More

    ಸಹಕಾರ ಕ್ಷೇತ್ರಕ್ಕೂ ಅಂಟಿದ ರಾಜಕೀಯ ; ಗೊಂದಲದ ನಡುವೆ ಸಮಾಪ್ತಿಗೊಂಡ ಬಂಗಾರಪೇಟೆ ಟಿಎಪಿಸಿಎಂಎಸ್ ಚುನಾವಣೆ

    ಬಂಗಾರಪೇಟೆ: ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಿಎಪಿಸಿಎಂಎಸ್ ಚುನಾವಣೆ ರಾಜಕೀಯಕ್ಕೆ ಸಿಲುಕಿ ನ್ಯಾಯಾಲಯ ಮತ್ತು ಗೃಹ ಸಚಿವರ ಅಂಗಳದಿಂದ ಬಂದ ಸೂಚನೆಯಂತೆ ಸಮಾಪ್ತಿಕೊಳ್ಳುವ ಮೂಲಕ ಜನರಲ್ಲಿದ್ದ ಆತಂಕ, ಅನುಮಾನಕ್ಕೆ ತರೆ ಎಳೆಯಿತು.

    ಪಟ್ಟಣದ ಟಿಎಪಿಸಿಎಂಎಸ್‌ನ ಒಟ್ಟು 14 ಸ್ಥಾನಗಳಿಗೆ ಎ ಗುಂಪಿನ 5 ಮತ್ತು ಬಿ ಗುಂಪಿನ 9 ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆ ವೇಳೆ ಕಾಂಗ್ರೆಸ್ಸಿನ ಎರಡು ಬಣಗಳ ನಡುವೆ ನಡೆದ ಐ ಡ್ರಾಮಾ ಹಾಗೂ ಬಿಜೆಪಿ ತಂತ್ರಗಾರಿಕೆಯಿಂದ ಚುನಾವಣೆ ಸುಸೂತ್ರವಾಗಿ ನಡೆಸುವುದಕ್ಕೆ ಸಾಧ್ಯವಾಗದೆ ಕೆಲ ಗಂಟೆ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ದಯಾನಂದ್ ಪರದಾಡುವಂತಾಯಿತು.

    ಚುನಾವಣೆಯಲ್ಲಿ ತಮ್ಮ ಬಣದವರನ್ನು ಗೆಲ್ಲಿಸಿಕೊಳ್ಳುವುದಕ್ಕೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಿಜೆಪಿ ಬೆಂಬಲ ಪಡೆದರೆ, ಕೆಜಿಎಫ್ ಶಾಸಕಿ ರೂಪಕಲಾ ಮಾಜಿ ಶಾಸಕ ಪ್ರಸ್ತುತ ಜೆಡಿಎಸ್ ಜತೆ ಗುರುತಿಸಿಕೊಂಡಿರುವ ಎಂ.ನಾರಾಯಣಸ್ವಾಮಿಗೆ ರಾಜಕೀಯ ಆಶ್ರಯ ನೀಡಿದ್ದರಿಂದ ಸಹಕಾರ ಕ್ಷೇತ್ರಕ್ಕೆ ಸೇರಿದ ಟಿಎಪಿಸಿಎಂಎಸ್ ರಾಜಕೀಯ ಸುಳಿಗೆ ಸಿಕ್ಕಿ ನಜ್ಜುಗುಜ್ಜಾಗುವಂತಾಯಿತು.

    ಎ-ಗುಂಪಿನಿಂದ 14, ಬಿ-ಗುಂಪಿನಿಂದ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತಾದರೂ ಮತದಾರರ ಪಟ್ಟಿ ಪ್ರಕಟವಾಗುತ್ತಿದ್ದಂತೆ ಎರಡೂ ಬಣದಲ್ಲಿ ರಾಜಕೀಯ ಸಂಘರ್ಷಕ್ಕೆ ಎಡೆಯಾಯಿತು. ರೂಪಕಲಾ ಮತ್ತು ಎಂ.ನಾರಾಯಣಸ್ವಾಮಿ ಬಣದ ಇಬ್ಬರು ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡದಂತೆ ಎಸ್.ಎನ್.ನಾರಾಯಣಸ್ವಾಮಿ ಮತ್ತು ಸಂಸದ ಎಸ್.ಮುನಿಸ್ವಾಮಿ ಕಡೆಯವರು ತಡೆಯಾಜ್ಞೆ ಕೋರಿದ್ದರು. ಇದರಿಂದ ಬಹುಮತಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರೂಪಕಲಾ ಕಡೆಯವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ 2 ಹೆಚ್ಚುವರಿ ಮತ ತಮ್ಮ ಬಣಕ್ಕೆ ಸಿಗುವಂತೆ ನೋಡಿಕೊಂಡಿದ್ದರಾದರೂ ನ್ಯಾಯಾಧೀಶರು ಚುನಾವಣಾಧಿಕಾರಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಬೇಕೆಂದು ಸೂಚಿಸಿದ್ದರಿಂದ ಎರಡು ಬಣದಲ್ಲಿ ಮೇಲುಗೈ ಸಾಧಿಸಲು ತೀವ್ರ ಪೈಪೋಟಿ ಕಂಡು ಬಂತು.

    2 ಹೆಚ್ಚುವರಿ ಮತದಾರರಿಗೆ ಅವಕಾಶ ನೀಡಲ್ಲವೆಂದು ಆದೇಶಿಸಿದ್ದ ತಹಸೀಲ್ದಾರ್ ದಯಾನಂದ್ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಶಾಸಕಿ ರೂಪಕಲಾ ಬೆಂಬಲಿಗರಿಂದ ಟೀಕೆಗೆ ಗುರಿಯಾದರು. ಕಡೆಗೆ ರೂಪಾ ಸಹಕಾರ ಇಲಾಖೆಯ ಆಯುಕ್ತರನ್ನು ಸಂಪರ್ಕಿಸಿ ಹೆಚ್ಚುವರಿ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದರಾದರೂ ತಾಂತ್ರಿಕ ಕಾರಣವೊಡ್ಡಿ ಒಬ್ಬರಿಗೆ ಮಾತ್ರ ಮತದಾನಕ್ಕೆ ತಹಸೀಲ್ದಾರ್ ಅವಕಾಶ ನೀಡಿದರು.

    ಒಂದು ಹಂತದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಮುಖೇನ ಮಾತನಾಡಿ ವಿವಾದ ಮತ್ತು ಗೊಂದಲಗಳ ಕುರಿತು ದೂರು ನೀಡಿದ ಪ್ರಸಂಗ ನಡೆಯಿತು. ತಹಸೀಲ್ದಾರ್ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನಾರಾಯಣರೆಡ್ಡಿ ಎಂಬುವರಿಗೆ ಮತ ಚಲಾಯಿಸಲು ಅವಕಾಶ ನೀಡಿದಾಗ ಕಾಂಗ್ರೆಸ್ಸಿನ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಚದುರಿಸಿದರು.

    ಇದು ಸಹಕಾರ ಚುನಾವಣೆ ಆಗಿರುವುದರಿಂದ ಪಕ್ಷ ರಾಜಕಾರಣ ಬೇಕಿಲ್ಲ ಎಂದು ಬಿಜೆಪಿ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಣ ಪ್ರತಿಪಾದಿಸಿದರೆ ರೂಪಕಲಾ ಮತ್ತವರ ಬಣದವರು ಮ್ಯಾಚ್ ಫಿಕ್ಸಿಂಗ್ ಎಂದು ಲೇವಡಿ ಮಾಡಿದ್ದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಯಿತು.

    ಅವಕಾಶವಾದಿ ರಾಜಕಾರಣ : ಮತಗಟ್ಟೆಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ, ಜಿಪಂ ಸದಸ್ಯ ಮಹೇಶ್ ಇನ್ನಿತರರು ಒಟ್ಟಿಗೆ ಪ್ರವೇಶಿಸಿದಾಗ ವಿರೋಧಿಗಳು ಘೋಷಣೆ ಕೂಗಿದರು. ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿಗೆ ಒಂದೇ ಟಿಎಪಿಸಿಎಂಎಸ್ ಇರುವುದೇ ಈ ಎಲ್ಲ ಗೊಂದಲಕ್ಕೆ ಕಾರಣ ಎನ್ನಲಾಗಿದೆ. ಕಾಂಗ್ರೆಸ್‌ನ ಎರಡು ಬಣ ಜತೆಗೆ ಬಿಜೆಪಿಯ ಅವಕಾಶವಾದಿ ರಾಜಕಾರಣ ಮುಂದಿನ ಚುನಾವಣೆಗಳ ಹೊತ್ತಿಗೆ ಯಾವ ಹಂತ ತಲುಪುತ್ತದೋ ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಜಿಜ್ಞಾಸೆಯನ್ನುಂಟು ಮಾಡಿದೆ.

    ಎಲ್ಲವೂ ಸರಿಯಿಲ್ಲ: ಕಾಂಗ್ರೆಸ್ಸಿನ ಎರಡು ಬಣ ಹಾಗೂ ಬಿಜೆಪಿ ರಾಜಕೀಯದಾಟದ ನಡುವೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಎತ್ತ ಜಿಗಿಯುತ್ತಾರೆಂಬ ಪ್ರಶ್ನೆಯೂ ಉದ್ಭವಿಸಿದ್ದು, ಒಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಟಿಎಪಿಸಿಎಂಎಸ್ ಚುನಾವಣೆ ಒಂದು ತಜಾ ನಿದರ್ಶನ ಎಂದರೆ ತಪ್ಪಾಗಲಾರದು.

    ಕಾಂಗ್ರೆಸ್, ಬಿಜೆಪಿ ಮೈತ್ರಿ : ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಂ.ನಾರಾಯಣಸ್ವಾಮಿ ಬೆಂಬಲಿತ ಅಭ್ಯರ್ಥಿಗಳ ಮೇಲೆ ಬಿ ಕೆಟಗರಿಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಎಂ.ಚಂದ್ರಪ್ಪ, ಭವ್ಯಾ.ಕೆ.ಎ, ಕೆ.ಎಂ.ಮಂಜುನಾಥ್, ಜಿ.ರಾಜಾರೆಡ್ಡಿ, ಲಕ್ಷ್ಮೀ ಗೆಲುವು ಸಾಧಿಸಿದರೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಂಬಲಿತ ಅಭ್ಯರ್ಥಿಗಳಾದ ರವಿ, ರಾಮೇಗೌಡ, ಎಚ್.ವಿ.ವೆಂಕಟಾಚಲಪತಿ ಗೆಲುವು ಸಾಧಿಸಿದ್ದಾರೆ. ಮಾಜಿ ಶಾಸಕ ಎಂ.ನಾರಾಯಣಸ್ವಾಮಿಯ ಒಟ್ಟು 9 ಅಭ್ಯರ್ಥಿಗಳ ಪೈಕಿ ಅವರ ಮಗ ಶಶಿಕಾಂತ್ ಮಾತ್ರ ಗೆಲುವು ಸಾಧಿಸಿದ್ದಾರೆ. ಎ ಕೆಟಗರಿಯಲ್ಲಿ ಒಟ್ಟು 5 ಸ್ಥಾನಗಳ ಪೈಕಿ 4 ಸ್ಥಾನ ಎಂ.ನಾರಾಯಣಸ್ವಾಮಿ ಬೆಂಬಲಿಗರು ಪಡೆದರೆ, ಬಿ ಕೆಟಗರಿಯಲ್ಲಿ 9 ಸ್ಥಾನಗಳ ಪೈಕಿ 1 ಮಾತ್ರ ಗೆಲುವು ಸಾಧಿಸಿದರು. ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಬಿಜೆಪಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದ ಜಂಟಿ ಅಭ್ಯರ್ಥಿಗಳು ಎ ಕೆಟಗರಿಯಲ್ಲಿ 1 ಸ್ಥಾನ ಪಡೆದರೆ, ಬಿ ಕೆಟಗರಿಯಲ್ಲಿ 8 ಸ್ಥಾನ ವಶಪಡಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts