ಶಿಕಾರಿಪುರ: ಬೇಸಿಗೆ ಸಮೀಪಿಸುತಿದ್ದು ಬರಗಾಲದ ತೀವ್ರತೆ ಕಾಡುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಉಪೇಕ್ಷೆ ಮಾಡದೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಗುರುವಾರ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಿ. ಈಗಾಗಲೇ ಬರ ಎದುರಾಗಿದ್ದು ಅಂತರ್ಜಲ ಮಟ್ಟವೂ ಕುಸಿತ ಕಂಡಿದೆ. ಇದರಿಂದ ಸಹಜವಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರ್ಯಾಯ ಮಾರ್ಗಗಳನ್ನು ರೂಪಿಸಿಕೊಳ್ಳಿ, ಅಂಗನವಾಡಿ ಸೇರಿ ಶಾಲಾ ಕಾಲೇಜುಗಳಿಗೆ ಮುಖ್ಯವಾಗಿ ವಸತಿ ಶಾಲೆ, ಹಾಸ್ಟೆಲ್ಗಳಲ್ಲಿ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ ಎಂದರು.
ಪ್ರತಿಕ್ರಿಯೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಎ.ಭರತ್, ಜುಲೈವರೆಗೆ ಶಿಕಾರಿಪುರದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಪ್ರತಿದಿನ ಶಿಕಾರಿಪುರಕ್ಕೆ 50 ಲಕ್ಷ ಲೀ. ಕುಡಿಯುವ ನೀರಿನ ಅಗತ್ಯವಿದೆ. ನಮ್ಮಲ್ಲಿ 120 ಬೋರ್‌ವೆಲ್ಗಳಿದ್ದು ಎಲ್ಲವೂ ಚಾಲ್ತಿಯಲ್ಲಿವೆ. ಅಂಜನಾಪುರ ಜಲಾಶಯದಿಂದ ನೀರು ಪೂರೈಸುತ್ತಿದ್ದೇವೆ. ಬೇಸಿಗೆಯಲ್ಲಿ ಪ್ರತಿ ದಿನ ಎರಡು ಗಂಟೆ ನೀರು ಬಿಡುತ್ತಿದ್ದು ಪವರ್ ಕಟ್ ಸಮಸ್ಯೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಈ ಬಗ್ಗೆ ವೆುಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಿ ಮನವಿಯನ್ನೂ ಮಾಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ತಾಲೂಕು ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದರು. ಆದರೂ ಇನ್ನೂ ಮೂಲ ಸೌಕರ್ಯಗಳ ಕೊರತೆ ಕಾಣುತ್ತಿದ್ದು ಎಲ್ಲ ಅಧಿಕಾರಿಗಳು ಒಂದಾಗಿ ಕೆಲಸ ಮಾಡಬೇಕಿದೆ. ಯಾವ ಕಾರಣಕ್ಕೂ ಜನರಿಂದ ನಮಗೆ ದೂರುಗಳು ಬಾರದಂತೆ ಕೆಲಸ ಮಾಡಿ. ನಿಮ್ಮ ಪರಿಶ್ರಮ ಮತ್ತು ಸಾಮಾಜಿಕ ಕಳಕಳಿಯಿಂದ ಜನರ ಸಮಸ್ಯೆ ನೀಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಜನಸಾಮಾನ್ಯರು, ರೈತರು ಸಮಸ್ಯೆಗಳೊಂದಿಗೆ ಕಚೇರಿಗೆ ಬಂದರೆ ಮೊದಲು ಅವರನ್ನು ಗೌರವಯುತವಾಗಿ ನೋಡಿಕೊಳ್ಳಿ. ಅನಗತ್ಯವಾಗಿ ಅವರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ. ಇದರಿಂದ ಜನರಲ್ಲಿ ಬೇಸರ ಮೂಡಿ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಎಂದರು. ಇಒ ರಾಜಣ್ಣ, ತಹಸೀಲ್ದಾರ್ ಮಲ್ಲೇಶ್ ಬಿ ಪೂಜಾರ್, ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಅಂಗನವಾಡಿ ಕಟ್ಟಡಗಳಲ್ಲಿ ಮೂಲ ಸೌಕರ್ಯಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಿ. ನಿವೇಶನಗಳಿಲ್ಲದಂತಹ ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಅನುದಾನ ಬಳಸಿಕೊಳ್ಳಿ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪೂರಕವಾಗಿ ಹೆಚ್ಚಿನ ಭದ್ರತೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಿ.
ಬಿ.ವೈ.ವಿಜಯೇಂದ್ರಶಾಸಕ