More

    ಬಾರದ ಹಣ- ಪ್ರಯಾಣಿಕರು ಹೈರಾಣ

    ವಿಜಯಪುರ: ಕೇಂದ್ರ ಸರ್ಕಾರದ ಅನುದಾನ ವಿಳಂಬ ನೀತಿಯಿಂದಾಗಿ ಜಿಲ್ಲೆಯ ಎಂಟು ಪ್ರಮುಖ ರಸ್ತೆಗಳ ಕಾಮಗಾರಿ ನನೆಗುದಿಗೆ ಬಿದ್ದಿವೆ !
    ಕೇಂದ್ರ ರಸ್ತೆ ಯೋಜನೆಯಡಿ ಅಂದಾಜು ಪತ್ರಿಕೆ ಸಲ್ಲಿಸಿದರೂ ಸಕಾಲಕ್ಕೆ ಅನುದಾನ ಬಾರದ ಕಾರಣ ರಸ್ತೆ ಕಾಮಗಾರಿಗಳು ಗುತ್ತಿಗೆ ಹಂತದಲ್ಲೇ ಉಳಿದುಕೊಂಡಿವೆ. ಲೋಕೋಪಯೋಗಿ ಇಲಾಖೆ ಹೆದ್ದಾರಿ ವಿಭಾಗದಿಂದ 103 ಕೋಟಿ ರೂ. ವೆಚ್ಚದಲ್ಲಿ 9 ಕಾಮಗಾರಿ ಕೈಗೆತ್ತಿಕೊಳ್ಳಲು ಅಂದಾಜು ಪತ್ರಿಕೆ ಸಲ್ಲಿಸಿ ಮೂರು ವರ್ಷಗಳಾಗಿವೆ. ಇದರಲ್ಲಿ ತಾಳಿಕೋಟಿ – ಹೆಡಗಿನಾಳ ಹತ್ತಿರದ ಸೇತುವೆ ನಿರ್ಮಾಣ ಕಾಮಗಾರಿ ಕೆಆರ್‌ಡಿಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಎಂಟು ರಸ್ತೆಗಳ ಸುಧಾರಣೆಗೆ ಇಲಾಖೆ ಸಕಲ ಸಿದ್ಧತೆಯೇನೋ ನಡೆಸಿದೆ. ಆದರೆ, ಅನುದಾನ ಇಲ್ಲದೇ ಕೈಚೆಲ್ಲಿ ಕುಳಿತಿದೆ.

    ಕಾಮಗಾರಿ ವಿವರ

    ಜಂಬಗಿ- ಅಥರ್ಗಾ ರಸ್ತೆ ಸುಧಾರಣೆ ರೂ. 5 ಲಕ್ಷ, ಚಡಚಣ ಹಾವಿನಾಳ ಹತ್ತಳ್ಳಿ ಲೋಣಿ ಬಿಕೆ ಕಿಮೀ 23 ರಿಂದ 33 ರವರೆಗೆ ರಸ್ತೆ ಸುಧಾರಣೆಗೆ ರೂ. 10 ಲಕ್ಷ, ಕುಮತಗಿ ಉಕ್ಕಲಿ ರಸ್ತೆ ಸುಧಾರಣೆಗೆ ರೂ. 3 ಲಕ್ಷ, ಇವಣಗಿ ನ ರಸಲಗಿ ರಸ್ತೆ ಸುಧಾರಣೆಗೆ 5 ಲಕ್ಷ ರೂ., ಇವಣಗಿ ನರಸಲಗಿ ವಾಯಾ ಸೀಮಹಳ್ಳಿ ರಸ್ತೆ ಸುಧಾರಣೆಗೆ ರೂ. 5 ಲಕ್ಷ, ಕೋರಳ್ಳಿ, ಬಳಗಾನೂರ, ಸಂಗೋಗಿ, ಹಿರೇಮಸಳಿ, ತಾಂಬಾ, ಅಥರ್ಗಾ ಮುಖ್ಯ ಕಾಲುವೆಯ ರಾಷ್ಟ್ರೀಯ ಹೆದ್ದಾರಿ -13 ರ ಕೂಡು ರಸ್ತೆ ಕಾಮಗಾರಿಗೆ ರೂ. 15 ಲಕ್ಷ, ಜಿಲ್ಲಾ ಮುಖ್ಯ ರಸ್ತೆ ಉಕ್ಕಲಿ, ದಿಂಡವಾರ, ಸಾಸನೂರ ಕಿಮೀ 23 ರಿಂದ 67.20 ರವರೆಗೆ ರೂ. 25 ಲಕ್ಷ ಹಾಗೂ ಜಿಲ್ಲಾ ಮುಖ್ಯ ರಸ್ತೆ ವಿಜಯಪುರ ಉಕ್ಕಲಿ ರಸ್ತೆ ಕಿಮೀ 0 ದಿಂದ 23 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಈಗಾಗಲೇ ಅಂದಾಜು ಪಟ್ಟಿ ಸಲ್ಲಿಸಲಾಗಿದೆ.

    ಬಾರದ ಅನುದಾನ

    ಸದರಿ ರಸ್ತೆ ಸುಧಾರಣೆ ಕಾಮಗಾರಿಗೆ 2017ರಲ್ಲೇ ಕ್ರಿಯಾ ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ವರ್ಷವಾದರೂ ಸರ್ಕಾರ ಅನುಮೋದನೆ ನೀಡಿಲ್ಲ. ಪೂರ್ಣಗೊಂಡ ರಸ್ತೆ ಕಾಮಗಾರಿಗಳಿಗೆ ಇನ್ನೂ ಅನುದಾನ ನೀಡಿಲ್ಲ. ಮೊದಲು ಅವುಗಳಿಗೆ ಹಣ ನೀಡಿದ ನಂತರವೇ ಈ ರಸ್ತೆ ಸುಧಾರಣೆಗೆ ಅನುದಾನ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮೊದಲ ಹಾಗೂ ದ್ವಿತೀಯ ಹಂತದ ಕಾಮಗಾರಿಗಳಿಗೆ ಅನುದಾನ ಇಲ್ಲದ ಮೇಲೆ ತೃತೀಯ ಹಂತದ ಯೋಜನೆಗೆ ಹಸಿರುವ ನಿಶಾನೆ ಸಿಗುವುದು ಯಾವಾಗ? ಎಂಬ ಆತಂಕ ಕಾಡುತ್ತಿದೆ.

    ರಸ್ತೆಗಳ ಸ್ಥಿತಿ ಅಯೋಮಯ

    ಸದರಿ ಎಂಟು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೋರಳ್ಳಿ ಬಳಗಾನೂರ, ಹಿರೇಮಸಳಿ ತಾಂಬಾ ಅಥರ್ಗಾ ಮುಖ್ಯ ಕಾಲುವೆ ರಸ್ತೆ ಸಂಪೂರ್ಣ ಹಾಳಾಗಿದೆ. ಸುಮಾರು ಹತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಗುಂಡಿಗಳಿಂದ ಆವೃತ್ತವಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದಿದ್ದು ತಾತ್ಕಾಲಿಕವಾಗಿ ತೇಪೆ ಪಡೆಯಲಾಗಿದೆ. ಇನ್ನುಳಿದ ಏಳು ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
    ಹೀಗಾಗಿ ಸಂಸದರು ಹಾಗೂ ಆಡಳಿತ ಪಕ್ಷದ ಜನಪ್ರತಿನಿಧಿಗಳು ಶೀಘ್ರ ಅನುದಾನ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.

    ಈ ಹಿಂದಿನ ಕಾಮಗಾರಿಗಳಿಗೆ ಹಣ ನೀಡುವವರೆಗೆ ಹೊಸ ಯೋಜನೆಗೆ ಮಂಜೂರು ಕೊಡಬಾರದೆಂದು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ. ವರ್ಷಕ್ಕೆ 500 ಕೋಟಿ ರೂ. ಅನುದಾನ ಕೇಂದ್ರದಿಂದ ಬರಬೇಕು. ಆದರೆ, ರಾಜ್ಯಾದ್ಯಂತ ಈಗಾಗಲೇ 3-4 ಸಾವಿರ ಕೋಟಿ ರೂ.ವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ವರ್ಷದಿಂದ ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ಲ. ಮೊದಲು ಹಿಂದಿನ ಕಾಮಗಾರಿಗಳಿಗೆ ಅನುದಾನ ನೀಡಿದ ಬಳಿಕವೇ ಮುಂದಿನ ಕಾಮಗಾರಿಗೆ ಮಂಜೂರಾತಿ ನೀಡಲು ತೀರ್ಮಾನಿಸಲಾಗಿದೆ.
    ಅರುಣಕುಮಾರ ಪಾಟೀಲ, ಇಇ, ಲೋಕೋಪಯೋಗಿ ಇಲಾಖೆ ಹೆದ್ದಾರಿ ವಿಭಾಗ ವಿಜಯಪುರ

    ತಾಂಬಾ ಮತ್ತು ಹಿರೇಮಸಳಿ ನಡುವಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡಲಾಗಿದ್ದು ಅದು ಸಹ ಕಿತ್ತುಕೊಳ್ಳುತ್ತಿದೆ. ಆದಷ್ಟು ಬೇಗ ಟೆಂಡರ್ ಕರೆದು ಇಡೀ ರಸ್ತೆ ಡಾಂಬರೀಕರಣ ಮಾಡಬೇಕು.
    ಶಿವಾನಂದ ಕ್ಷತ್ರಿ, ಹಿರೇಮಸಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts