More

    ತಾಲೂಕು ಕಚೇರಿಯಲ್ಲಿ ಇಲ್ಲ ಶೇ.50 ಸಿಬ್ಬಂದಿ; ಸಾರ್ವಜನಿಕ ಸೇವೆ ವಿಳಂಬ

    ಕೂಡ್ಲಿಗಿ: ಪಟ್ಟಣದ ತಾಲೂಕು ಕಚೇರಿಯಲ್ಲಿ ಶೇ.50 ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿವೆ. ಜಾತಿ-ಆದಾಯ ಪ್ರಮಾಣ ಪತ್ರ, ಪಹಣಿ, ಸಾಗುವಳಿ ಪತ್ರ, ಮ್ಯೂಟೇಷನ್ ಸೇರಿ ವಿವಿಧ ದಾಖಲೆ ಪಡೆಯಲು ಜನರು ನಿತ್ಯ ಅಲೆದಾಡುವಂತಾಗಿದೆ.

    ತಹಸಿಲ್ ಕಚೇರಿಯಲ್ಲಿ ಮಂಜೂರಾದ 80 ಹುದ್ದೆಗಳ ಪೈಕಿ ಕೇವಲ 40 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿ ಗ್ರೂಪ್ 8 ಹುದ್ದೆಗಳಲ್ಲಿ ಕೇವಲ ಇಬ್ಬರು, ಎಸ್‌ಡಿಎ 11ರ ಪೈಕಿ 7 ಜನ ಕೆಲಸ ಮಾಡುತ್ತಿದ್ದಾರೆ. ಗ್ರಾಮಾಡಳಿತ ಅಧಿಕಾರಿ 39 ಹುದ್ದೆಗಳ ಪೈಕಿ 34 ಭರ್ತಿಯಾಗಿದ್ದು, ಐದು ಖಾಲಿ ಉಳಿದಿವೆ.

    ಮಂಜೂರಾದ ಹುದ್ದೆಗಳಲ್ಲಿ ಅರ್ಧಕ್ಕರ್ಧ ಖಾಲಿ ಇರುವ ಕಾರಣ ಈಗ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಪ್ರತಿಯೊಬ್ಬರೂ ಮೂರು ಅಥವಾ ನಾಲ್ಕು ಹೆಚ್ಚುವರಿ ವಿಭಾಗಗಳ ಕಾರ್ಯನಿರ್ವಹಿಸಬೇಕಿದೆ. ದೂರದ ಗ್ರಾಮೀಣ ಭಾಗದಿಂದ ಬರುವ ಜನರು ನಿತ್ಯ ಪರದಾಡುವಂತಾಗಿದ್ದು, ಸಮಯದ ಜತೆ ಹಣವೂ ವ್ಯರ್ಥವಾಗುತ್ತಿದೆ. ಒಂದು ದಾಖಲೆ ಪಡೆಯಲು ಹತ್ತಾರು ಸಲ ಸುತ್ತಾಡಿದರೂ ಕೈ ಸೇರುತ್ತಿಲ್ಲ.

    ಸ್ಥಳಾಂತರವಾಗದ ಇಲಾಖೆಗಳು

    ಸಾರ್ವಜನಿಕರ ಕಾರ್ಯಗಳು ಸುಗಮ, ಜನರ ಅಲೆದಾಟ ತಪ್ಪಿಸಲು ತಾಲೂಕು ಆಡಳಿತ ಸೌಧದಲ್ಲಿ ಕೆಲ ಪ್ರಮುಖ ಇಲಾಖೆಗಳು ಕಾರ್ಯನಿರ್ವವಹಿಸಲು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಆಡಳಿತ ಸೌಧ ಉದ್ಘಾಟನೆಯಾಗಿ ವರ್ಷಗಳೇ ಕಳೆದರೂ ಉಪ ನೋಂದಣಿ ಕಚೇರಿ, ಉಪ ಖಜಾನೆ, ಅಬಕಾರಿ ಇಲಾಖೆ ಅಧಿಕಾರಿಗಳು ಬರಲು ಮೀನಮೇಷ ಎಣಿಸುತ್ತಿದ್ದಾರೆ.

    ನೂತನ ಆಡಳಿತ ಸೌಧದಲ್ಲಿ ಸ್ಥಳಾವಕಾಶ ಇದ್ದರೂ, ಖಾಸಗಿ ಕಟ್ಟದಲ್ಲಿ ಬಾಡಿಗೆ ನೀಡಿ ಕಚೇರಿ ನಡೆಸುತ್ತಿರುವುದೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರೇ ಸೂಚಿಸಿದರೂ ಈ ಇಲಾಖೆಗಳು ಸ್ಥಳಾಂತರವಾಗದಿರುವುದು ದುರಂತ.

    ಕಾರ್ಯದೊತ್ತಡಕ್ಕೆ ಬೇರೆಡೆ ವರ್ಗಾವಣೆ

    ನಂಜುಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ, ಅತಿದೊಡ್ಡ ತಾಲೂಕು ಕೂಡ್ಲಿಗಿ. ಸುಮಾರು ಮೂರು ಲಕ್ಷ ಜನಸಂಖ್ಯೆ, ಮೂರು ದೊಡ್ಡ ಹೋಬಳಿಗಳನ್ನು ಹೊಂದಿದೆ.ಹೊಸಹಳ್ಳಿ ಹಾಗೂ ಗುಡೇಕೋಟೆ ಹೋಬಳಿ ಜನರು ತಾಲೂಕು ಕೇಂದ್ರಕ್ಕೆ 45 ರಿಂದ 50 ಕಿಮೀ ಕ್ರಮಿಸಿ ಬರಬೇಕಿದೆ. ವಿವಿಧ ದಾಖಲೆ ಪಡೆಯಲು ಅಷ್ಟು ದೂರದಿಂದ ಬಂದರೂ ಸಿಬ್ಬಂದಿ ಕೊರತೆಯಿಂದಾಗಿ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ.ಹೀಗಾಗಿ ಅಲೆದಾಟವೂ ತಪ್ಪುತ್ತಿಲ್ಲ.

    ಇನ್ನೊಂದೆಡೆ ಇಲ್ಲಿಗೆ ಬರುವ ಅಧಿಕಾರಿಗಳು ಕೆಲವೇ ತಿಂಗಳುಗಳಲ್ಲಿ ಬೇರೆಡೆಗೆ ನಿಯೋಜನೆ ಇಲ್ಲವೆ ವರ್ಗಾವಣೆ ಆಗಿ ಹೋಗುತ್ತಿದ್ದಾರೆ. ಇದಕ್ಕೆ ಅಧಿಕ ಕಾರ್ಯದೊತ್ತಡ ಕಾರಣ ಎನ್ನಲಾಗುತ್ತಿದೆ. ಇಲ್ಲಿಗೆ ಬಯಸಿ ಬರುವ ಅಧಿಕಾರಿಗಳು, ಸಿಬ್ಬಂದಿಯೂ ವಿರಳ. ಬಂದವರು ಪಕ್ಕದ ತಾಲೂಕುಗಳಿಗೆ ವರ್ಗವಾಗಿ ಹೋಗುತ್ತಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

    ಅಗತ್ಯ ಪೀಠೋಪಕರಣಗಳು ಇಲ್ಲ

    ತಾಲೂಕು ಕಚೇರಿಗೆ ಸರ್ಕಾರ 10 ಕೋಟಿ ರೂ.ಗೂ ಹೆಚ್ಚು ವ್ಯಯಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದೆ. ಆಡಳಿತ ಸೌಧ ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ಅಗತ್ಯ ಪೀಠೋಪಕರಣಗಳು ಇಲ್ಲ. ಸ್ವಾತಂತ್ರ್ಯಪೂರ್ವ ಕಾಲದ ಪೀಠೋಪಕರಣಗಳಲ್ಲಿಯೇ ಕಾರ್ಯ ನಿರ್ವಹಿಸಬೇಕಿದೆ.

    ಸರಿಯಾದ ಟೇಬಲ್, ಕುರ್ಚಿಗಳು ಇಲ್ಲ. ಅಗತ್ಯ ಕಂಪ್ಯೂಟರ್ ಹಾಗೂ ಸಮರ್ಪಕ ಇಂಟರ್‌ನೆಟ್ ಇಲ್ಲ. ವಿದ್ಯುತ್ ಕಡಿತವಾದರೆ ಜನರೇಟರ್ ವ್ಯವಸ್ಥೆ ಇಲ್ಲವಾಗಿದ್ದು, ಸಾರ್ವಜನಿಕ ಕೆಲಸಗಳು ನಿಧಾನಗತಿಗೆ ಇವೂ ಸಹ ಕಾರಣ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.

    ವಿಜಯನಗರ ಜಿಲ್ಲೆಯ ಅತಿ ದೊಡ್ಡ ತಾಲೂಕು ಕೂಡ್ಲಿಗಿಯ ತಹಸಿಲ್ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಇರುವ ಸಿಬ್ಬಂದಿಗೆ ಮೂರು, ನಾಲ್ಕು ವಿಭಾಗಗಳ ಜವಾಬ್ದಾರಿ ವಹಿಸಿದ್ದು, ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮುಗಿಸುವುದು ಕಷ್ಟ. ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    | ಟಿ.ಜಗದೀಶ್, ತಹಸೀಲ್ದಾರ್, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts