More

    ಹನುಮಮಾಲೆ ವಿಸರ್ಜನೆ ಸಿದ್ಧತೆ ಶುರು

    ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ನಡೆಯಲಿರುವ ಹನುಮಮಾಲೆ ವಿಸರ್ಜನೆ ವ್ಯವಸ್ಥೆಗೆ ತಾಲೂಕು ಆಡಳಿತ ಮುಂದಾಗಿದ್ದು, ಗುರುವಾರದಿಂದ ಸಿದ್ಧತೆ ಕೈಗೊಂಡಿದೆ.

    ಡಿ.24ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಯಲಿದ್ದು, ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕಿದ್ದ ತಾಲೂಕಾಡಳಿತ ಮತ್ತು ದೇವಾಲಯ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸಿತ್ತು. ಈ ಕುರಿತು ‘ಹನುಮಮಾಲೆ ವಿಸರ್ಜನೆ ಸಿದ್ಧತೆ ವಿಳಂಬ’ ಶೀಷಿರ್ಕೆಯಡಿ ಡಿ.13ರಂದು ವಿಜಯವಾಣಿ ವಿಸೃತ ವರದಿ ಪ್ರಕಟಿಸಿತ್ತು. ಇದಲ್ಲದೆ ಭಕ್ತರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ನಗರದ ತಾಲೂಕಾಡಳಿತ ಸೌಧದಲ್ಲಿ ಮೊದಲ ಹಂತದ ಸಭೆ ನಡೆಸಿದೆ. ಅಡುಗೆದಾರರು, ಟೆಂಟ್ ಹಾಕುವರು, ತಾತ್ಕಾಲಿಕ ಬ್ಯಾರಿಕೇಡ್ ವ್ಯವಸ್ಥೆಗೆ ಮೇದಾರ ಸಮುದಾಯದೊಂದಿಗೆ ಚರ್ಚಿಸಿದ್ದು, ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ.

    ಕಂದಾಯ ಮತ್ತು ಪೊಲೀಸ್‌ಯೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಕೈಗೊಳ್ಳಬೇಕಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿತು. ಜಿಲ್ಲಾಡಳಿತ ಸೂಚಿಸಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಯಿತು.

    ಈ ಕುರಿತು ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವನ್ನು ಅಚ್ಚುಕಟ್ಟು ನಿರ್ವಹಿಸಲಾಗುತ್ತಿದ್ದು, ನಿರ್ವಹಣೆಗಾರರೊಂದಿಗೆ ಮೊದಲ ಸುತ್ತಿನ ಸಭೆ ಪೂರ್ಣಗೊಂಡಿದೆ. ಕಾರ್ಯಕ್ರಮ ಪೂರ್ಣಗೊಳ್ಳುವರೆಗೂ ಜವಾಬ್ದಾರಿಹೊತ್ತ ಅಧಿಕಾರಿಗಳು ಅಂಜನಾದ್ರಿ ಬೆಟ್ಟದ ಬಳಿ ಇರುವಂತೆ ಸೂಚಿಸಿದ್ದೇನೆ ಎಂದರು. ಉಪ ತಹಸೀಲ್ದಾರ್ ಅಬ್ದುಲ್ ರಹೆಮಾನ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರಿದ್ದರು.

    ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ: ಅಂಜನಾದ್ರಿ ಬೆಟ್ಟ ಸಂಪರ್ಕಿಸುವ ಪ್ರಮುಖ ರಸ್ತೆಯ ಹನುಮನಹಳ್ಳಿ ಮತ್ತು ಆನೆಗೊಂದಿ ಬಳಿ ವಾಹನ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲಾಗಿದ್ದು, ಜೆಸಿಬಿ ಮೂಲಕ ಸಮತಟ್ಟು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಭತ್ತದ ಗದ್ದೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೈಗೊಂಡ ಹಿನ್ನೆಲೆಯಲ್ಲಿ, ಗದ್ದೆಗೆ ನೀರು ಹರಿಸದಂತೆ ಸಂಬಂಧಪಟ್ಟ ಭೂ ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಿಬ್ಬಂದಿ, ಬಂದೋಬಸ್ತ್‌ಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಎಎಸ್‌ಐ ಶಿವಶರಣಪ್ಪ, ದೇವಾಲಯ ವ್ಯವಸ್ಥಾಪಕ ಎಂ.ವೆಂಕಟೇಶ ಇತರರಿದ್ದರು.

    ಹುಂಡಿಯಲ್ಲಿ 20.36ಲಕ್ಷ ರೂ. ಸಂಗ್ರಹ

    ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ 20.36ಲಕ್ಷ ರೂ. ಸಂಗ್ರಹ ಆಗಿದ್ದು, ವಿದೇಶಿ ಒಂದು ನೋಟು ಮತ್ತು ಐದು ನಾಣ್ಯಗಳು ದೊರೆತಿವೆ. ಭದ್ರತೆ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿದ್ದು, ಈ ಬಾರಿ 41 ದಿನಗಳ ನಂತರ ಹುಂಡಿ ಎಣಿಕೆಯಾಗಿದೆ. ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದಲ್ಲಿ ಕಂದಾಯ ಸಿಬ್ಬಂದಿ ಮತ್ತು ಭಕ್ತರು ನೆರವಿನೊಂದಿಗೆ ಹುಂಡಿ ಎಣಿಕೆ ನಡೆಯಿತು.ನೇಪಾಳದ ಒಂದು ನೋಟು ಮತ್ತು ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ. ಪೊಲೀಸ್ ಮತ್ತು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ನಡೆದಿದ್ದು, ಪಗಡದಿನ್ನಿ ಕ್ಯಾಂಪ್ ಹರೇಶ್ರೀನಿವಾಸ ಮಹಿಳಾ ಸೇವಾ ಮಂಡಳಿ ಸದಸ್ಯರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಕಳೆದ ಬಾರಿ ಅಂದರೆ ನ.3ರ ಹುಂಡಿ ಎಣಿಕೆಯಲ್ಲಿ 27.16ಲಕ್ಷ ರೂ ಸಂಗ್ರಹವಾಗಿತ್ತು.
    ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಆರ್‌ಐಗಳಾದ ಮಂಜುನಾಥ ಹಿರೇಮಠ, ಮಹೇಶ ದಲಾಲ್, ಹಾಲೇಶ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಮಹೆಬೂಬ್‌ಅಲಿ, ಕೃಷ್ಣವೇಣಿ, ಗುರುರಾಜ, ಮಂಜುನಾಥ, ಸುಧಾ, ಶ್ರೀರಾಮ ಜೋಶಿ, ಪಿಕೆಜಿ ಬ್ಯಾಂಕ್ ಪ್ರತಿನಿಧಿಗಳಾದ ಸುನೀಲ್, ರಾಜಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts