More

    ನಂಜನಗೂಡು ರಸಬಾಳೆಗೆ ರೋಗಬಾಧೆ ತಗುಲದಂತೆ ಕ್ರಮವಹಿಸಿ

    ನಂಜನಗೂಡು: ಭೌಗೋಳಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ ಬೆಳೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಜತೆಗೆ ಸಾಧಕ ಬಾಧಕ ಚರ್ಚೆಗೆ ಮುಂದಾಗಿದ್ದೇವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ತಾಲೂಕಿನ ದೇವರಸನಹಳ್ಳಿಯ ರಮೇಶ್ ಎಂಬುವರ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಂಜನಗೂಡು ರಸಬಾಳೆ, ಬಾಳೆ ಮತ್ತು ತೆಂಗಿನ ಬೆಳೆಯಲ್ಲಿ ವಿನೂತನ ತಂತ್ರಜ್ಞಾನ ಬೇಸಾಯ ಪದ್ಧತಿಗಳ ಬಗ್ಗೆ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

    ಭೌಗೋಳಿಕ ಹಿನ್ನೆನೆಯುಳ್ಳ ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ಹಾಗೂ ನಂಜನಗೂಡು ರಸಬಾಳೆಗೆ ಪುನಶ್ಚೇತನಗೊಳಿಸುವುದು ಸಿಎಂ ಸಿದ್ದರಾಮಯ್ಯ ಅವರ ವಿಶೇಷ ಕಾಳಜಿಯಾಗಿದೆ. ಈ ಕಾರಣಕ್ಕಾಗಿಯೇ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಕೂಡ ಮಾಡಲಾಗಿದೆ. ನಂಜನಗೂಡು ರಸಬಾಳೆಗೆ ತನ್ನದೇ ಆದ ಬೇಡಿಕೆಯಿದೆ. ಆದರೆ ರಸಬಾಳೆ ಫಸಲು ಕೈಸೇರುವ ವೇಳೆಗೆ ತಗುಲುವ ಪನಾಮ ಎನ್ನುವ ರೋಗ ಬಾಧೆಯನ್ನು ತಡೆಗಟ್ಟಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಕೈಸೇರುವಂತಾಗಬೇಕು. ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿ ನೆರವಾಗಲು ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಮುಂದಾಗಲಿದ್ದಾರೆ ಎಂದರು.

    ಇನ್ನು ರಸಬಾಳೆ ಬೆಳೆ ಸೀಮಿತವಾಗಿ ಬೆಳೆಯಲಾಗುತ್ತಿದೆ. ಇದರ ವಿಸ್ತೀರ್ಣವನ್ನು ಹೆಚ್ಚಿಸಬೇಕು. ಜತೆಗೆ ರಸಬಾಳೆಗೆ ಉತ್ತಮ ಮಾರುಕಟ್ಟೆ ಹಾಗೂ ದರ ನಿಗದಿಯಾಗಬೇಕು. ವಿಶೇಷವಾಗಿ ರಸಬಾಳೆ ಬೆಳೆಯುವ ರೈತರೊಂದಿಗೆ ಅಧಿಕಾರಿಗಳು, ವಿಜ್ಞಾನಿಗಳು ನಿರಂತರ ಸಂಪರ್ಕದಲ್ಲಿರಬೇಕು. ಏನೇ ನೆರವು ಅಗತ್ಯವಿದ್ದರೆ ತಕ್ಷಣದಲ್ಲಿ ಸಿಗುವಂತಾಗಬೇಕು. ಆಗ ರೈತರಲ್ಲಿ ರಸಬಾಳೆ ಬೆಳೆಯಲು ಉತ್ತೇಜಿಸಿದಂತಾಗುತ್ತದೆ ಎಂದು ಹೇಳಿದರು.

    ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ವಿಷ್ಣುವರ್ಧನ್ ಮಾತನಾಡಿ, ತಾಲೂಕಿನಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಸತತವಾಗಿ ಭೂಮಿಗೆ ರಾಸಾಯನಿಕ ಬಳಸಿ ಹಾಳುಗೆಡವಲಾಗಿದೆ. ಹೀಗಾಗಿ ರೈತರು ಮಣ್ಣಿಗೆ ಮತ್ತೆ ಜೀವಕಳೆ ಬರುವಂತೆ ಮಾಡಿ ಕೃಷಿ ಮಾಡಬೇಕಾಗಿದೆ. ಸಾವಯವ ಪದಾರ್ಥಗಳಲ್ಲಿ ಸೂಕ್ಷ್ಮ ಜೀವಿಗಳಿವೆ ಭೂಮಿಗೆ ಸಾವಯವ ಅಂಶಗಳನ್ನು ಸೇರಿಸಿ ಫಲವತ್ತತೆ ಹೆಚ್ಚಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ರಸಬಾಳೆ ಬೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

    ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತೋಟಗಾರಿಕೆ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ನಾಗರಾಜ್, ಉಪ ನಿರ್ದೇಶಕ ಮಂಜುನಾಥ್, ಆಕಾಶವಾಣಿ ನಿಲಯದ ಸಂಯೋಜಕ ಕೇಶವಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ವೆಂಕಟೇಶ್, ಸದಸ್ಯ ಗೋವರ್ಧನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts