More

    ಬರಿದಾಗುತ್ತಿದೆ ಕೆರೆ ಕಟ್ಟೆಗಳ ಒಡಲು; ಬೇಸಿಗೆ ಮುನ್ನವೇ ಕುಡಿವ ನೀರಿಗೂ ಬರ

    ಶಿವಾನಂದ ತಗಡೂರು:
    ಮಳೆ ಕೈಕೊಟ್ಟಿದ್ದರಿಂದ ಈ ವರ್ಷ ಕೆರೆ ಕಟ್ಟೆಗಳಲ್ಲಿ ನೀರಿಗೂ ಬರ ಬಂದಿದೆ. ಬೇಸಿಗೆಗೆ ಮುನ್ನವೇ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುುವ ಆತಂಕ ಕಾಡುತ್ತಿದೆ. ಮೂರ‌್ನಾಲ್ಕು ವರ್ಷಗಳಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬರ ಸಮಸ್ಯೆ ಕಾಡಿರಲಿಲ್ಲ. ಕಳೆದ ವರ್ಷವೂ ಮಳೆ ಉತ್ತಮವಾಗಿದ್ದ ಕಾರಣ ಶೇ.90ಕ್ಕೂ ಹೆಚ್ಚಿನ ಪ್ರಮಾಣದ ಕೆರೆ ಕಟ್ಟೆಗಳು ತುಂಬಿದ್ದವು. ಹಾಗಾಗಿ ರಾಜ್ಯದಲ್ಲಿಯೂ ಅಂತರ್ ಜಲವೂ ಸಮೃದ್ಧಿಯಾಗಿತ್ತು.
    ಈ ವರ್ಷ ಪರಿಸ್ಥಿತಿ ಎಲ್ಲವೂ ತದ್ವಿರುದ್ದವಾಗಿದೆ. ಶೇ.35 ರಷ್ಟು ಕೆರೆಗಳಲ್ಲಿ ಕಾಲುಭಾಗವೂ ನೀರಿಲ್ಲ. ಶೇ.40ಕ್ಕೂ ಹೆಚ್ಚಿನ ಕೆರೆ ಕಟ್ಟೆಗಳಿಗೆ ಸರಾಸರಿ ಅರ್ಧಕ್ಕಿಂತ ಕಡಿಮೆ ನೀರಿದೆ. ಮಲೆನಾಡು ಭಾಗ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಮುಕ್ಕಾಲು ಕೆರೆಯಷ್ಟು ನೀರಿನ ಸಂಗ್ರಹವಿದೆ. ಕೋಡಿ ಬಿದ್ದಿರುವ ಕೆರೆ ಕಟ್ಟೆಗಳ ಸಂಖ್ಯೆ ಶೇ.3ಕ್ಕಿಂತ ಕಡಿಮೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ಅಂದಾಜಿಸಿವೆ.

    9796 ಯೋಜನೆಗಳು
    40 ಹೆಕ್ಟೇರ್ ಮೇಲ್ಪಟ್ಟು 2000 ಹೆಕ್ಟೇರ್ ಒಳಪಟ್ಟ ಅಚ್ಚುಕಟ್ಟು ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿವೆ. ರಾಜ್ಯದಲ್ಲಿ ಕೆರೆ, ಬಂದಾರ, ಬ್ಯಾರೇಜ್‌ಗಳು ಸೇರಿದಂತೆ 9796 ಯೋಜನೆಗಳು ಸಣ್ಣ ನೀರಾವರಿ ಇಲಾಖೆಗೆ ಬರಲಿವೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಕಾರಣ ಕೆರೆಗಳಲ್ಲಿ ಉಳಿದ ನೀರು ಈ ಬಾರಿ ಕೆರೆ ಅಂಗಳ ಹೆಚ್ಚು ದಾವಾಗದಂತೆ ತಡೆದಿದೆ. ಹಾಗಾಗಿ ಕೆರೆ ಕಟ್ಟೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ ಅಲ್ಪ ಸ್ವಲ್ಪ ನೀರು ಸಂಗ್ರಹವಾಗಿದೆ.

    ಜಿಪಂನಲ್ಲಿ ಅತಿ ಹೆಚ್ಚು ಕೆರೆ
    ಸಣ್ಣ ನೀರಾವರಿ ಇಲಾಖೆಯಿಂದ ಹೊರತುಪಡಿಸಿದ ಅಂದರೆ 40 ಹೆಕ್ಟೇರ್ ಅಚ್ಚುಕಟ್ಟುಗಿಂತ ಕಡಿಮೆ ಅಚ್ಚುಕಟ್ಟು ಹೊಂದಿದ ಕೆರೆಗಳನ್ನು ಜಿಲ್ಲಾ ಪಂಚಾಯಿತಿ ನಿಭಾಯಿಸುತ್ತಿದೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಕೆರೆಗಳು ಜಿಪಂ ವ್ಯಾಪ್ತಿಯಲ್ಲಿವೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆಯಲ್ಲಿ ಹೂಳು ತೆಗೆದಿರುವ ಕಾರಣ ಒಂದಷ್ಟು ನೀರು ಸಂಗ್ರಹ ಉತ್ತಮಗೊಂಡಿರುವ ಕೆರೆಯಲ್ಲಿ ಇನ್ನೂ ನೀರಿನ ಮೂಲ ಬತ್ತಿಲ್ಲ. ಆದರೆ ಬೇಸಿಗೆಯ ತನಕ ಈ ನೀರಿನ ಸಂಗ್ರಹ ಇರುತ್ತದೆ ಎನ್ನುವ ಯಾವ ಖಾತ್ರಿಯೂ ರೈತರಿಗಿಲ್ಲ.

    ಜೀವಸಂಕುಲಕ್ಕೆ ಆತಂಕ
    ಕೆರೆ ಕಟ್ಟೆಗಳಲ್ಲಿ ನೀರಿದ್ದರೆ, ಜಾನುವಾರು ಅಷ್ಟೆ ಅಲ್ಲ, ಪ್ರಾಣಿ ಜೀವ ಸಂಕುಲಕ್ಕೂ ಸಮಸ್ಯೆಗಳೇನಿಲ್ಲ. ಈಗಲೇ ಬೇಸಿಗೆಯ ಬೇಗೆ ಅನುಭವಿಸುತ್ತಿರುವ ರೈತರಿಗೆ ಮುಂದೆ ಜಾನುವಾರುಗಳನ್ನು ಹೇಗೆ ನಿಭಾಯಿಸುವುದು ಎನ್ನುವುದು ದೊಡ್ಡ ಸವಾಲಾಗಿದೆ.

    ಬೋರ್‌ವೆಲ್‌ಗಳ ಒತ್ತಡ
    ಬತ್ತುತ್ತಿರುವ ಅಂತರ್ ಜಲ

    ಮಳೆ ಇಲ್ಲದ ಕಾರಣ, ರೈತರು ಬೆಳೆ ಉಳಿಸಿಕೊಳ್ಳಲು ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್ ಅಳವಡಿಸಿ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರಿದ್ದರೆ ಮಾತ್ರ ಬೋರ್‌ವೆಲ್‌ಗಳಲ್ಲಿ ಜೀವ ಜಲ ಬತ್ತುವುದಿಲ್ಲ. ಆದರೆ, ಈ ಬಾರಿ ಸತತವಾಗಿ ನೀರು ಹಾಯಿಸುತ್ತಿರುವ ಕಾರಣ ಕೆರೆ ಕಟ್ಟೆಗಳ ನೀರು ಬೋರ್‌ವೆಲ್‌ಗಳಿಗೆ ಬಸಿದು ಹೋಗುತ್ತಿದೆ. ಅವುಗಳು ಬರಿದಾದರೆ, ಅಂತರ್ ಜಲವೂ ಬತ್ತಿ ಹೋಗಲಿದ್ದು, ಬೋರ್‌ವೆಲ್‌ಗಳು ಬಂದ್ ಆಗಬೇಕಾದ ಭೀಕರ ಪರಿಸ್ಥಿತಿ ಶೀಘ್ರದಲ್ಲಿಯೇ ಬರಲಿದೆ ಎಂದು ರೈತರುಗಳು ಆತಂಕಿಸುತ್ತಿದ್ದಾರೆ.

    ಕುಡಿವ ನೀರಿಗೆ ಸಮಸ್ಯೆಯಾಗದಂತೆ
    ಎಚ್ಚರಿಕೆ ವಹಿಸಲು ಸರ್ಕಾರದ ಸೂಚನೆ

    ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿರುವ (ಕೃಷ್ಣ ಮತ್ತು ಕಾವೇರಿ ಬೇಸಿನ್) ಜಲಾಶಯಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ಈಗಿನಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ನೀರನ್ನು ಹಿತ ಮಿತವಾಗಿ
    ಬಳಸುವಂತೆಯೂ ತಿಳಿಸಿದೆ. ಕಾವೇರಿ ಕಣಿವೆಯ ಪ್ರಮುಖ 4 ಜಲಾಶಗಳಲ್ಲಿಯೂ ನೀರು ಸಂಗ್ರಹ ಈ ವರ್ಷ ಅರ್ಧದಷ್ಟು ಅಂದರೆ 59 ಟಿಎಂಸಿಗೆ ಕುಸಿದಿದೆ. ಇದರಲ್ಲಿ ನೀರಾವರಿ ಮತ್ತು ಕುಡಿಯುವ ನೀರು ನಿಭಾಯಿಸಬೇಕಿದೆ.

    *ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣಕ್ಕೆ ಕೆರೆಗಳಿಗೆ ನೀರು ಬರಲಿಲ್ಲ. ಶೇ.90 ಭಾಗ ಕೆರೆಗಳು ನೀರಿಲ್ಲದೆ ಬರದ ಬೇಗೆಯಲ್ಲಿವೆ. ದಕ್ಷಿಣ ವಿಭಾಗದ 990 ದೊಡ್ಡ ಕೆರೆಗಳಲ್ಲಿ ಶೇ.10ರಷ್ಟು ಕೆರೆಗಳಲ್ಲಿ ಮಾತ್ರ ಸ್ವಲ್ಪ ನೀರಿದೆ.
    ರಾಘವನ್, ಮುಖ್ಯ ಇಂಜಿನೀಯರ್(ದಕ್ಷಿಣ), ಸಣ್ಣ ನೀರಾವರಿ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts