More

    2023ರ ಅಂತ್ಯಕ್ಕೆ ತಾಳಗುಪ್ಪ ರೈಲ್ವೆ ಮಾರ್ಗ ಪೂರ್ಣ ವಿದ್ಯುದ್ದೀಕರಣ

    ಶಿವಮೊಗ್ಗ: ತಾಳಗುಪ್ಪ ರೈಲ್ವೆ ಮಾರ್ಗ 2023ರ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ವಿದ್ಯುದ್ದೀಕರಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದರು.
    ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಜಿಲ್ಲೆಯ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಿ ಮಾತನಾಡಿ, ಬೀರೂರುವರೆಗೆ ಈಗಾಗಲೇ ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಅಲ್ಲಿಂದ ಶಿವಮೊಗ್ಗದವರೆಗೆ ವಿದ್ಯುದೀಕರಣಕ್ಕೆ ಟೆಂಡರ್ ಪೂರ್ಣಗೊಂಡು ಕಾಮಗಾರಿ ಆರಂಭವಾಗಿದೆ. 2023ರ ಮಾರ್ಚ್ ವೇಳೆಗೆ ಶಿವಮೊಗ್ಗವರೆಗೆ ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ. ಬಳಿಕ ಡಿಸೆಂಬರ್‌ನೊಳಗೆ ತಾಳಗುಪ್ಪ ಮಾರ್ಗವನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
    ನೈಋತ್ಯ ರೈಲ್ವೆಗೆ ಗತಶಕ್ತಿ ಯೂನಿಟ್ ಮಂಜೂರಾಗಿದೆ. ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಗತಶಕ್ತಿ ಯೂನಿಟ್ ಕೆಲಸ ಮಾಡಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಉತ್ತಮ ಸಹಕಾರದಿಂದ ರೈಲ್ವೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಭವಿಷ್ಯದ ದೃಷ್ಟಿಕೋನದಿಂದ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಗತಶಕ್ತಿ ಯೂನಿಟ್‌ನಿಂದ ಸ್ವಚ್ಛತೆಗೆ ಇನ್ನಷ್ಟು ಮಹತ್ವ ದೊರೆಯಲಿದೆ. ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೂ ಅವಕಾಶ ಆಗಲಿದೆ ಎಂದು ಹೇಳಿದರು.
    ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಸರ್ವೇ ಪೂರ್ಣ:
    ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದಾಗ ತಾಳಗುಪ್ಪ-ಶಿರಸಿ-ತಡಸ-ಹುಬ್ಬಳ್ಳಿ ಮಾರ್ಗದ ಸರ್ವೇ ಮಾಡಲು 50 ಲಕ್ಷ ರೂ. ಮೀಸಲಿರಿಸಲಾಗಿತ್ತು. ಇದೀಗ ಸರ್ವೇ ಕಾರ್ಯ ಪೂರ್ಣಗೊಂಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಬರುವ ನವೆಂಬರ್ ವೇಳೆಗೆ ರೈಲ್ವೆ ಭವನಕ್ಕೆ ವರದಿ ಸಲ್ಲಿಸಲಿದ್ದಾರೆ. ನಂತರ ಯೋಜನೆ ಮಂಜೂರಾತಿ ಸಂಬಂಧ ಒತ್ತಡ ಹೇರಲಾಗುವುದು ಎಂದರು. ಸ್ವಾತಂತ್ರೃ ಬಳಿಕ ಜಿಲ್ಲೆಯಲ್ಲಿ ಮೊದಲ ಬಾರಿ ಹೊಸ ರೈಲ್ವೆ ಮಾರ್ಗ ಕಾಮಗಾರಿ ನಡೆಯಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್ ಮೊದಲ ವಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಕಾಮಗಾರಿ ಆರಂಭವಾಗುವುದು ಎಂದರು. ನಂತರ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣ ಸಂಬಂಧ ಪ್ರಕ್ರಿಯೆ ಆರಂಭವಾಗುವುದು. ಈಗಾಗಲೇ ಶೇ.50 ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಉಳಿದಂತೆ ಶಿವಮೊಗ್ಗದಿಂದ ಸಂಚರಿಸುವ ಕೆಲ ರೈಲುಗಳಲ್ಲಿ ಇರುವ ಹಳೆಯ ಬೋಗಿಗಳನ್ನು ಬದಲಾಯಿಸಲು ಕೋರಲಾಗಿದೆ. ಜತೆಗೆ ಶೌಚಗೃಹ ಇತ್ಯಾದಿ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ಅದಕ್ಕೆ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 6 ಕಿ.ಮೀ. ರೋಪ್ ವೇ ಕಾಮಗಾರಿಗೆ ಅನುಮೋದನೆ ದೊರೆತಿದೆ. ಇದಾದ ಬಳಿಕ ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಭೇಟಿ ಕೊಡುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಸಾಗರ ರೈಲ್ವೆ ನಿಲ್ದಾಣ ಅಭಿವೃದ್ಧಿ, 2ನೇ ಪ್ಲಾಟ್‌ಾರ್ಮ್ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ ಎಂದು ರಾಘವೇಂದ್ರ ಹೇಳಿದರು.
    ಡಿಆರ್‌ಎಂ ರಾಹುಲ್ ಅಗರ್‌ವಾಲ್, ಪ್ರಿನ್ಸಿಪಲ್ ಚ್ೀ ಇಂಜಿನಿಯರ್ ಎಸ್‌ಡಿಎಸ್ ಶಾಸಿ, ಮುಖ್ಯ ಆಡಳಿತಾಧಿಕಾರಿ ಮೀನಾ, ವಿಭಾಗೀಯ ಇಂಜಿನಿಯರ್ ರವಿಚಂದ್ರ, ಆಡಳಿತ ವಿಭಾಗದ ಶ್ರೀಧರಮೂರ್ತಿ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts