More

    ಬಿಜೆಪಿ, ಜೆಡಿಎಸ್‌ಗೆ ಸಿದ್ಧಾಂತಗಳಿಲ್ಲ

    ನಂಜನಗೂಡು: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಹಾಗಾದರೆ ಬಿಜೆಪಿ 7600 ಕೋಟಿ ಹಣವನ್ನು ಬ್ಯಾಂಕ್ ಬಾಂಡ್ ಮೂಲಕ ಸಂಗ್ರಹಿಸಿ ತೆರಿಗೆ ಕಟ್ಟದೇ ವಂಚಿಸಿದ್ದೀರಲ್ಲ ಈಗ ಹೇಳಿ ಯಾರನ್ನು ಜೈಲಿಗೆ ಕಳುಹಿಸುತ್ತೀರಿ ? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

    ತಾಲೂಕಿನ ಕಳಲೆ ಗೇಟ್ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

    ಭ್ರಷ್ಟರನ್ನು ಜೈಲಿಗೆ ಕಳುಹಿಸುವುದೇ ನನ್ನ ಕರ್ತವ್ಯ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನಿಜ ಕಾನೂನಿನಡಿ ಅನ್ಯಾಯ ಎಸಗಿದ ಭ್ರಷ್ಟರನ್ನು ಜೈಲಿಗೆ ಕಳುಹಿಸಬೇಕು. ಆದರೆ ಬಿಜೆಪಿಯವರು ಬ್ಯಾಂಕ್ ಬಾಂಡ್ ಮೂಲಕ 7600 ಕೋಟಿ ರೂ. ಸಂಗ್ರಹಿಸಿ ಒಂದು ರೂಪಾಯಿಯನ್ನೂ ತೆರಿಗೆ ಕಟ್ಟದೇ ವಂಚಿಸಿದ್ದೀರಲ್ಲ ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ಹೇಳಿ ಮೋದಿಜೀ, ನಡ್ಡಾ ಅವರನ್ನು ಜೈಲಿಗೆ ಕಳುಹಿಸಬೇಕಾ ಅಥವಾ ಮತ್ಯಾರನ್ನು ಜೈಲಿಗೆ ಕಳುಹಿಸಬೇಕು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಎಸೆದರು.

    ತಮ್ಮ ಅಧೀನದಲ್ಲಿರುವ ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಂಡು ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್, ಜಾರ್ಖಾಂಡ್ ಸಿಎಂ ಹೇಮಂತ್ ಸುರೈನ್ ಅವರನ್ನು ಜೈಲಿಗೆ ಕಳುಹಿಸಿದ್ದೀರಲ್ಲ, ನರೇಂದ್ರ ಮೋದಿ ಅವರೇ ತೆರಿಗೆ ಕಟ್ಟದ ನಿಮ್ಮ ಪಕ್ಷದವರ ಮೇಲೆ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ಸಿಗರು ನಿಜ ದೇಶಭಕ್ತರು: ಆರ್‌ಎಸ್‌ಎಸ್, ಜನಸಂಘ ಹಾಗೂ ಬಿಜೆಪಿಯವರು ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಕ್ವಿಟ್ ಇಂಡಿಯಾ ಚಳುವಳಿ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ಸಿಗರು ನಿಜವಾದ ದೇಶಭಕ್ತರು ಹೊರತು ಬಿಜೆಪಿಯವರು ದೇಶಭಕ್ತರು ಎಂದು ಹೇಳಿಕೊಳ್ಳಲು ಯಾವುದೇ ನೈತಿಕತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

    ಆರ್‌ಎಸ್‌ಎಸ್, ಜನಸಂಘ, ಬಿಜೆಪಿಯವರು ನಿಜವಾಗಿಯೂ ದೇಶಭಕ್ತರಾಗಿದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಏಕೆ ಹೋರಾಟ ಮಾಡಲಿಲ್ಲ. ಇವರು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಒಂದು ಉದಾಹರಣೆ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಆಗ್ತೀನಿ ಎಂದು ಸವಾಲು ಹಾಕಿದರು.

    ಬಿಜೆಪಿ-ಜೆಡಿಎಸ್ ಉಭಯ ಪಕ್ಷಗಳಿಗೆ ಸಿದ್ಧಾಂತ ಎಂಬುದಿಲ್ಲ. ಇದನ್ನು ನಾನು ಬಹಳ ಜವಬ್ದಾರಿಯುತ ಸ್ಥಾನದಲ್ಲಿದ್ದು ಹೇಳುತ್ತಿದ್ದೇನೆ. ಸಂವಿಧಾನ, ಪ್ರಜಾಸತ್ತತೆ, ಭಾರತ ಮಾತೆ, ಸಂಸದೀಯ ವ್ಯವಸ್ಥೆ ಬಗ್ಗೆ ಇವರಿಗೆ ನಂಬಿಕೆಯಿಲ್ಲ. ಸರ್ವಾಧಿಕಾರದ ಮೇಲೆ ಇವರಿಗೆ ನಂಬಿಕೆ ಜಾಸ್ತಿ. ಇಟಲಿ, ಜರ್ಮನಿ, ಫ್ರಾನ್ಸ್ ದೇಶದ ವ್ಯವಸ್ಥೆಯಂತೆ ಶ್ರೀಮಂತರ ಪರವಾಗಿ ಬಿಜೆಪಿ ಇದೆಯೇ ಹೊರತು ಬಡವರ ಪರವಲ್ಲ. ಬಡವರ ಬಗ್ಗೆ ಮಾತನಾಡುವರ ಇವರು ಅವರಿಗಾಗಿ ಏನೂ ಕೊಡುಗೆ ನೀಡಿಲ್ಲ ಎಂದು ಜರಿದರು.

    ನರೇಂದ್ರ ಮೋದಿ ಅವರ 10 ವರ್ಷದ ಅವಧಿಯಲ್ಲಿ ಬಡವರು, ರೈತರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಕಷ್ಟ ಕೇಳಲಿಲ್ಲ. ನಿರುದ್ಯೋಗ, ಬಡತನ, ಆಹಾರ ಕೊರತೆ, ಬೆಲೆ ಏರಿಕೆ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಇಷ್ಟು ವರ್ಷದಲ್ಲಿ ಮಾಧ್ಯಮದವರ ಮುಂದೆ ಮುಖಮಾಡಲಿಲ್ಲ. ಬಡವರು ಹೊಟ್ಟೆ ತುಂಬ ಊಟ ಮಾಡಲಿ ಅಂತ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಬಿಜೆಪಿ ಸರ್ಕಾರ ಅದಕ್ಕೂ ಕತ್ತರಿ ಹಾಕಿತು. ಈಗ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಬಿಜೆಪಿಯ ಬಡವರೂ ಊಟ ಮಾಡಲಿ ಎಂಬುದು ನಮ್ಮ ಕಳಕಳಿ ಎಂದರು.

    ರಾಜ್ಯ ದಿವಾಳಿಯಾಗಿಲ್ಲ: ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜರಿದಿದ್ದರು. ನಮ್ಮ ಸರ್ಕಾರ ಬಂದು 10 ತಿಂಗಳಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ರೂ. ವ್ಯಯ ಮಾಡಿದ್ದೇವೆ. ಮುಂದಿನ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಹಾಗೂ ಅಭಿವೃದ್ಧಿ ಯೋಜನೆಗಳಿಗೆ 68 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದರು.

    ಬಿಎಸ್‌ವೈ ಕಂಪನಿ ಕೆಡವಿದ್ದು: ಸಮ್ಮಿಶ್ರ ಸರ್ಕಾರವನ್ನು ಸಿದ್ದರಾಮಯ್ಯ ಕೆಡವಿದರು ಎಂದು ಎಚ್.ಡಿ.ಕುಮಾರಸ್ವಾಮಿ ಆರಂಭದಲ್ಲಿ ಹೇಳುತ್ತಿದ್ದರು. ಈಗ ಡಿ.ಕೆ.ಶಿವಕುಮಾರ್ ಮೇಲೆ ಹೇಳುತ್ತಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರ ಕೆಡವಿದ್ದು ಬಿ.ಎಸ್.ಯಡಿಯೂರಪ್ಪ ಅಂಡ್ ಕಂಪನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆದರೆ ಈಗ ಕುಮಾರಸ್ವಾಮಿ ಯಡಿಯೂರಪ್ಪ ಇಬ್ಬರೂ ಭಾಯಿ, ಭಾಯಿಗಳಾಗಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದ ಎಚ್.ಡಿದೇವೇಗೌಡ ಅವರು ಈಗ ನರೇಂದ್ರ ಮೋದಿ ಜತೆ ಸೇರಿದ್ದಾರೆ. ಜಾತ್ಯಾತೀತ ಪದ ತೆಗೆದು ಬರಿ ಜನತಾ ದಳ ಎಂದಿಟ್ಟುಕೊಳ್ಳಿ ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡುವುದಾಗಿ ದೇವೇಗೌಡರು ಹೇಳಿದ್ದಾರೆ. ನನಗೆ ಗರ್ವ ಇದ್ದರೆ ತಾನೇ ಭಂಗ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಕುಟುಕಿದರು.

    ಸುಳ್ಳು ಹೇಳಿದ್ದು ಯಾರು ?: ಜನರಿಗೆ ಸುಳ್ಳು ಭರವಸೆಗಳನ್ನು ಹೇಳಿ ವಂಚಿಸಿದ್ದು ಯಾರೂ ಎಂದು ಸಿದ್ದರಾಮಯ್ಯ ಸಭಿಕರನ್ನು ಪ್ರಶ್ನಿಸುತ್ತಿದ್ದಂತೆ, ಯಾರೋ ಒಬ್ಬ ಸಿದ್ದರಾಮಯ್ಯ ಎಂದು ಹೇಳುತ್ತಿದ್ದಂತೆ ಕೋಪಗೊಂಡ ಸಿದ್ದರಾಮಯ್ಯ ಅವರು, ಹೇ ನಾನು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಹಿಂದಿನ ನನ್ನ ಸರ್ಕಾರದಲ್ಲಿ ನುಡಿದಂತೆ ನಡೆದಿದ್ದೇನೆ. ಆದರೆ ಸುಳ್ಳು ಹೇಳಿ ಜನರನ್ನು ವಂಚಿಸಿದ್ದು ನರೇಂದ್ರ ಮೋದಿ ಎಂದು ಸಿದ್ದರಾಮಯ್ಯ ಹೇಳಿದರು.

    ಹೇ ಕೂತ್ಕೊಳಿ…: ಸಿದ್ದರಾಮಯ್ಯ ಭಾಷಣದ ಮಧ್ಯೆಯೇ ಜನರು ಎದ್ದು ಹೋಗುತ್ತಿರುವುದನ್ನು ಕಂಡು ಹೇ ಕೂತ್ಕೊಳ್ರಯ್ಯ, ಹೇ ಪೊಲೀಸರೇ ಅವರನ್ನು ಹೋಗಲು ಬಿಡಬೇಡಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು. ಮಹಿಳೆಯೊಬ್ಬರು ಹೋಗುವುದನ್ನು ನೋಡಿ ಅವರು ಅರ್ಜೆಂಟಲ್ಲಿ ಇರಬೇಕು ಅವರನ್ನು ಬಿಡಿ ಎಂದು ಹೇಳಿದರು.

    ಕೋಮುವಾದವೇ ಅಜೆಂಡಾ: ಬಿಜೆಪಿಯವರಿಗೆ ದೇಶದ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ಕೋಮುವಾದ, ಧರ್ಮದ ವಿಷಬೀಜ ಬಿತ್ತಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇವರು, ಧರ್ಮ ಅವರವರ ಆಯ್ಕೆಗೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಶಾಸನಬದ್ಧರಾಗಿ ಆಯ್ಕೆಯಾದ ಬಿಜೆಪಿಯವರು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸದೇ ಕೋಮುವಾದವನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದರು.

    ಮತದಾರರು ಆಶೀರ್ವದಿಸಬೇಕು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಬರೀ ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವುದನ್ನು ಕಾರ್ಯಕರ್ತರು ಮತದಾರರಿಗೆ ಮನದಟ್ಟು ಮಾಡಬೇಕು. ನದಿ ಯೋಜನೆ, ಬುಲೆಟ್ ರೈಲು ಹೀಗೆ ಎಲ್ಲಾ ಯೋಜನೆಗಳು ಜಾರಿಗೊಳಿಸುವುದಾಗಿ ಹೇಳಿ ವಂಚಿಸಿದ್ದಾರೆ. ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ. ಸಮಾನತೆಯ ಸರ್ಕಾರ ಕೇಂದ್ರದಲ್ಲಿ ಬರಬೇಕಾದರೆ ಕಾಂಗ್ರೆಸ್‌ಗೆ ಮತದಾರರು ಆಶೀರ್ವಾದ ಮಾಡಬೇಕು ಎಂದರು.

    ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ತನ್ವೀರ್ ಸೇಠ್, ದರ್ಶನ್ ಧ್ರುವನಾರಾಯಣ, ಎ.ಆರ್.ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್, ಡಾ.ತಿಮ್ಮಯ್ಯ, ಮಾಜಿ ಸಂಸದರಾದ ಕಾಗಲವಾಡಿ ಶಿವಣ್ಣ, ಎ.ಸಿದ್ದರಾಜು, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕರಾದ ಕಳಲೆ ಎನ್.ಕೇಶವಮೂರ್ತಿ, ಜಿ.ಎನ್.ನಂಜುಂಡಸ್ವಾಮಿ, ಡಾ.ಭಾರತಿಶಂಕರ್, ನರೇಂದ್ರ, ಧರ್ಮಸೇನಾ, ಮುಡಾ ಅಧ್ಯಕ್ಷ ಮರಿಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts