ರೋಗ ತಡೆಯಲು ಕ್ರಮ ವಹಿಸಿ

ಬೆಂಗಳೂರು: ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗ ತಡೆಯಲು ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮತ್ತು ಎಲ್ಲೆಡೆ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಸೂಚಿಸಿದ್ದಾರೆ.

ಮಳೆಗಾಲದ ಸಿದ್ಧತೆ ಕುರಿತಂತೆ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ರುದ್ರಭೂಮಿ ಹಾಗೂ ಚಿತಾಗಾರಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಅಲ್ಲೇ ವಿಂಗಡಿಸಬೇಕು. ಅಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಅಲ್ಲಿಯೇ ಸಂಸ್ಕರಿಸಲು ವ್ಯವಸ್ಥೆ ಮಾಡಿ. ರುದ್ರಭೂಮಿಗಳಲ್ಲಿ ಅನಗತ್ಯವಾಗಿ ತ್ಯಾಜ್ಯ ಹಾಕದಂತೆ ಸಾರ್ವಜನಿಕರಿಗೆ ಸೂಚಿಸಬೇಕು. ನಗರದೆಲ್ಲೆಡೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಹಾಗೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಸುವಂತೆ ತಿಳಿಸಿದರು.

ಪ್ಲಾಸ್ಟಿಕ್ ಕೈಚೀಲ ನಿಷೇಧವಾಗಿದ್ದರೂ ಅದರ ಉತ್ಪಾದನೆ ಹಾಗೂ ಬಳಕೆ ನಿಂತಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಕೆ ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಅದನ್ನು ತಡೆಯಲು, ಎಲ್ಲೆಡೆ ಪರಿಶೀಲನೆ ನಡೆಸಬೇಕು. ಹಾಗೆಯೇ, ಪ್ಲಾಸ್ಟಿಕ್ ಚೀಲಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳುತ್ತಿದ್ದಾರೆ. ಡೆಂಘ ಸೇರಿ ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಆರೋಗ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜತೆಗೆ ರೋಗಗಳ ಕುರಿತಂತೆ ಸಾರ್ವಜನಿಕವಾಗಿ ಜಾಗೃತಿ ಮೂಡಲು ಪ್ರಚಾರ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.

ಗಣೇಶ ಹಬ್ಬ ಬರುತ್ತಿದ್ದು ಕೆಲವು ಕಡೆ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದೆ. ಪಿಒಪಿ ಗಣೇಶ ಮೂರ್ತಿಗಳ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪರಿಸರಕ್ಕೆ ಹಾನಿಯಾಗುವಂತಹ ಮೂರ್ತಿಗಳನ್ನು ನಗರಕ್ಕೆ ಬರದಂತೆ ತಡೆಗಟ್ಟಿ ಹಾಗೂ ಮೂರ್ತಿಗಳನ್ನು ತಯಾರು ಮಾಡುವವರಿಗೆ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ಗಂಗಾಂಬಿಕೆ ಆದೇಶಿಸಿದರು.

ತುರ್ತು ಕಾಮಗಾರಿ ಪರಿಶೀಲನೆ

ಬೆಂಗಳೂರು: ಮಳೆಗಾಲದಲ್ಲಿ ಸಂಭಾವ್ಯ ಅವಘಡ ತಪ್ಪಿಸಲು ಕೈಗೊಂಡಿರುವ ಕಾಮಗಾರಿಗಳನ್ನು ಮೇಯರ್ ಗಂಗಾಂಬಿಕೆ ಮಂಗಳವಾರ ವೀಕ್ಷಿಸಿದರು. ತ್ವರಿತವಾಗಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂಗಾರು ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಚರಂಡಿಗಳ ಹೂಳು ತೆಗೆಯುವುದು, ಫುಟ್​ಪಾತ್ ದುರಸ್ತಿ ಸೇರಿ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಸಂಭವಿಸುವ ಅವಘಡಗಳನ್ನು ನಿವಾರಿಸಲು 24 ತುರ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ರಸ್ತೆಗಳಲ್ಲಿನ ಕಸ ತೆರವು, ಚರಂಡಿಗಳಲ್ಲಿರುವ ಹೂಳು ತೆಗೆಯುವುದು ಸೇರಿ ಹಲವು ಕಾರ್ಯ ಮಾಡುತ್ತಿದ್ದಾರೆ. ಮಳೆಗಾಲದ ತುರ್ತು ನಿರ್ವಹಣೆಗೆ 5 ತಿಂಗಳು ಗುತ್ತಿಗೆ ಆಧಾರದ ಮೇಲೆ ಕಾರ್ವಿುಕರನ್ನು ನಿಯೋಜಿಸಲಾಗಿದೆ. ಪ್ರತಿ ತಂಡಕ್ಕೆ ತಿಂಗಳಿಗೆ 11 ಲಕ್ಷ ರೂ.ಗಳಂತೆ ಐದು ತಿಂಗಳಿಗೆ 13.20 ಕೋಟಿ ರೂ. ನೀಡಲಾಗುತ್ತಿದೆ.

Leave a Reply

Your email address will not be published. Required fields are marked *