More

    ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸುವ ತಾರ್

    ಬ್ಯಾಡಗಿ: ಜಿಂಕೆ, ಕಾಡು ಹಂದಿ, ಮೊಲ ಇತ್ಯಾದಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ರಕ್ಷಿಸಲು ಅರಣ್ಯ ಇಲಾಖೆ ಅಧಿಕಾರಿಯೊಬ್ಬರೂ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಪ್ರತಿಬಾರಿ ಮುಂಗಾರು ಬಿತ್ತನೆ ನಂತರ ಕದರಮಂಡಲಗಿ, ಮೋಟೆಬೆನ್ನೂರು, ಬೆಳಕೇರಿ, ಬಿಸಲಹಳ್ಳಿ, ಗುಂಡೇನಹಳ್ಳಿ, ಮಾಸಣಗಿ, ದುಮ್ಮಿಹಾಳ, ಘಾಳಪೂಜಿ ಗ್ರಾಮಗಳಲ್ಲಿ ಜಿಂಕೆಗಳ ವಿಪರೀತ ಹಾವಳಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಕಾಡುಪ್ರಾಣಿಗಳ ಕಾಟಕ್ಕೆ ಬೇಸತ್ತು ರೈತರು ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ರೈತರಿಂದ ಅರ್ಜಿ ಪಡೆದು ಅರಣ್ಯ ಇಲಾಖೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಅಲ್ಪ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿತ್ತು. ಆದರೆ, ಇದೀಗ ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಅವರ ಪ್ರಯತ್ನದಿಂದ ಕಡಿಮೆ ವೆಚ್ಚದಲ್ಲಿ ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ.

    ಏನಿದು ತಾರ್ ಸಿಂಪಡಣೆ? ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ದೇಶ-ವಿದೇಶಗಳಲ್ಲಿ ಹೊಸ ಪ್ರಯತ್ನ ನಡೆಯುತ್ತಿವೆ. ವಿದೇಶಗಳಲ್ಲಿ ಸೋಪಿನಂತಹ ರಾಸಾಯನಿಕ ದ್ರಾವಣ ಹೊಲದ ಸುತ್ತಲೂ ಹಾಕಲಾಗುತ್ತದೆ. ಇದರ ವಾಸನೆ ಹರಡುವುದರಿಂದ ಪ್ರಾಣಿಗಳು ಬೆಳೆಗಳತ್ತ ಸುಳಿಯುವುದಿಲ್ಲ. ಇದಕ್ಕಿಂತಲೂ ಭಿನ್ನವಾಗಿ ತಾರ್ ಎಂಬ ಪರಿಸರ ಸ್ನೇಹಿ ಔಷಧ ಪರಿಚಯಿಸಲಾಗಿದೆ. ಇದನ್ನು ರೈತರು ಹೊಲದ ಸುತ್ತ, ಬದು, ಚಿಕ್ಕ ಸಸಿಗಳ ಮೇಲೆ ಸಿಂಪಡಿಸಬೇಕು. ಇದರ ವಾಸನೆ ಪ್ರಾಣಿಗಳ ಮೂಗಿಗೆ ಬಡಿಯುತ್ತಿದ್ದಂತೆ ಓಡಲು ಶುರು ಮಾಡುತ್ತವೆ. ಈ ಔಷಧದಲ್ಲಿ ಇಂಗುವಿಕೆ ಗುಣವಿರುವ ಕಾರಣ ಸರಳವಾಗಿ ಎಲೆ, ಸಸಿಗಳ ಮೇಲೆ ಹೊಂದಿಕೊಳ್ಳಲಿದೆ. ಮಳೆ ಬಂದ ಮೇಲೆ ಕ್ರಮೇಣವಾಗಿ ವಾಸನೆ ಕಡಿಮೆಯಾಗಲಿದೆ. ಪ್ರಾಯೋಗಿಕವಾಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ತಾರ್ ಔಷಧ ಸಿಂಪಡಣೆ ಮಾಡಲಾಗುತ್ತಿದೆ.

    ಅರಣ್ಯಾಧಿಕಾರಿಗಳ ಆಸಕ್ತಿ: ತಾರ್ ಔಷಧ ಅರಣ್ಯ ಇಲಾಖೆಯಿಂದ ಪೂರೈಸುತ್ತಿಲ್ಲ. ಸರ್ಕಾರದಿಂದ ದಾಸ್ತಾನು ಕೂಡ ಮಾಡಿಲ್ಲ. ಆದರೆ, ಮಹೇಶ ಮರೆಣ್ಣನವರ ಅವರು ಸ್ವಯಂ ಆಸಕ್ತಿಯಿಂದ ಹೊಸ ದಾರಿ ಕಂಡುಕೊಂಡಿದ್ದಾರೆ. 500 ಎಂಎಲ್ ಔಷಧದ ಬಾಟಲ್​ಗೆ 770 ರೂ. ಬೆಲೆಯಿದ್ದು, ಸ್ವಂತ ಹಣದಲ್ಲೇ ತಾರ್ ಔಷಧ ತರಿಸಿ ರೈತರಿಗೆ ವಿತರಿಸಿದ್ದಾರೆ. ಅರಣ್ಯಾಧಿಕಾರಿ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಅವಕಾಶವಿದೆ. ಆದರೂ ಎಲ್ಲರೂ ಇದನ್ನು ಅಳವಡಿಸಿಕೊಳ್ಳುವುದು ದುಬಾರಿ ಎನಿಸಲಿದೆ. ಹೀಗಾಗಿ, ವೆಬ್​ಸೈಟ್, ನೆಟ್​ನಲ್ಲಿ ವಿದೇಶಿ ತಂತ್ರಜ್ಞಾನ ಅಧ್ಯಯನ ಮಾಡಿ, ಮಾಹಿತಿ ಪಡೆದು ತಾರ್ ಔಷಧ ಸಿಂಪಡಿಸಲು ತಾಲೂಕಿನಲ್ಲಿ ಹೊಸ ಪ್ರಯತ್ನ ನಡೆಸಲಾಗಿದೆ. ಎರಡು ಹೊಲದಲ್ಲಿ ಈಗಾಗಲೇ ತಾರ್ ಔಷಧ ಸಿಂಪಡಿಸಿದ್ದು ಯಶಸ್ಸು ಕಂಡಿದೆ.

    | ಮಹೇಶ ಮರೆಣ್ಣನವರ ವಲಯ ಅರಣ್ಯಾಧಿಕಾರಿ

    ಅರಣ್ಯ ಇಲಾಖೆ ಅಧಿಕಾರಿಗಳ ಹೊಸ ಪ್ರಯತ್ನ ಶ್ಲಾಘನೀಯ. ರಾಣೆಬೆನ್ನೂರು ತಾಲೂಕಿನ ಕೃಷ್ಣಮೃಗ ಅಭಿಯಾರಣ್ಯಕ್ಕೆ ಹೊಂದಿಕೊಂಡ ರೈತರಿಗೆ ಜಿಂಕೆಗಳ ಕಾಟ ವಿಪರೀತವಾಗಿದೆ. ವಲಯ ಅರಣ್ಯಾಧಿಕಾರಿಗಳು ಕೆಲ ರೈತರಿಗೆ ಉಚಿತವಾಗಿ ಔಷಧ ನೀಡಿದ್ದು, ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಕಾಡುಪ್ರಾಣಿಗಳಿಂದ ಹಾನಿಗೊಂಡ ರೈತರಿಗೆ ಪರಿಹಾರ ನೀಡುವ ಬದಲು, ಹೆಚ್ಚಿನ ಸಹಾಯಧನದಲ್ಲಿ ಸೋಲಾರ ತಂತಿ ಬೇಲಿ, ತಾರ್​ನಂತಹ ಔಷಧ ಉಚಿತವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

    | ಶಶಿಧರಸ್ವಾಮಿ ಛತ್ರದಮಠ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts