More

    ಮಂಗಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಿ

    ರೋಣ: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಬುಧವಾರ ನಡೆದ ರೋಣ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಜಯವಾಣಿಯ ವರದಿ ಪ್ರತಿಧ್ವನಿಸಿತು.

    ಸಭೆ ಆರಂಭವಾಗುತ್ತಿದ್ದಂತೆಯೆ ಪುರಸಭೆ ವಿರೋಧ ಪಕ್ಷದ ನಾಯಕ ಸಂಗಪ್ಪ ಜಿಡ್ಡಿಬಾಗಿಲ, ಫೆ. 23ರ ‘ವಿಜಯವಾಣಿ’ ಯಲ್ಲಿ ಪ್ರಕಟವಾದ ‘ಮಂಗಗಳ ಕಾಟ, ಜನರಿಗೆ ಪ್ರಾಣ ಸಂಕಟ’ ವರದಿಯ ವಿಷಯ ಪ್ರಸ್ತಾಪಿಸಿದರು.

    ಬಸ್ ನಿಲ್ದಾಣ ಸೇರಿ ವಿವಿಧ ಬಡಾವಣೆಗಳಲ್ಲಿ ತಂಡೋಪತಂಡವಾಗಿ ಮಂಗಗಳು ಬೀಡುಬಿಟ್ಟಿವೆ. ಇವುಗಳ ಉಪಟಳದಿಂದ ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಅನಾಹುತ ಆಗುವ ಮೊದಲೇ ಎಚ್ಚರಗೊಳ್ಳಬೇಕಿದ್ದ ಅರಣ್ಯ ಇಲಾಖೆಯವರು ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತಿದ್ದಾರೆ. ಇನ್ನೂ ಪುರಸಭೆಯವರು ಇದು ವಲಯ ಅರಣ್ಯ ಇಲಾಖೆಯ ಜವಾಬ್ದಾರಿ ಎನ್ನುತ್ತಿದ್ದಾರೆ. ಇಬ್ಬರ ನಡುವೆ ಕೂಸು ಬಡವಾಯಿತು ಎನ್ನುವ ಸ್ಥಿತಿ ರೋಣದ ಸಾರ್ವಜನಿಕರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಈ ಬಗ್ಗೆ ನಾನು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ನೀವು ಮಂಗಗಳನ್ನು ಹಿಡಿದುಕೊಡಿ ನಾವು ಕಾಡಿಗೆ ಬಿಟ್ಟು ಬರುತ್ತೇವೆ ಎನ್ನುತ್ತಿದ್ದಾರೆ ಎಂದರು. ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಸಂಗನಗೌಡ, ಮಂಗಗಳನ್ನು ನಾವೇ ಹಿಡಿದು ಕಪ್ಪತಗುಡ್ಡದ ಕಾಡಿಗೆ ಬಿಡಬೇಕು. ಎರಡು ದಿನಗಳಲ್ಲಿ ಮಂಗ ಹಿಡಿಯುವವರನ್ನು ಕರೆಯಿಸಿ ಎಂದು ಸೂಚಿಸಿದರು.

    ಸಂತೋಷ ಕಡಿವಾಲ ಮಾತನಾಡಿ, ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳ 2019-20ನೇ ಸಾಲಿನ ಪುರಸಭೆಯಿಂದ ವಿದ್ಯಾರ್ಥಿ ವೇತನ ನೀಡುವಂತೆ ಪುರಸಭೆ ಸಿಬ್ಬಂದಿಗೆ ಕೇಳಿದರೆ, ನಿಮ್ಮ ವಿದ್ಯಾರ್ಥಿ ವೇತನ ನೀಡಲು ಇನ್ನು ಟೈಂ ಕೂಡಿ ಬಂದಿಲ್ಲ ಎನ್ನುತ್ತಿದ್ದಾರೆ. ಟೈಂ ಕೂಡಿ ಬರಬೇಕಾದರೆ ಏನು ಮಾಡಬೇಕು ಎನ್ನುವುದನ್ನು ತಿಳಿಸಿ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸಿಬ್ಬಂದಿಗೆ ತಿಳಿ ಹೇಳುತ್ತೇನೆ ಎಂದರು.

    ಪಟ್ಟಣದ ಬಹುತೇಕ ಸ್ಟ್ರೀಟ್ ಲೈಟ್​ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗದಿಗೆಪ್ಪ ಕಿರೇಸೂರ ಹೇಳಿದರು. 20ನೇ ವಾರ್ಡಿನ ಕೃಷ್ಣಾಪೂರ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಗ್ರಾಮಸ್ಥರು ಬಯಲು ಶೌಚಕ್ಕೆ ಹೋಗುವುದನ್ನು ತಪ್ಪಿಸಲು ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ ಜಮೀನು ಖರೀದಿಸಲು ಸದಸ್ಯರು ಒಮ್ಮತದ ನಿರ್ಣಯ ತೆಗೆದುಕೊಂಡರು. ಪುರಸಭೆ ಅಧ್ಯಕ್ಷೆ ವಿದ್ಯಾ ದೊಡ್ಡಮನಿ, ಸದಸ್ಯರಾದ ದಾವಲ್​ಸಾಬ್ ಬಾಡಿನ್, ಹನುಮಂತ ತಳ್ಳಿಕೇರಿ, ಬಾವಾಸಾಬ್ ಬೆಟಗೇರಿ ಇದ್ದರು.

    ವಿದ್ಯುದ್ದೀಪ ಅಳವಡಿಸಿ

    ಸಾಧು ಅಜ್ಜನ ಬಡಾವಣೆಯಲ್ಲಿರುವ ಏಕೈಕ ಉದ್ಯಾನ ಕುಡುಕರ ಅಡ್ಡೆಯಾಗಿದೆ. ಇದಕ್ಕೆ ವಿದ್ಯುದ್ದೀಪ ಅಳವಡಿಸಬೇಕು ಎಂದು ಸಾಕಷ್ಟು ಬಾರಿ ವಿನಂತಿಸಿಕೊಳ್ಳಲಾಗಿದ್ದರೂ ವಿದ್ಯುದ್ದೀಪ ಅಳವಡಿಸುತ್ತಿಲ್ಲ ಎಂದು ವಿಜಯ ಗಡಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ವಿದ್ಯುದ್ದೀಪ ಹಾಕಲು ಸೂಚಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts