More

    ಶಿರಾ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಪಟ್ಟಕ್ಕೆ ವಾಕ್ಸಮರ

    ಶಿರಾ: ಅಭಿವೃದ್ಧಿ, ಸಮಸ್ಯೆಗಳ ಚರ್ಚೆ, ಪರಿಹಾರಕ್ಕೆ ವೇದಿಕೆಯಾಗಬೇಕಿದ್ದ ಶಿರಾ ತಾಲೂಕು ಪಂಚಾಯಿತಿ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಬದಲಾವಣೆಯ ವಾಕ್ಸಮರದಲ್ಲೇ ಮುಗಿಯಿತು.

    ಅಧ್ಯಕ್ಷ ಚಂದ್ರಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಆರಂಭದಲ್ಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಒಡಂಬಡಿಕೆಯಂತೆ 20 ತಿಂಗಳಿಗೆ ಸೀಮಿತವಾಗಿ ತೀರ್ಮಾನವಾಗಿದ್ದ ವಿಷಯವನ್ನು ತಾಲೂಕು ಪಂಚಾಯಿತಿ ಸದಸ್ಯ ಶಿವಣ್ಣ ಎತ್ತಿದ್ದರು.

    ಈ ವಿಚಾರವನ್ನು 40 ತಿಂಗಳು ಅಧಿಕಾರ ಮಾಡಿದ ಮಾಜಿ ಅಧ್ಯಕ್ಷರನ್ನು ಕೇಳದೆ, ನಾನು ಅಧ್ಯಕ್ಷನಾದಾಗ ಪ್ರಸ್ತಾಪವೇಕೆ?, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ತಾಪಂ ಅಧ್ಯಕ್ಷ ಚಂದ್ರಯ್ಯ ಜಾರಿಕೊಂಡರು.

    ಉಪಾಧ್ಯಕ್ಷ ರಂಗನಾಥಗೌಡ, ಸದಸ್ಯರಾದ ಪುಟ್ಟರಾಜು, ಮಂಜುನಾಥ್ ಮತ್ತು ಮಂಜುಳಾಬಾಯಿ ಇತರರು ಸ್ಥಾಯಿ ಸಮಿತಿ ಅಧ್ಯಕ್ಷರ ಬದಲಾವಣೆ ಚರ್ಚಿತ ವಿಷಯವಲ್ಲ, ನಿಯಮಾವಳಿ ಅನುಸಾರ ಅನುಮೋದಿಸದಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

    ಆದರೆ ಶಿವಣ್ಣ ಏರುಧ್ವನಿಯಲ್ಲಿ, ಯಾವುದೇ ಕಾರಣಕ್ಕೂ ಸಭೆ ನಡೆಯಲು ಬಿಡುವುದಿಲ್ಲ, ಮೊದಲು ಈ ಬಗ್ಗೆ ತೀರ್ಮಾನವಾಗಬೇಕು, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸ್ಥಳೀಯ ಸಂಸ್ಥೆಗಳು ಕಾರ್ಯನಿರತವಾಗಬೇಕು ಎಂದು ಪಟ್ಟು ಹಿಡಿದರು.

    ವಾಕ್ಸಮರದಿಂದ ಸಭೆ ಮುಂದೂಡಲ್ಪಡುವ ಹಂತಕ್ಕೆ ಹೋದಾಗ ಅಧ್ಯಕ್ಷರಾಧಿಯಾಗಿ ಎಲ್ಲರೂ ಕಾರ್ಯನಿರ್ವಹಣಾಧಿಕಾರಿ ಬಳಿ ಸ್ಪಷ್ಟನೆ ಕೇಳಿದರು. ಕೊನೆಗೆ ಪ್ರತಿಕ್ರಿಯಿಸಿದ ಇಒ ಎಲ್.ಮೋಹನ್‌ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರ ಬದಲಾವಣೆ ಕುರಿತು ಒಂದು ದಿನ ಪ್ರತ್ಯೇಕ ವಿಶೇಷ ಸಭೆ ಕರೆದು ಕಾನೂನು ಮಾನದಂಡಗಳನ್ನು ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದಾಗ ಸಭೆ ಮುಂದುವರಿಯಿತು.

    ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ತಿಮ್ಮಣ್ಣ, ಸದಸ್ಯರಾದ ನಾಗರಾಜು, ಪುಟ್ಟರಂಗಮ್ಮ, ಛಾಯಾ ಮಂಜುನಾಥ್, ಸಾಮಾಜಿಕ ಅರಣ್ಯ ಇಲಾಖೆಯ ಅನುಷಾಭಟ್, ಬೆಸ್ಕಾಂ ಎಇಇ ಜಲ್ದೇಶ್, ಸಿಡಿಪಿಒ ಬಸವರಾಜು, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಸಹಾಯಕ ತೋಟಗಾರಿಕೆ ನಿರ್ದೇಶಕ ಪಾಂಡುರಂಗಪ್ಪ, ಬಿಸಿಎಂ ಅಧಿಕಾರಿ ಭಾನುಮತಿ, ವ್ಯವಸ್ಥಾಪಕಿ ಶ್ರೀದೇವಿ ಇದ್ದರು.

    ಯಾವ ಸೀಮೆ ಅಧಿಕಾರಿಇಲಾಖೆಯಿಂದ ಯಾವುದೇ ಔಷಧ ಖರೀದಿ ಮಾಡುವ ಅಧಿಕಾರವಿಲ್ಲ, ಕೇವಲ ಆರೋಗ್ಯ ಶಿಬಿರಕ್ಕಷ್ಟೇ ಔಷಧ ನೀಡುತ್ತಿದ್ದು, ಕೇವಲ ದೊಮ್ಮೆರೋಗಕ್ಕೆ ವ್ಯಾಕ್ಸಿನೇಷನ್ ಮಾತ್ರ ಲಭ್ಯವಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವೈ.ಜಿ.ರಂಗನಾಥ್ ಅಸಹಾಯಕತೆ ವ್ಯಕ್ತಪಡಿಸಿದರು. ಔಷಧ ತರಿಸುವ ಹಕ್ಕು ಇಲ್ಲ ಅಂದ ಮೇಲೆ ನೀವು ಯಾವ ಸೀಮೆ ಅಧಿಕಾರಿ ಎಂದು ತಾಪಂ ಸದಸ್ಯ ಮಂಜುನಾಥ್ ತರಾಟೆಗೆ ತೆಗೆದುಕೊಂಡರು.

    182 ಶಾಲಾ ಕಟ್ಟಡ ನೆಲಸಮ: ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಶೇ.85ಕ್ಕಿಂತ ಹೆಚ್ಚು ಲಿತಾಂಶ ಪಡೆಯಲು ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ತರಗತಿ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ದುರಸ್ತಿಗೊಳ್ಳದ 182 ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಲು ಶಿಫಾರಸು ಮಾಡಲಾಗಿದೆ. ಖಾಸಗಿ ಸೇವಾ ಸಂಸ್ಥೆಗಳಿಂದ ಕಳ್ಳಂಬೆಳ್ಳ, ಕಸಬ ಹೋಬಳಿಯ ಕೆಲವು ಶಾಲೆಗಳ ದುರಸ್ತಿಗೊಳಿಸುವ ಜವಾಬ್ದಾರಿ ತೆಗೆದು ಕೊಂಡಿದ್ದಾರೆ ಎಂದು ಬಿಇಒ ನಟರಾಜು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts