More

    ಕೋಚಿಮುಲ್ ಅಭಿವೃದ್ಧಿಗೆ ಶ್ರಮಿಸೋಣ : ಸಂಸದ ಎಸ್.ಮುನಿಸ್ವಾಮಿ ಕರೆ 

    ಬಂಗಾರಪೇಟೆ : ಮಧ್ಯವರ್ತಿಗಳ ಹಾವಳಿ ಇಲ್ಲದೆ ವ್ಯವಸ್ಥಿತವಾಗಿ ಡೇರಿಗಳು ಕಾರ್ಯ ನಿರ್ವಹಿಸುತ್ತಿರುವಂತೆ ಹೋಬಳಿ ಕೇಂದ್ರಗಳಲ್ಲಿ ರೈತ ಉತ್ಪಾದಕ ಸಂಘಗಳನ್ನು(ಎಫ್‌ಪಿಒ) ತೆರೆದು ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೀಟನಾಶಕ, ಗೊಬ್ಬರ, ಯಂತ್ರೋಪಕರಣಗಳನ್ನು ಪೂರೈಕೆ ಮಾಡಬೇಕಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

    ತಾಲೂಕಿನ ಹುಲಿಬೆಲೆ ಗ್ರಾಮದ ಡೇರಿ ಆವರಣದಲ್ಲಿ ಹಾಲು ಶೀತಲೀಕರಣ ಘಟಕ(ಬಿಎಂಸಿ), ಸ್ವಯಂಚಾಲಿತ ಹಾಲು ಕರೆಯುವ ಘಟಕ ಹಾಗೂ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ನಿತ್ಯ ಉತ್ಪಾದನೆಯಾಗುತ್ತಿದ್ದ ಹಾಲು 11 ಲಕ್ಷ ಲೀಟರ್‌ನಿಂದ 9 ಲಕ್ಷ ಲೀಟರ್‌ಗೆ ಕುಸಿದಿದೆ. ಹಾಗಾಗಿ ಈ ಪ್ರಮಾಣ ಮುಂದಿನ ದಿನಗಳಲ್ಲಿ ದುಪ್ಪಟ್ಟು ಆಗಬೇಕಿದೆ. ಹಾಲು ಒಕ್ಕೂಟದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡೋಣ ಎಂದರು.

    ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರಿನಿಂದ ಸುಮಾರು 120 ಕೆರೆ ತುಂಬಿದ್ದು, 2ನೇ ಹಂತದಲ್ಲಿ 270 ಕೆರೆ ತುಂಬಿಸಲು 455 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ತುಂಬಿ ವ್ಯವಸಾಯಕ್ಕೆ ಹಾಗೂ ಹೈನುಗಾರಿಕೆಗೆ ಸಹಾಯವಾಗಲಿದೆ ಎಂದರು.

    ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕೋಲಾರ ಒಕ್ಕೂಟದಿಂದ ಚಿಕ್ಕಬಳ್ಳಾಪುರ ವಿಭಜನೆಯಾಗುತ್ತಿದ್ದು, ಕೋಲಾರದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿದೆ. ಆದರೆ ಕೆಲವು ಕಾರಣಾಂತರಗಳಿಂದ ಯೋಜನೆ ತಡೆಯಾಗಿದ್ದು, ಕಾಮಗಾರಿ ಆರಂಭಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದರು.

    ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ತಾಪಂ ಅಧ್ಯಕ್ಷ ಮಹದೇವ್, ಸದಸ್ಯ ಪಿ.ನಾರಾಯಣಸ್ವಾಮಿ, ಟಿಎಪಿಎಂಸಿ ಅಧ್ಯಕ್ಷ ರಾಜಾರೆಡ್ಡಿ, ನಿರ್ದೇಶಕ ವೆಂಕಟಾಚಲಪತಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಾರಾಯಣಗೌಡ, ಪಂಚಾಯಿತಿ ಅಧ್ಯಕ್ಷ ಆರ್.ವಿ.ಸುರೇಶ್, ಉಪಾಧ್ಯಕ್ಷ ಶೋಭಾರಾಣಿ, ಡೇರಿ ಅಧ್ಯಕ್ಷ ಎಚ್.ಕೆ ನಾರಾಯಣಸ್ವಾಮಿ ಇದ್ದರು.

    ದರ ನಿಗದಿ ಅಧಿಕಾರ ಬಿಟ್ಟುಕೊಡಿ: ಗುಣಮಟ್ಟದ ಹಾಲು ಪೂರೈಕೆ ಮಾಡುವ ಉದ್ದೇಶದಿಂದ ಬಿಎಂಸಿಗಳನ್ನು ತೆರೆಯಲಾಗುತ್ತಿದೆ. ರೈತರಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ವಾಡಿದ್ದ 1 ರೂ. ಪ್ರೋತ್ಸಾಹ ಧನವನ್ನು ಈಗಿನ ರಾಜ್ಯ ಸರ್ಕಾರ ತಡೆದಿದೆ. ಹಾಲು ಮಾರಾಟ ದರ ನಿಗದಿ ಅಧಿಕಾರ ಸರ್ಕಾರದ ಹತೋಟಿಯಲ್ಲಿದ್ದು, ಅದನ್ನು ಒಕ್ಕೂಟಕ್ಕೆ ಬಿಟ್ಟುಕೊಡುವಂತೆ ಬಜೆಟ್ ಅಧಿವೇಶನದಲ್ಲಿ ಎಲ್ಲ ಶಾಸಕರು ಒತ್ತಾಯಿಸುತ್ತೇವೆ ಎಂದು ಕೆ.ವೈ. ನಂಜೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts