More

    ಕೋವಿಡ್‌ನಿಂದ ಅನಾಥವಾಗಿರುವ ಮಗುವನ್ನು ದತ್ತು ಪಡೆಯುವ ಹಂಬಲವೆ? ಹಾಗಿದ್ದರೆ ಇದನ್ನೊಮ್ಮೆ ಓದಿ…

    ಕರೊನಾದಿಂದ ಅಪ್ಪಅಮ್ಮನನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ತಬ್ಬಲಿಗಳಾಗಿದ್ದಾರೆ. ಮಕ್ಕಳಿಲ್ಲದ ದಂಪತಿಗಳು ಈ ಕಂದಮ್ಮಗಳನ್ನು ದತ್ತು ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ದತ್ತು ನೀಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೋಸ ಮಾಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ದತ್ತು ಪಡೆಯುವವರು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಇದಕ್ಕಿರುವ ನಿಯಮಗಳೇನು, ಪ್ರಕ್ರಿಯೆ ಹೇಗೆ ಎಂಬುದರ ಕುರಿತು ಇಲ್ಲಿದೆ ವಿವರ.

     

    | ಸುಚೇತನಾ ನಾಯ್ಕ
    ಅಪ್ಪಅಮ್ಮ ಕರೊನಾದಿಂದ ಶವವಾಗಿ ಮಲಗಿದ್ದಾರೆ. ಅವರ ನಾಲ್ಕೈದು ತಿಂಗಳ ಕಂದಮ್ಮ ಮಾತ್ರ ಏನೂ ಅರಿಯದೆ ಅಲ್ಲಿಯೇ ಆಟವಾಡಿಕೊಂಡಿದೆ. ಚಾಮರಾಜನಗರದ ಈ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು… ಇದನ್ನು ನೋಡಿದವರು ಕಂಬನಿ ಸುರಿಸಿದರೆ, ಕಂದನಿಗಾಗಿ ಹಂಬಲಿಸುತ್ತಿದ್ದ ಎಷ್ಟೋ ಮಹಿಳೆಯರಿಗೆ ಈ ಮಗುವನ್ನು ನಾವು ದತ್ತು ಪಡೆಬಹುದಲ್ಲವೆ ಎಂದು ಅನಿಸಿದ್ದಂತೂ ಸುಳ್ಳಲ್ಲ. ಕರೊನಾದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಇಂಥ ದೃಶ್ಯಗಳು ಈಗ ಮಾಮೂಲಿಯಾಗಿಬಿಟ್ಟಿವೆ. ಪಾಲಕರನ್ನು ಕಳೆದುಕೊಂಡು ತಬ್ಬಲಿಯಾಗಿರುವ ಮಕ್ಕಳಿಗೆ ಲೆಕ್ಕವಿಲ್ಲ. ದಿನನಿತ್ಯ ಹೆಣದ ರಾಶಿಯಲ್ಲಿ, ತಬ್ಬಲಿ ಮಕ್ಕಳ ಕಣ್ಣೀರು ಕಾಣಿಸದೇ ಹೋಗುವಷ್ಟು ಘಟನೆಗಳು ನಡೆಯುತ್ತಿವೆ. ಸದ್ಯಕ್ಕೆ ಇಂಥ ಮಕ್ಕಳು ಸರ್ಕಾರದ ಸುಪರ್ದಿಯಲ್ಲಿದ್ದಾರೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬಾಲಮಂದಿರ, ಶಿಶುಮಂದಿರ ಮತ್ತು ವಿಶೇಷ ದತ್ತು ಸಂಸ್ಥೆಗಳನ್ನು ಜಿಲ್ಲೆಗಳಲ್ಲಿ ಇಂಥ ಮಕ್ಕಳಿಗಾಗಿ ನಡೆಸುತ್ತಿದ್ದು, ಅವಶ್ಯವಿರುವ ಪಾಲನೆ- ರಕ್ಷಣೆಯನ್ನು ಒದಗಿಸಲಾಗುತ್ತಿದೆ.

    ಇವುಗಳ ಮಧ್ಯೆಯೇ ಅನಾಥ ಮಕ್ಕಳನ್ನು ದತ್ತು ನೀಡುವ ಹೆಸರಿನಲ್ಲಿ ದೊಡ್ಡ ದಂಧೆಯೇ ಶುರುವಾಗಿದೆ. ‘ಕೋವಿಡ್​ನಿಂದ ಮೃತಪಟ್ಟ ಪಾಲಕರ ಅನಾಥ ಮಕ್ಕಳನ್ನು ದತ್ತು ನೀಡಲಾಗುವುದು’ ಎಂಬ ಸಂದೇಶಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಲಕ್ಷಾಂತರ ರೂಪಾಯಿ ಮೋಸ ಮಾಡಲಾಗುತ್ತಿದೆ. ಕಂದ ಸಿಗುವ ಆಸೆಗೆ ಹಣ ಕೊಟ್ಟು ಮೋಸ ಹೋದವರೂ ಇದ್ದಾರೆ.

    ಇಂಥ ಸಂದೇಶಗಳಿಗೆ ಕಿವಿಕೊಡಬೇಡಿ ಎನ್ನುತ್ತಾರೆ ಅಧಿಕಾರಿಗಳು ಹೇಳಿದ್ದಾರೆ. ನಿಜವಾಗಿಯೂ ಮಕ್ಕಳನ್ನು ದತ್ತು ಪಡೆಯುವ ಆಸೆಯಿದ್ದರೆ, ಅವುಗಳಿಗಾಗಿ ಕೆಲವು ಕಾನೂನುಗಳು, ನಿಯಮಗಳೂ ಇದ್ದು, ಅವುಗಳನ್ನು ಪಾಲಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕೃತ ವೆಬ್​ಸೈಟ್ www.icps.karnataka.gov.in ಸಂಪರ್ಕಿಸಬಹುದಾಗಿದೆ.

    ಸಹಾಯವಾಣಿ

    ಕೋವಿಡ್​ನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ದತ್ತು ನೀಡುವುದಾಗಿ ಹೇಳಿ ಯಾರಾದರೂ ಹಣಕ್ಕೆ ಬೇಡಿಕೆ ಇಡುತ್ತಿದ್ದರೆ ಕೂಡಲೇ ಮಕ್ಕಳ ಸಹಾಯವಾಣಿಯ ದೂರವಾಣಿ ಸಂಖ್ಯೆ 1098 ಸಂರ್ಪಸಿ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಕಲ್ಯಾಣ ಸಮಿತಿಗಳಿದ್ದು ಅವುಗಳನ್ನು ಸಂರ್ಪಸಿ. ಆಪ್ತಸಮಾಲೋಚನೆಗಾಗಿ 14499 ಸಂರ್ಪಸಬಹುದು.

    ಪ್ರಕ್ರಿಯೆ ಹೇಗೆ?

    ದತ್ತು ಪಡೆಯಲು ಇಚ್ಛಿಸುವ ದಂಪತಿ ಕೇಂದ್ರ ಸರ್ಕಾರದ ಅಧಿಕೃತ ವೆಬ್​ಸೈಟ್ www.cara.nic.in ಕ್ಲಿಕ್ಕಿಸಿ. ಅಲ್ಲದೆ ವಿಶೇಷ ದತ್ತು ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳನ್ನು ಕೂಡ ಸಂರ್ಪಸಬಹುದು. ಇನ್ನು ಯಾವುದೇ ಮಕ್ಕಳನ್ನು ದತ್ತು ಪಡೆಯುವುದಕ್ಕೂ ಮೊದಲು ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು. ನಂತರ ಮಕ್ಕಳನ್ನು ವಿಶೇಷ ದತ್ತು ಸಂಸ್ಥೆಗಳಿಗೆ ದಾಖಲು ಮಾಡಲಾಗುತ್ತದೆ. ಮಗುವಿಗೆ ಪೋಷಕರು ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡ ಬಳಿಕ ಮಗುವನ್ನು ವಿಶೇಷ ದತ್ತು ಸಂಸ್ಥೆಗಳ ಮೂಲಕ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಂಡು ದತ್ತು ಪಡೆಯಬಹುದು.

    ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

    ದತ್ತು ನಿಯಮಗಳನ್ನು ಉಲ್ಲಂಘಿಸುವುದು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 81ರನ್ವಯ ಶಿಕ್ಷಾರ್ಹ ಅಪರಾಧ. ಮಗುವನ್ನು ಕೊಳ್ಳುವವರು ಹಾಗೂ ಮಾರುವವರು ಇಬ್ಬರಿಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆ ಇದೆ.

    ದತ್ತಕ ಕಾಯ್ದೆ ಯಾರಿಗೆ ಹೇಗೆ ಅನ್ವಯ?

    – ಭಾರತದಲ್ಲಿ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಲ ನ್ಯಾಯ (ಜುವೆನೈಲ್ ಜಸ್ಟಿಸ್- ಜೆಜೆ) ಕಾಯ್ದೆ 2000 ಮತ್ತು ಹಿಂದೂ ದತ್ತು ಮತ್ತು ನಿರ್ವಹಣಾ (ಹಾಮಾ) ಕಾಯ್ದೆಗಳು ಜಾರಿಯಲ್ಲಿವೆ.

    – ಪರಿಚಯಸ್ಥಯರಲ್ಲಿ ಅಥವಾ ಕುಟುಂಬದ ಸದಸ್ಯರಲ್ಲಿ ಮಕ್ಕಳನ್ನು ದತ್ತು ಪಡೆಯುವುದು ಅಥವಾ ಕೊಡುವ ಪ್ರಕ್ರಿಯೆ ನಡೆಸುವುದಿದ್ದರೆ ‘ಹಾಮಾ’ ಕಾಯ್ದೆ ಅನ್ವಯ ಆಗುತ್ತದೆ. ಇದು ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಸಮುದಾಯದವರಿಗೆ ಮಾತ್ರ ಅನ್ವಯವಾಗುತ್ತದೆ. ಮುಸ್ಲಿಂ, ಪಾರ್ಸಿ, ಕ್ರೖೆಸ್ತರಿಗೆ ಅನ್ವಯ ಆಗುವುದಿಲ್ಲ.

    – ಒಂದು ವೇಳೆ ದತ್ತು ಕೇಂದ್ರಗಳಿಂದ ಮಕ್ಕಳನ್ನು ದತ್ತು ಪಡೆಯುವುದಿದ್ದರೆ ಎಲ್ಲಾ ಧರ್ವಿುಯರಿಗೂ ‘ಬಾಲ ನ್ಯಾಯ ಕಾಯ್ದೆ’ ಅನ್ವಯ ಆಗುತ್ತದೆ. ಬಾಲನ್ಯಾಯ ಕಾಯ್ದೆಯಡಿ ಅನಾಥರು, ತಂದೆ ತಾಯಿ ಬಿಟ್ಟು ಹೋದ ಹಾಗೂ ದತ್ತು ನೀಡುವ ಉದ್ದೇಶಕ್ಕೆ ಬಿಟ್ಟು ಹೋದ ಮಕ್ಕಳು, ಗಂಡ ಹೆಂಡತಿಯ ಅಣ್ಣ-ತಮ್ಮ, ಅಕ್ಕ-ತಂಗಿ ಅಥವಾ ಅಜ್ಜ-ಅಜ್ಜಿಯರ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇದೆ.

    – ‘ಹಾಮಾ’ ಕಾಯ್ದೆಯಡಿ ದತ್ತು ಪಡೆಯಲು ಬಯಸುವವರು ಒಂದೇ ಲಿಂಗದ ಮಗುವನ್ನು ದತ್ತು ಪಡೆಯಲು ಅವಕಾಶ ಇಲ್ಲ. ಉದಾಹರಣೆಗೆ, ದತ್ತು ಪಡೆಯಲು ಇಚ್ಛಿಸುವವರಿಗೆ ಹೆಣ್ಣು ಮಗು ಇದ್ದರೆ ಅವರು ಮತ್ತೊಂದು ಹೆಣ್ಣು ಮಗುವನ್ನು ಹಾಗೂ ಗಂಡು ಮಗುವಿದ್ದರೆ ಮತ್ತೊಂದು ಗಂಡು ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ. ಆದರೆ ಬಾಲನ್ಯಾಯ ಕಾಯ್ದೆಯಡಿ ಇದಕ್ಕೆ ಅವಕಾಶ ಇದೆ.

    – ‘ಹಾಮಾ’ ಕಾಯ್ದೆಯಡಿ ಗಂಡಸರು ಹೆಣ್ಣು ಮಗುವನ್ನು ಹಾಗೂ ಹೆಂಗಸರು ಗಂಡು ಮಗುವನ್ನು ದತ್ತಕಕ್ಕೆ ಪಡೆಯುವುದಿದ್ದರೆ ಇಬ್ಬರ ನಡುವೆ 25 ವರ್ಷಗಳ ಅಂತರ ಇರಬೇಕು. ಅದೇ ರೀತಿ, ‘ಹಾಮಾ’ ಕಾಯ್ದೆಯಡಿ 18 ವರ್ಷಕ್ಕಿಂತ ಒಳಗಿರುವ ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು.

    – ದತ್ತು ಪಡೆದ ಮಕ್ಕಳನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗುವುದಿದ್ದರೆ ವಿದೇಶಿ ದತ್ತು ಕೇಂದ್ರವನ್ನು ಸಂರ್ಪಸಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಸಂಬಂಧಿತ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮಕ್ಕಳನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗುವ ಅವಕಾಶ ಇರುವುದಿಲ್ಲ. ಅದೇ ರೀತಿ, ಮಾನ್ಯತೆ ಪಡೆದ ದತ್ತು ಕೇಂದ್ರಗಳ ಹೊರತಾಗಿ ನರ್ಸಿಂಗ್ ಹೋಮ್ವರು ಅಥವಾ ಇನ್ಯಾರಾದರೂ ದತ್ತು ನೀಡಿದರೆ ಅಂಥವರಿಗೆ ಬಾಲ ನ್ಯಾಯ ಕಾಯ್ದೆಯ 80ನೇ ಕಲಮಿನ ಅಡಿ ಗರಿಷ್ಠ ಏಳು ವರ್ಷಗಳ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿಯವರೆಗೆ ದಂಡ ವಿಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ.

    – ಒಂದು ವೇಳೆ ದತ್ತು ಪಡೆದುಕೊಂಡಿರುವ ಮಗು ಕುಟುಂಬದ ಜತೆ ಹೊಂದಿಕೊಳ್ಳಲು ಕಷ್ಟವಾದರೆ ದತ್ತು ಪ್ರಕ್ರಿಯೆಯನ್ನು ರದ್ದು ಮಾಡುವ ಅವಕಾಶ ಇದೆ.

    – ಬಾಲ ನ್ಯಾಯ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದು, ದತ್ತು ಪಡೆಯುವ ಪ್ರಕ್ರಿಯೆಯನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲಾಗಿದೆ. ಈ ವ್ಯವಸ್ಥೆಯಲ್ಲಿ ದತ್ತು ಪಡೆಯಲು ಇಚ್ಛಿಸುವವರು ತಮ್ಮ ಮಾಹಿತಿಯನ್ನು ಆನ್​ಲೈನ್​ನಲ್ಲಿ ನೋಂದಾಯಿಸಿ, ಲಭ್ಯವಿರುವ ಮಕ್ಕಳ ಮಾಹಿತಿಯನ್ನು ಪಡೆಯಬಹುದು. ಒಮ್ಮೆ ಲಾಗಿನ್ ಮಾಡಿದಾಗ ಗರಿಷ್ಠ ಮೂರು ಮಕ್ಕಳ ಚಿತ್ರ ಹಾಗೂ ಮಾಹಿತಿ ಪಡೆಯುವ ಅವಕಾಶ ಲಭ್ಯ.

    – ಒಂಟಿ ಪುರುಷರು ಹೆಣ್ಣುಮಗುವನ್ನು ದತ್ತು ಪಡೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts