ ಚೀಕ ದಾಟುವ ಸಂಭವವಿದೆ. ಪ್ರಸಕ್ತ ಸಾಲಿನ ಶುಲ್ಕ ಗುರಿ ತಲುಪಲಿದೆ.

    | ಆದಪ್ಪ, ಎಪಿಎಂಸಿ ಕಾರ್ಯದರ್ಶಿ ಬ್ಯಾಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts