More

    35ಕ್ಕೂ ಹೆಚ್ಚು ಡಕೋಟ ಬಸ್‌ಗಳು : ಶಾಪಗ್ರಸ್ತ ಕೆಎಸ್‌ಆರ್‌ಟಿಸಿ ಶಿರಾ ಡಿಪೋ : ಗಮನಹರಿಸುವರೆ ಸಾರಿಗೆ ಸಚಿವ ಶ್ರೀರಾಮುಲು

    ಶಿರಾ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿರಾ ಘಟಕದಲ್ಲಿನ ಡಕೋಟ ಬಸ್‌ಗಳಿಂದ ಜನ ಹೈರಾಣಾಗಿ ಹೋಗಿದ್ದಾರೆ. ಗುಜರಿಗೆ ಹಾಕಬೇಕಿರುವ 35ಕ್ಕೂ ಹೆಚ್ಚು ಬಸ್‌ಗಳನ್ನು ಗ್ರಾಮೀಣ ಸಾರಿಗೆ ಸೇವೆಗೆ ಬಳಸುತ್ತಿರುವುದು ದೊಡ್ಡ ವಿಪರ್ಯಾಸವೇ ಸರಿ.

    ತುಮಕೂರು ಸಾರಿಗೆ ವಿಭಾಗೀಯ 7 ಡಿಪೋಗಳಲ್ಲಿ ಶಿರಾ ಘಟಕ ದೊಡ್ಡ ಡಿಪೋಗಳಲ್ಲಿ ಒಂದು. 80ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿರುವ ಶಿರಾ ಡಿಪೋದಲ್ಲಿ ಶೇ.50ಕ್ಕೂ ಹೆಚ್ಚು ಬಸ್‌ಗಳು ‘ಡಕೋಟ ಎಕ್ಸ್‌ಪ್ರೆಸ್’ಗಳು. 15 ರಿಂದ 20 ಲಕ್ಷ ಕಿ.ಮೀ., ಓಡಿ ಗುಜರಿಗೆ ತಳ್ಳಬೇಕಿರುವ ಬಸ್‌ಗಳನ್ನು ಗ್ರಾಮೀಣ ಜನರ ಸೇವೆಗೆ ಬಳಸಲಾಗುತ್ತಿದೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಈ ಬಸ್‌ಗಳ ಬಗ್ಗೆ ಪ್ರಯಾಣಿಕರು ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.

    ತುಟಿಬಿಚ್ಚದ ಚಾಲಕರು: ಶಿರಾ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು ಸಾರಿಗೆ ಸೇವೆಗೆ ಬಳಸಲು ಯೋಗ್ಯವಲ್ಲದ ಬಸ್‌ಗಳ ಬಗ್ಗೆ ತುಟಿಬಿಚ್ಚುವಂತ ಪರಿಸ್ಥಿತಿ ಇಲ್ಲ. ಒಂದುವೇಳೆ ಬಸ್‌ಗಳ ಬಗ್ಗೆ ತಕರಾರು ತೆಗೆದಿದ್ದೇ ಆದಲ್ಲಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಈ ತಳ್ಳು ನೂಕೋ ಗಾಡಿಗಳನ್ನೇ ಪ್ರತಿನಿತ್ಯ 350 ಕಿ.ಮೀ., ಓಡಿಸಿ ಹೈರಾಣಾಗಿ ಹೋಗಿರುವ ಚಾಲಕರು ರಿಪೇರಿ ಸಂದರ್ಭದಲ್ಲಿ ತಾಂತ್ರಿಕ ಸಿಬ್ಬಂದಿ ಕೈಕಾಲು ಹಿಡಿಯುವ ಅನಿವಾರ್ಯತೆ ಇದೆ.
    ಕರೊನಾ ನೆಪವೊಡ್ಡಿ ಹೊಸ ಬಸ್‌ಗಳ ಖರೀದಿಗೆ ಸರ್ಕಾರ ಅನುಮತಿ ನೀಡಿಲ್ಲ. ಆದರೆ, ಈಗ ಪೂರ್ಣಪ್ರಮಾಣದಲ್ಲಿ ಗ್ರಾಮೀಣಸೇವೆ ಆರಂಭಿಸಿದ್ದು ಕೊನೆಪಕ್ಷ ಹಳೆಯದಾದರು ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ನೀಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.

    ಶಾಪಗ್ರಸ್ತ ಶಿರಾ ಡಿಪೋ : ಶಿರಾ ಘಟಕವು ಶಾಪಗ್ರಸ್ತ ಡಿಪೋ ಎನಿಸಿದೆ. ಟಿ.ಬಿ.ಜಯಚಂದ್ರ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿತ್ರದುರ್ಗ ವಿಭಾಗಕ್ಕೆ ಶಿರಾ ಹಾಗೂ ಪಾವಗಡ ಡಿಪೋ ಸೇರ್ಪಡೆ ಮಾಡಲಾಯಿತು. ಹಾಗಾಗಿ, ತುಮಕೂರು ವಿಭಾಗದವರು ಹೊಸ ಬಸ್‌ಗಳನ್ನು ನೀಡಲಿಲ್ಲ. ಬದಲಿಗೆ ಮಧುಗಿರಿ ಹೊಸ ಡಿಪೋಕ್ಕೆ ಉತ್ತಮ ಬಸ್‌ಗಳನ್ನು ನೀಡಲಾಯಿತು.
    ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಶಾಸಕ ಬಿ.ಸತ್ಯನಾರಾಯಣರನ್ನು ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ವೇಳೆ ಶಿರಾ ಡಿಪೋವನ್ನು ಮತ್ತೆ ತುಮಕೂರು ವಿಭಾಗಕ್ಕೆ ಸೇರಿಸಲಾಯಿತು. ಚಿತ್ರದುರ್ಗ ವಿಭಾಗದವರು ಪಾವಗಡಕ್ಕೆ ಹೊಸ ಬಸ್‌ಗಳನ್ನು ನೀಡಿದರೆ ಹೊರತು ಶಿರಾಕ್ಕೆ ನೀಡಲಿಲ್ಲ. ಹಾಗಾಗಿ, ಶಿರಾ ಘಟಕವು ಶಾಪಗ್ರಸ್ತ ಡಿಪೋ ಎನಿಸಿದೆ.

    ಸಾರಿಗೆ ಸಚಿವರ ಭೇಟಿ : ಮಂಗಳವಾರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಶಿರಾ ಸಾರಿಗೆ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಾದರೂ ಪ್ರಯಾಣಿಕರ, ಚಾಲಕರು-ನಿರ್ವಾಹಕರು ಪಡುತ್ತಿರುವ ಕಷ್ಟಗಳಿಗೆ ಸ್ಪಂದಿಸುತ್ತಾರಾ ಅಥವಾ ಕರೊನಾ ನೆಪೆ ಹೇಳಿ ಜಾರಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

    ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಈ ಬಗ್ಗೆ ಹಲವು ಬಾರಿ ಸಾರಿಗೆ ಅಧಿಕಾರಿಗಳ ಗಮನಸೆಳೆದರು ಎಳ್ಳಷ್ಟು ಪ್ರಯೋಜನವಾಗಿಲ್ಲ. ನಮ್ಮವರೇ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿದ್ದಾಗಲು ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ನಮ್ಮ ಡಿಪೋಕ್ಕೆ ತರಲಿಲ್ಲ. ಇನ್ನಾದರೂ ಜನರು ಓಡಾಡಲಿಕ್ಕೆ ಯೋಗ್ಯವಾದ ಬಸ್‌ಗಳನ್ನು ಓಡಿಸುವಂತಾಗಲಿ.
    ಶಿವಣ್ಣ ಗೋಣಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts